Advertisement

‘ಆ’ಮೂರು ಅವಶ್ಯಕ; ಆರೋಗ್ಯ, ಆಹಾರ, ಆಯಸ್ಸು

07:31 PM Jun 07, 2020 | Hari Prasad |

ಕಳೆದ ವರ್ಷ ಸಿಂಗಾಪುರ್‌ನಲ್ಲಿ ಭಾರತಿಯ ಮೂಲದ ಶ್ರೀಮಂತ ವ್ಯಕ್ತಿಯೊಬ್ಬರ ಕಿರಿ ವಯಸ್ಸಿನ ಮಗ ಮಾನಸಿಕ ರೋಗದಿಂದ ತೀರಿಹೋದ.

Advertisement

ಅದಕ್ಕೆ ಕಾರಣ ಎಲ್ಲವೂ ಮನೆಯಲ್ಲೇ ಇತ್ತು. ಮನೆಯಲ್ಲೇ ಸಕಲ ಸೌಲಭ್ಯಗಳಿದ್ದವು.

ಅಪ್ಪ-ಅಮ್ಮ ಮತ್ತೆ ಆ ಮಗು ಮೂರು ಜನರಿಗೆ ದೊಡ್ಡ ಮನೆ, ಮನೆಯ ಸುತ್ತ ವಿಶಾಲವಾದ ಗಾರ್ಡನ್‌, ಸ್ವಿಮ್ಮಿಂಗ್‌ ಪೂಲ್‌, ಆಟದ ಸಾಮಗ್ರಿಗಳು, ಸೈಕಲ್‌ನಲ್ಲೇ ಮನೆ ಸುತ್ತ ಸುತ್ತಬಹುದಾದ ವಿಶಾಲವಾದ ಕಾಂಪೌಂಡ್‌. ಒಂದು ಕರೆ ಮಾಡಿದರೆ ಸಾಕು ಬೇಕಾದ ತಿಂಡಿ ಬೇಕಾದ ಸಮಯಕ್ಕೆ ಬರುತ್ತಿತ್ತು. ಮನೆಯಲ್ಲಿ ಟಿ.ವಿ., ವೀಡಿಯೋ ಗೇಮ್‌. ಪರಿಣಾಮವಾಗಿ ಮನೆಯೇ ಒಂದು ಪುಟ್ಟ ಪ್ರಪಂಚ. ಹೊರಗಿನ ಪ್ರಪಂಚದ ಅರಿವಿನ ಅವಶ್ಯಕತೆಯೇ ಇಲ್ಲ ಎಂಬುವಂತೆ ಮಗನನ್ನು ಬೆಳೆಸುತ್ತಿದ್ದರು.

ಪರಿಸರದ ಪರಿಚಯವೇ ಇಲ್ಲದೆ ಯಂತ್ರವಾಗಿ ಬದುಕಿ ವೀಡಿಯೋ ಗೇಮ್‌ ಜತೆ ಕಾಲ ಕಳೆಯುತ್ತಿದ್ದ ಹುಡುಗ ಒಂಟಿತನದ ಬಂಧನದಲ್ಲಿ ಸಿಲುಕಿ ಅವಸರದಲ್ಲಿ ಜೀವನ ಕಳೆದುಕೊಂಡ. ಆಫೀಸ್‌ನಿಂದ ಬಂದ ತಂದೆ ತಾಯಿ ಮಗ ಹೆಣವಾಗಿದ್ದಕ್ಕೆ ಕಾರಣವೇ ತಿಳಿದಿರಲಿಲ್ಲ. ಕಾಲ ಕಳೆದಂತೆಲ್ಲಾ ತಮ್ಮ ತಪ್ಪು ಅವರಿಗೆ ಅರಿವಾಯ್ತು. ಪ್ರೀತಿ ಜಾಸ್ತಿಯಾದ್ರೂ ಬಂಧನವೇ. ಮಕ್ಕಳಿಗೆ ಬೇಕಾದ ಅವಶ್ಯಕತೆಗಳನ್ನು ಪೊರೈಸುವುದಷ್ಟೆ ಕರ್ತವ್ಯ ಅಂದುಕೊಂಡ್ರೆ ಅದು ಮೂಢತನ. ಮಕ್ಕಳು ಮನೆಯಲ್ಲಿ ವ್ಯವಸ್ಥಿತ ಬದುಕು ಕಲಿಯಬಹುದು. ಆದರೆ ಅವರು ಬೆಳೆಯುವುದು ಪ್ರಪಂಚದಲ್ಲೇ.

ಅನುಕೂಲವಿದ್ದವರು ಮಿತಿಯಿಲ್ಲದೆ ರುಚಿ ರುಚಿಯಾದ ಆಹಾರ ಪೊರೈಸಿ ಆಕಾರದಲ್ಲಿ ಹೇಗಾದರೂ ಬೆಳೆಸಬಹುದು. ಆದರೆ ಮಾನಸಿಕವಾಗಿ ಬೆಳೆಯಬೇಕಾದರೆ ಮಿತಿಯಾಗಿ ಭಾವನೆಗಳ ಅವಶ್ಯವಿದೆ, ಸೋಲು-ಗೆಲುವು, ಸುಖ-ದುಃಖ, ಕುತೂಹಲ, ತೃಪ್ತಿ-ಅತೃಪ್ತಿ, ತಾಳ್ಮೆ ಇವೆಲ್ಲವೂ ಸಮತೊಲನವಾಗಿದ್ದರೆ ಮಾತ್ರ ಮಕ್ಕಳ ಬೆಳವಣಿಗೆ ಪ್ರಪಂಚದ ಜತೆ ಪರಿಪೂರ್ಣವಾಗುತ್ತದೆ

Advertisement

ಪರಿಸರದೊಂದಿಗೆ ಬೆಳೆದ ಮಗುವಿಗೆ ಜೀವನ ತಿಳಿದಿರುತ್ತದೆ. ಬೀಜ ಮೊಳಕೆಯೊಡೆದು ಬಂದ ಚಿಗುರಿನ ಸೌಂದರ್ಯ. ಮೊನ್ನೆ ಹೂವಾಗಿ ಓಣಗಿದ್ದ ಗಿಡದಲ್ಲಿ ಇಂದು ಹಣ್ಣು ಕವಲೊಡೆಯುವ ಖುಷಿ, ಗೆಳೆಯರ ಜತೆ ಆಡಿದ ಆಟದಲ್ಲಿ ಸೋತ ನೋವು, ಗೆದ್ದ ಖುಷಿ. ಗಾಯಕ್ಕೆ ಹಚ್ಚಿದ ಎಂಜಲು, ರಸ್ತೆಯಲ್ಲಿ ವ್ಯಾಪಾರಸ್ತರ ಚೌಕಾಸಿ, ಬಸ್‌ ರೈಲುಗಳಲ್ಲಿನ ಜನರ ಅವಸರ, ಆಸ್ಪತ್ರೆಯಲ್ಲಿ ಜೀವದ ಜತೆ ಹೋರಾಟ, ಕಳೆದುಕೊಂಡ ನೋವು, ಪಡೆದುಕೊಂಡ ಖುಷಿ, ಸಂತಾಪ, ಸಹಾಯ ಇವೆಲ್ಲವೂ ಹಿತಮಿತವಾಗಿ ಇದ್ದಷ್ಟು ಮಕ್ಕಳನ್ನು ಮಾನಸಿಕವಾಗಿ ಆರೋಗ್ಯವಂತನಾಗಿಸುತ್ತವೆ.

ದುಡ್ಡಿನ ಹಿಂದೆ ಓಡಾಡುವ ಅವಸರದಲ್ಲಿ ಮನೆ, ಸಂಬಂಧ, ಆರೋಗ್ಯಕ್ಕೆ ಸಮಯ ಕೊಡಲಾಗದೆ ಪರಿತಪಿಸುತ್ತಾರೆ. ಬೆವರು ಬರಬಾರದು ಎಂದು ಎ.ಸಿ. ರೂಮ್‌ನಲ್ಲಿ ದಿನ ಕಳೆದು, ಬೆವರಿನಿಂದ ಬೊಜ್ಜು ಕರಗಲಿ ಅಂತ ಬೆಳಗ್ಗೆ ಟಿ-ಶರ್ಟು, ಚಡ್ಡಿ, ನ್ಪೋರ್ಟ್ಸ್ ಶೂ ಹಾಕಿಕೊಂಡು ಓಡುತ್ತೇವೆ. ವಾರದ ಐದು ದಿನವೆಲ್ಲ ಹಸಿವಿನ ನೆಪಕ್ಕೆ ನಾಲಿಗೆಯ ಮಾತು ಕೇಳಿ ಜಂಕ್‌ ಫ‌ುಡ್‌, ರೆಡಿಮೇಡ್‌ ಫ‌ುಡ್‌ ತಿಂದು ವಾರದ ಕೊನೆಯ ಎರಡು ದಿನ ಹೊಟ್ಟೆಯಲ್ಲಿ ಜಿಡ್ಡುಗಟ್ಟಿ ಹರಡಿದ ಕೊಬ್ಬಿಗೆ ಮೋಕ್ಷ ಕೊಡಲು ವ್ಯಾಯಾಮ.

ವಯಸ್ಸಾದ ಮೇಲೆ ವಿಚಿತ್ರವಾದ ಶಸ್ತ್ರ ಚಿಕಿತ್ಸೆ, ಉಪ್ಪು ತರಕಾರಿಯ ಪಥ್ಯಗಳ ಮೊರೆ ಹೋಗುತ್ತೇವೆ. ಇವುಗಳು ಆಯಸ್ಸನ್ನು ಮುಂದೂಡಿಸಬಹುದೆ ಹೊರತು ಆರೊಗ್ಯವಂತನನ್ನಾಗಿ ಮಾಡುವುದಿಲ್ಲ. ಮೊದಲೇ ವ್ಯಾಯಾಮ ಮತ್ತು ಆಹಾರದಲ್ಲಿ ಹಿಡಿತವಿಟ್ಟುಕೊಂಡು ಬಂದರೆ, ಕೊನೆ ಘಳಿಗೆಯಲ್ಲಿ ಯಾರ ಸಹಾಯವೂ ಇಲ್ಲದೆ ತನಗೆ ತಾನೆ ಎದ್ದು ಕೂಡುವಷ್ಟು ಸಾಮರ್ಥ್ಯವೂ ಇರುತ್ತದೆ. ಹಿಡಿ ಹಿಡಿ ಮಾತ್ರೆ ಕರಗಿಸುವ ತಾಪತ್ರಯವೂ ತಪ್ಪುತ್ತೆ.

ಇತ್ತೀಚಿಗೆ ಆಹಾರ ಸೇವಿಸುವುದರಲ್ಲಿ ಇರುವ ಶಿಸ್ತು ಆಹಾರ ತಯಾರಿಸುವಲ್ಲಿ ಮರೆಯಾಗುತ್ತಿದೆ. ರುಚಿ ಇರುವುದೇ ಇಲ್ಲ. ರುಚಿ ಇಲ್ಲದಿದ್ದರೂ ಬಿಡಲು ಆಗುವುದಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಅವಸರದಲ್ಲಿ ನುಂಗಿ ಮತ್ತೆ ಟ್ರೈನು, ಬಸ್‌ ಹಿಡಿಯಲು ಓಡುತ್ತೇವೆ. ಕೆಲವೊಂದೆಡೆ ಹುಡುಗಿಗೆ ಸರಿಯಾಗಿ ಅಡುಗೆ ಬರಲ್ಲ ಅಂತ ಜಗಳವಾಗಿ ಮದುವೆಯಾದ ಕೆಲವೆ ತಿಂಗಳಿಗೆ ಡಿವೊರ್ಸಗೆ ಅಪ್ಲೈ ಆಗಿದ್ದನ್ನು ನೋಡಿರುತ್ತೇವೆ. ಯೂಟ್ಯೂಬ್‌ ಚಾನೆಲ್‌ ನೋಡಿ ಅಡುಗೆ ಬೇಯಿಸಿದರೆ ಅದು ನೋಡಕ್ಕೆ ಚಂದವಾಗಿ ಕಾಣಬಹುದು. ಆದರೆ ಬಾಯಲ್ಲಿ ಇಟ್ಟಾಗ ಅದರ ರುಚಿ ಬೇರೆಯೇ ಇರುತ್ತದೆ. ಪ್ರೀತಿ ಬೆರೆಸಿ ಮಾಡಬೇಕಾದ ಅಡುಗೆಗೆ ಬುದ್ಧಿ ಬಳಸಿ ಬೇಯಿಸುವಂತೆ ಕಾಲವೂ ಬದಲಾಗಿದೆ.

ಈಗ ಅವೆಲ್ಲವೂ ಅವಸರದಲ್ಲಿ ಅವಸರವಾಗಿಯೇ ಆಗಬೇಕು. ಅದಕ್ಕೆ ಈಗಿನವರಿಗೆ ಆಯಸ್ಸು ಕೂಡಾ ಅವಸರದಲ್ಲಿಯೇ ಕಳೆದು ಹೋಗ್ತಿದೆ. ಎಲ್ಲವೂ ಹಿಡಿತದಲ್ಲಿ ಹಿತಮಿತವಾಗಿ ಇದ್ದರೆ ಕೊನೆಯವರೆಗೂ ಚೆನ್ನಾಗಿಯೇ ಇರುತ್ತದೆ. ಇಲ್ಲವಾದರೆ ವಯಸ್ಸಾದ ಮೇಲೆ ಆಯಸ್ಸು ಶಾಪವೆನಿಸುತ್ತದೆ.

-ಆದರ್ಶ ಖೇದಗಿ, ಪತ್ರಿಕೋದ್ಯಮ ವಿಭಾಗ, ಮಾನಸ ಗಂಗೋತ್ರಿ ಮೈಸೂರು.

Advertisement

Udayavani is now on Telegram. Click here to join our channel and stay updated with the latest news.

Next