ಮಧ್ಯ ಆಫ್ರಿಕಾದ ಒಂದು ದೇಶ “ಗೆಬಾನ್’. ಪಕ್ಕದಲ್ಲಿ ಕಾಂಗೋ ಹಾಗೂ ಇಕ್ವೆಡಾರ್ ದೇಶದ ಗಡಿಗಳನ್ನು ಹಂಚಿಕೊಂಡಿರುವ ಪುಟ್ಟ ದೇಶ. ಆ ದೇಶದ ಕಾಡೊಂದರಲ್ಲಿ “ಕ್ವಿಬಿ’ ಹೆಸರಿನ ಗೊರಿಲ್ಲವೊಂದು ವಾಸಿಸುತ್ತಿದೆ. ಕ್ವಿಬಿಯನ್ನು ಹುಡುಕಿಕೊಂಡು ದೂರದ ಇಂಗ್ಲೆಂಡ್ ದೇಶದಿಂದ ಬಂದವನು ಡೇಮಿಯನ್ ಆಸ್ಪಿನಲ್ ಡೇಮಿಯನ್ ಮಿಲಿಯನೇರ್ ಮತ್ತು ಪರಿಸರ ಸಂರಕ್ಷಕ. ಇಂಗ್ಲೆಂಡಿನ ಗ್ರಾಮವೊಂದರಲ್ಲಿ ಆತನದ್ದೇ ಒಂದು ಪ್ರಾಣಿ ಸಂರಕ್ಷಣಾಲಯವಿದೆ. ಆ ಸಂರಕ್ಷಣಾಲಯದಲ್ಲಿ ಪ್ರಾಣಿಗಳನ್ನು ಆರೈಕೆ ಮಾಡಿ, ಅವುಗಳಿಗೆ ಪುನರ್ವಸತಿ ಕಲ್ಪಿಸಿ, ಪೋಷಿಸಿ ಪ್ರಾಣಿಗಳನ್ನು ತದನಂತರ ಕಾಡುಗಳಿಗೆ ಬಿಡುವುದು ಅವನ ನಿತ್ಯದ ಕಾಯಕಗಳಲ್ಲೊಂದು.
ಕ್ವಿಬಿಯನ್ನು ಕೂಡ ಹೀಗೆ ಚಿಕ್ಕ ಮರಿಯಾಗಿದ್ದಾಗ ಅದನ್ನು ಸಂರಕ್ಷಿಸಿ, ಅದು ಚೇತರಿಸಿಕೊಂಡು 5 ವರ್ಷವಾದ ಮೇಲೆ ಅದನ್ನು ಗೆಬಾನ್ ದೇಶದ ಕಾಡಿಗೆ ಬಿಡಲಾಗಿತ್ತು. ಈಗ ಕ್ವಿಬಿ ತನ್ನ ಹಳೆಯ ದಿನಗಳನ್ನ ಮರೆತು ಕಾಡಿನಲ್ಲಿ ಕಾಡುಪ್ರಾಣಿಯಾಗಿ ಬದಲಾಗಿರುವನು.
ಈಗ ಕ್ವಿಬಿಗೆ 10 ವರ್ಷ. ಹೆಂಡತಿಯರೊಂದಿಗೆ ಸಹಕುಟುಂಬಸಮೇತವಾಗಿ ವನ್ಯಜೀವನದಲ್ಲಿ ಇರುವನು. ಒಂದು ಬಾರಿ ಗೋರಿಲ್ಲಾಗಳನ್ನು ನೋಡಲು ಬಂದ ಇಬ್ಬರ ಪ್ರವಾಸಿಗರ ಮೇಲೆ ದಾಳಿ ಮಾಡಿದ ಆರೋಪ ಬೇರೆ ಕ್ವಿಬಿಯ ಮೇಲಿದೆ.
ಡೇಮಿಯನ್ ತಾನು ಸಲುಹಿದ ಕ್ವಿಬಿಯನ್ನು ನೋಡುವ ಆಸೆಯಿಂದ ಇಂಗ್ಲೆಂಡ್‌ನಿಂದ ಗೆಬಾನ್‌ಗೆ ಬಂದಿದ್ದ. ಕಾಡಿನಲ್ಲಿ ಬಂದವನೆ ಕ್ವಿಬಿಯನ್ನು ಹುಡುಕಲು ಶುರುಮಾಡಿದ. ಆದರೆ ಕ್ವಿಬಿ ಮಾತ್ರ ಗೋಚರಿಸಲೇ ಇಲ್ಲ. ಆದರೆ ಆಸ್ಪಿನಲ್ ಹಟವಾದಿ. ತನ್ನ ಹುಡುಕಾಟವನ್ನು ಕೈಬಿಡಲಿಲ್ಲ.
ಹೀಗೆ ಶೋಧ ನಡೆಸುತ್ತಿರುವಾಗ ದೂರದ ಮರದ ದಿಬ್ಬದ ಮೇಲೆ ಕ್ವಿಬಿ ಕಾಣಿಸಿಕೊಂಡ. ಐದು ವರ್ಷಗಳ ದೀರ್ಘ ಕಾಲದ ಅನಂತರದ ಭೇಟಿ. ಮನುಷ್ಯ ಮನುಷ್ಯನ ನಡುವಿನ ಭೇಟಿಗಿಂತ ಭಿನ್ನ, ವಿಶೇಷ ಈ ಮಿಲನ. ಬಹುಕಾಲದ ಸ್ನೇಹಿತನನ್ನು ನೋಡುವ ತವಕದಂತೆ ಆಸ್ಪಿನಲ್ ಕಣ್ಣಲ್ಲಿ ಭಾವನೆಗಳು ಚಿಮ್ಮುತ್ತಲಿದ್ದವು. ಆದರೆ ಆ ಭಾವನೆಗಳು ಕ್ವಿಬಿಯಲ್ಲಿಯೂ ಇವೆಯಾ?
ಈ ಮೊದಲು ಹೇಳಿದಂತೆ ಇಬ್ಬರು ಪ್ರವಾಸಿಗರ ಮೇಲೆ ಕ್ವಿಬಿ ಆಕ್ರಮಣ ಮಾಡಿದ್ದ. ಡೇಮಿಯನ್ ಆಸ್ಪಿನಲ್‌ನ ಜತೆಗೆ ಬಂದವರು ಭಯದಿಂದಲೇ ತಡವರಿಸುತ್ತಿದ್ದರು. ಆಸ್ಪಿನಲ್ ತಡಮಾಡದೆ ಸ್ವಲ್ಪ ಅಳುಕಿನಿಂದಲೇ ಕ್ವಿಬಿಯ ಪಕ್ಕದಲ್ಲಿ ಹೋಗಿ ಕುಳಿತ. ಕ್ವಿಬಿ ಆತನನ್ನೇ ಕಣ್ಣಲ್ಲಿ ಕಣ್ಣಿಟ್ಟು ನೋಡುತಲಿತ್ತು.
ಆಸ್ಪಿನಲ್ ಸಾಂಕೇತಿಕ ಭಾಷೆಯಲ್ಲಿ ಏನನ್ನೋ ಹೇಳಿದ. ಕ್ವಿಬಿ ಕೂಡ ಅವನ ಜತೆ ಸಂಭಾಷಿಸಲು ಶುರುಮಾಡಿತು. ಹೀಗೆ ಆಸ್ಪಿನಲ್‌ನನ್ನು ನೋಡಿ ತನಗೆ ಆನಂದವಾಗಿದೆಯೆಂದೂ ಮತ್ತು ತನ್ನನ್ನು ಬಿಟ್ಟು ಹೋಗಬಾರದೆಂದೂ ಕ್ವಿಬಿಯ ಕಣ್ಣುಗಳು ಮತ್ತು ಅದರ ಸಾಂಕೇತಿಕ ಭಾಷೆಯನ್ನು ನೋಡಿದ ಯಾರಿಗಾದರೂ ತಿಳಿಯುವಂತಿತ್ತು. ಗೊರಿಲ್ಲಾಗಳು ಮನುಷ್ಯನಂತೆ ಭಾವಜೀವಿಗಳು.
ಸಂಜೆಯ ವರೆಗೂ ಕ್ವಿಬಿಯೊಂದಿಗೆ ಸಮಯ ಕಳೆದ ಆಸ್ಪಿನಲ್ ಸಂಜೆ ಹೊರಡಲು ಅಣಿಯಾದಾಗ ಕ್ವಿಬಿಯದು ಖೇದದ ಸ್ವರ. ಮತ್ತೆ ಬಿಟ್ಟು ಹೋಗಬೇಡ ಎಂಬ ನಿಲುವು. ಆದರೆ ಆಸ್ಪಿನಲ್ ಹೊರಟು ನಿಂತ. ಕ್ವಿಬಿ ಕೂಡ ಆಸ್ಪಿನಲ್ ಹೊರಟ ನಾವೆಯನ್ನೇ ದಿಟ್ಟಿಸಿ ನೋಡುತ್ತ ಕುಳಿತ. ಭಾರದ ಮನಸ್ಸಿನಿಂದ ಕಣ್ತುಂಬಿಕೊಂಡು ಆ ಮೂಕ ಪ್ರಾಣಿಯ ನಿರ್ಮಲ ಪ್ರೀತಿಗೆ ಸೂಕ್ಷ್ಮ¾ ಸಂವೇದನೆಗೆ ಆಸ್ಪಿನಲ್ ಶರಣಾಗಿದ್ದ. ಆ ದಿನ ಅವನ ಜೀವನದಲ್ಲಿಯೇ ಮರೆಯಲಾಗದ ದಿನವಾಗಿತ್ತು.
ಆದರೆ ಕಥೆ ಇಷ್ಟಕ್ಕೆ ಮುಗಿಯಲಿಲ್ಲ. ಮಾರನೇ ದಿನ ಬೆಳಗ್ಗೆ ಮತ್ತೆ ಅದೇ ಜಾಗಕ್ಕೆ ಬಂದು ನೋಡಿದರೆ ಕ್ವಿಬಿ ಹಾಗೇಯೆ ಕುಳಿತಿದ್ದಾನೆ. ಅದೇ ಜಾಗದಲ್ಲಿ.ಆಸ್ಪಿನಲ್ ಬರುವನೆಂದು ಎದುರು ನೋಡುತ್ತಾ…
ಉತ್ಕಟ ಬಾಂಧವ್ಯವನ್ನು ತೋರಿದ ಕಿºಬಿಯ ಬಗೆಗೆ ಆಸ್ಪಿನಲ್ ಏನೆಂದು ಯೋಚಿಸಿರಬಹುದು? ಆ ಕಾಡು ಜೀವಿಯೊಂದು ಅತ್ಯಂತ ಮಾನವೀಯ ಸಂಬಂಧವೊಂದನ್ನು ಇಷ್ಟೊಂದು ಜೀವಂತವಾಗಿಟ್ಟಿದ್ದಕ್ಕೆ ನಾವು ನೀವು ಏನೆನ್ನಬೇಕು? ಮೂಕವಿಸ್ಮಿತರಾಗುವುದೊಂದೆ ನಮ್ಮ ನಿಮ್ಮ ಕೈಲಾಗುವುದು.ಅಷ್ಟೇ! ಪ್ರೀತಿ ತುಂಬಿದ ಹೃದಯ ಯಾವತ್ತಿಗೂ ಪ್ರೀತಿಯನ್ನೇ ಪರಭಾರೆ ಮಾಡುತ್ತದೆ.
ದಕ್ಷಿಣ ಆಫ್ರಿಕಾದ ಕಾಡೊಂದರಲ್ಲಿ ವನ್ಯಜೀವಿ ಸಂರಕ್ಷಕ “ಲಾರೆನ್ಸ್ ಅಂಥೋನಿ’ ಅದೆಷ್ಟೋ ಕಾಡು ಪ್ರಾಣಿಗಳನ್ನು ಉಳಿಸಿ, ಬೆಳೆಸುವಲ್ಲಿ ಮಹತ್ತರವಾದ ಕೆಲಸ ಮಾಡಿದ್ದಂತ ವ್ಯಕ್ತಿ. ಅನೇಕ ಆನೆಗಳನ್ನು ಸಂರಕ್ಷಿಸಿ ಅವುಗಳ ಪಾಲನೆ ಪೋಷಣೆ, ಅವುಗಳ ಸ್ವಾತಂತ್ರ್ಯ ಬದುಕಿಗೆ ಅವಿರತವಾಗಿ ದುಡಿದವರು.
1999ರಲ್ಲಿ ತನ್ನ ಮನೆಯಲ್ಲಿ ಲಾರೆನ್ಸ್ ಸಾವನ್ನ ಪ್ಪಿದ್ದ. ವರ್ಷಗಳ ಹಿಂದೆ ಲಾರೆನ್ಸ್ ರಕ್ಷಿಸಿದ ಆನೆಯ ಗುಂಪೊಂದು ದಿಢೀರನೆ ಲಾರೆನ್ಸ್ ಮನೆಯ ಮುಂದೆ ಪ್ರತ್ಯಕ್ಷವಾದವು. ಮನೆ ಮಂದಿಗೆಲ್ಲ ಆಶ್ಚರ್ಯ! ವಿಷಯ ತಿಳಿಸದೆಯೇ ಆನೆಗಳಿಗೆ ಹೇಗೆ ಲಾರೆನ್ಸ್ ತೀರಿದ ಸುದ್ದಿ ಮುಟ್ಟಿತೋ ಏನೋ? ಆನೆಗಳಿಗೆ ತಮ್ಮನ್ನು ಈ ಹಿಂದೆ ರಕ್ಷಿಸಿದ ವ್ಯಕ್ತಿ ಗತಿಸಿದ ಸುಳಿವನ್ನು ಅದೇಗೆ ಗ್ರಹಿಸಿದವೋ ಏನೊ?
ಲಾರೆನ್ಸ್ ಮನೆ ಮುಂದೆ ಬಂದ ಆನೆಗಳ ಹಿಂಡು ಮನೆಯ ಸುತ್ತಲೂ 2 ದಿನಗಳ ಕಾಲ ನಿಂತು ಕಂಬನಿ ಮಿಡಿದು, ಝೇಂಕರಿಸಿ ಸಂತಾಪ ಸೂಚಿಸಿ 2 ದಿನಗಳ ಅನಂತರ ಹೊರಟು ಹೋದವು. ಪ್ರಾಣಿ ಲೋಕದಲ್ಲಿ ಆನೆಗಳು ಭಾವಜೀವಿಗಳು. ಸೂಕ್ಷ್ಮಸಂವೇದಿಗಳು. ಪ್ರತೀ ಚಲನವಲನಗಳಿಗೂ ಸ್ಪಂದಿಸುತ್ತವೆ. ಆನೆಗಳ-ಮನುಷ್ಯರ ನಡುವಿನ ನಿರಂತರ ಸಂಘರ್ಷಗಳ ನಡುವೆ ಅವಿನಾಭಾವ ಸಂಬಂಧವೊಂದಕ್ಕೆ ದಿಗಂತ ಸಾಕ್ಷಿಯಾಗಿತ್ತು.
ಜಪಾನಿನ ಟೋಕಿಯೋ ಪಟ್ಟಣದ ಯುನಿವ ರ್ಸಿಟಿಯ ಪ್ರೊಫೆಸರ್ ಯುನೊ ಒಂದು ನಾಯಿ ಮರಿಯನ್ನು ಮನೆಗೆ ತಂದು ಹಚ್ಚಿಕೊ ಎಂದು ಹೆಸರಿಟ್ಟಿದ್ದರು. ಶಿಬುಯಾ ಎಂಬ ರೈಲು ನಿಲ್ದಾಣ ದಿಂದ ದಿನಂಪ್ರತಿ ಟೋಕಿಯೋ ಪಟ್ಟಣಕ್ಕೆ ಅವರು ಪ್ರಯಾಣ ಮಾಡುತ್ತಿದ್ದರು.
ಬೆಳಗ್ಗೆ ಯುನಿವರ್ಸಿಟಿಗೆ ಹೊರಡುವಾಗ ದಿನವೂ ಮನೆಯಿಂದ ರೈಲು ನಿಲ್ದಾಣದ ತನಕ ಹಚ್ಚಿಕೊ ಪ್ರೊಫೆಸರ್ ಜತೆಗೆ ಹಜ್ಜೆಹಾಕುತ್ತಿತ್ತು. ಮಧ್ಯಾಹ್ನ ಪ್ರೊಫೆಸರ್ ಕೆಲಸ ಮುಗಿಸಿ ಮನೆಗೆ ಬರುವ ಹೊತ್ತಿಗೆ ಸರಿಯಾಗಿ ಶಿಬುಯಾ ರೈಲು ನಿಲ್ದಾಣಕ್ಕೆ ಹೋಗಿ ತನ್ನ ಮಾಲಕನಿಗಾಗಿ ಕಾಯುತ್ತರುತ್ತಿತ್ತು. ಒಂದು ದಿನ ಯುನಿವರ್ಸಿಟಿಗೆ ಹೋದ ಪ್ರೊಫೆಸರ್ ತಿರುಗಿ ಬರಲೇ ಇಲ್ಲ. ಮೆದುಳಿನ ಪಾರ್ಶ್ವವಾಯು ಸಂಭವಿಸಿ ಪಾಠ ಮಾಡುತ್ತಿರುವಾಗಲೇ ಕೊನೆಯುಸಿರೆಳೆದು ಬಿಟ್ಟಿದ್ದರು. ಈ ವಿಷಯ ಹಚ್ಚಿಕೊಗೆ ತಿಳಿಯುವುದಾದರೂ ಹೇಗೆ…
ದಿನನಿತ್ಯದಂತೆ ಮಧ್ಯಾಹ್ನ ರೈಲು ನಿಲ್ದಾಣಕ್ಕೆ ಬಂದು ಮಾಲಕನ ಆಗಮನವ ಎದುರು ನೋಡುತ್ತಾ ಕಾಯುತ್ತಾ ಕುಳಿತು ಬಿಟ್ಟಿತು. ಆದರೆ ಪ್ರೊಫೆಸರ್ ಮಾತ್ರ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು. ಆದರೇನಂತೆ ಹಚ್ಚಿಕೊ ಮಾತ್ರ ತನ್ನ ಒಡೆಯ “ಯುನೊ’ ಬರುವನೆಂದು ಕಾಯುತ್ತಲೇ ಇತ್ತು. ದಿನವೂ ಸರಿಯಾಗಿ ಮಧ್ಯಾ ಹ್ನದ ಸಮಯಕ್ಕೆ ರೈಲು ನಿಲ್ದಾಣಕ್ಕೆ ಬರುತ್ತಿದ್ದ ಹಚ್ಚಿಕೊ ಪ್ರೊಫೆಸರ್‌ಗಾಗಿ ತಡಕಾಡುತ್ತಲೇ ಇತ್ತು.
ಹೀಗೆ ಒಂದಲ್ಲ ಎರಡಲ್ಲ ಬರೊಬÌರಿ 9 ವರ್ಷಗಳ ಕಾಲ ತನ್ನ ಮಾಲಕನಿಗೆ ಕಾಯುತ್ತಲೇ ಇತ್ತು. ತನ್ನ 12 ವರ್ಷಗಳ ಜೀವಿತಾ ವಧಿಯಲ್ಲಿ ಹಚ್ಚಿಕೊ ಯುನೊ ಜತೆ ಕಳೆದ ಸಮಯ ಕೇವಲ 16 ತಿಂಗಳು ಮಾತ್ರ. ಆದರೆ ಆತನ ಬರುವಿಕೆಗಾಗಿ ಕಾದದ್ದು 9 ವರ್ಷ. ತನ್ನ ಸಾವಿನವರೆಗೂ ಹಚ್ಚಿಕೊ ತನ್ನ ನಿತ್ಯದ ಕಾಯಕ ಮಾತ್ರ ಬಿಟ್ಟಿರಲಿಲ್ಲ.
ಎಂಥಾ ಘಟನೆಯಲ್ಲವೇ ಇವುಗಳು. ಇಡೀ ಮನುಷ್ಯ ಜಾತಿಯನ್ನೇ ಮುಟ್ಟಿ ಬಿಡುವ; ಆ ಮೂಲಕ ನಮ್ಮೊಳಗಿರುವ ಭಾವತೀವ್ರತೆಯನ್ನು ಹೊಮ್ಮಿಸುವ ಈ ಘಟನೆ ಸಾವಿರದಂತಹ ಭಾವಜೀವವನ್ನು ಹುಟ್ಟುಹಾಕಿ ಬಿಡುತ್ತದಲ್ಲ…
ಮನುಷ್ಯ ತಾನು ಮಾತ್ರ ಭಾವಜೀವಿ ಎಂದು ಭಾವಿಸಿದಂತಿದೆ. ಪ್ರಾಣಿಗಳಿಗೆ ಮಾತು ಬರುವುದಿಲ್ಲ ನಿಜ; ಆದರೆ ಭಾವನೆ, ಸಂವೇದನೆ, ಸಾಮಾಜಿಕ ಜವಾಬ್ದಾರಿ, ಕರ್ತವ್ಯಗಳನ್ನು ಮನುಷ್ಯನಿಗಿಂತ ಪ್ರಾಣಿಗಳೇ ಅತ್ಯಂತ ಮೊದಲಾಗಿ ನಿರ್ವಹಿಸುತ್ತವೆಂಬುದು ನನ್ನ ಅನಿಸಿಕೆ.
ರಸ್ತೆಯಲ್ಲಿ ಜನರು ವಾಹನ ಓಡಿಸುವ ಪರಿ ನೋಡಿದರೆ ಭಯವಾಗುತ್ತದೆ. ವಿದ್ಯಾವಂತ ಮನುಜ ಈ ರೀತಿಯಾಗಿ ಅಡ್ಡಾದಿಡ್ಡಿ ಬೇಕಾಬಿಟ್ಟಿ ಓಡಿಸುವುದು, ಮನಸಿಗ್ಗೆ ಬಂದ ಹಾಗೆ ನಡೆದಾಡುವುದು, ಅದರಿಂದ ಇನ್ನೊಬ್ಬರಿಗೆ ತೊಂದರೆ ಆಗುವುದೆಂಬ ಸಣ್ಣ ಸೂಕ್ಷ್ಮ ವಿಷಯವನ್ನು ಅರಿತುಕೊಳ್ಳದೇ ತನ್ನ ಅಪರಾಧವನ್ನು ಸಮರ್ಥಿಸಿಕೊಳ್ಳುವುದು. ಯಾವುದೊ ಕೆಲಸಕ್ಕೆ ಸರತಿ ಸಾಲಿನಲ್ಲಿ ನಿಂತಾಗ ಅತಿಕ್ರಮಿಸಿಬಿಡುವುದು, ದಾಂಧಲೆ ಹೀಗೆ ಕನಿಷ್ಠ ಮಟ್ಟದ ಮೌಲ್ಯಗಳಿಲ್ಲದಿದ್ದರೆ ಹೇಗೆ. ಕೊಂಚವೂ ಸೂಕ್ಷ್ಮ ಸಂವೇದನೆಗಳೇ ಇಲ್ಲದ ಮನುಷ್ಯರನ್ನು ಮನುಷ್ಯರೆಂದು ಕರೆಯುವುದಾದರೂ ಹೇಗೆ?
ಇವೆಲ್ಲ ಸಣ್ಣ ಪುಟ್ಟ ಸಮಸ್ಯೆಗಳೆನಿಸಬಹುದು. ಆದರೆ ಒಂದು ಇಡೀ ದೇಶದ ಇಲ್ಲವೇ ಸಮಾಜದ ವರ್ತನೆಯನ್ನು ಇವು ತೋರಿಸುತ್ತವೆ. ಮನುಷ್ಯ ಮನುಷ್ಯನಂತೆ ಬಾಳುವುದನ್ನು ಕಲಿಯಬೇಕಿದೆ. ಮೂಲಭೂತ ಹಕ್ಕುಗಳ ಜತೆಗೆ ಕರ್ತವ್ಯಗಳನ್ನು, ಅಲಿಖೀತ ನಿಯಮ, ನೈತಿಕ ಮೌಲ್ಯಗಳನ್ನು ಒಗ್ಗೂಡಿಸಿಕೊಂಡು ಸಹಜೀವನ ನಡೆಸುವುದು ತಿಳಿಯಬೇಕಿದೆ. ಇಲ್ಲವೆಂದಲ್ಲಿ ಮುಂದೊಂದು ದಿನ ಪ್ರಾಥಮಿಕ ಶಿಕ್ಷಣದಿಂದ ಕಾಲೇಜಿನ ವರೆಗೂ ಪಠ್ಯವನ್ನು ಬಿಟ್ಟು ಮೌಲಿಕ ಶಿಕ್ಷಣದ ಪಾಠವನ್ನೇ ಬೋಧಿಸಬೇಕಾಗಿ ಬರಬಹುದು.
ಇದೆಲ್ಲ ನೆನಪಾಗಿದ್ದಕ್ಕೆ ಕಾರಣವೊಂದಿದೆ. ಮೊನ್ನೆ ಕೆಲವರು ರಸ್ತೆಯಲ್ಲಿ ಅಡ್ಡಲಾಗಿ ಮಾತನಾಡುತ್ತ ನಿಂತಿದ್ದರು. ಹಾರ್ನ್ ಹಾಕಿದರೂ ಪಕ್ಕಕ್ಕೆ ಸರಿಯು ತ್ತಿಲ್ಲ, ಅದರಿಂದ ಅನೇಕರಿಗೆ ತೊಂದರೆಯಾಯಿತು. ಆಫೀಸಿಗೆ ಬಂದೆ. ಗಾಡಿ ಪಾರ್ಕ್ ಮಾಡಲು ಹೋಗುವಾಗ ದಾರಿಗೆ ಅಡ್ಡವಾಗಿ ಮಲಗಿದ್ದ ಶ್ವಾನವೊಂದು ಥಟ್ಟನೆ ಎದ್ದು ದಾರಿ ಬಿಟ್ಟಿತು. ನಾನು ಗಾಡಿ ಪಾರ್ಕ್ ಮಾಡಿ ಬಂದ ಮೇಲೆ ಮತ್ತದೇ ಜಾಗಕ್ಕೆ ಹೋಗಿ ಮಲಗಿತು. ಪ್ರಾಣಿಗಳಿಗೂ ಮನುಷ್ಯರಿಗೂ ಇರುವ ವ್ಯತ್ಯಾಸ ಅದಲು-ಬದಲಾಯಿತೇ ಈ ಶತಮಾನದಲ್ಲಿ ಎಂಬ ಅನುಮಾನ ಕಾಡುತ್ತಲೇ ಇದೆ. ನಿಮಗೂ ಒಮ್ಮೆಯಾದರೂ ಹೀಗೆ ಅನಿಸಿದೆಯಾ.
-ವಿಶಾಲ್ ಕುಮಾರ್ ಕುಲಕರ್ಣಿ
ಬಾದಾಮಿ