Advertisement

ಸಿನೆಮಾ ಎಂಬ ಅಚ್ಚರಿಯ ಲೋಕ…

11:23 PM Jul 27, 2020 | Karthik A |

ನಾನು ಕಾಲೇಜು ಪ್ರವೇಶಿಸುವವರೆಗೂ ಕೇವಲ ಮನೋರಂಜನೆಗಾಗಿ ಸಿನೆಮಾ ವೀಕ್ಷಿಸುತ್ತಿದ್ದೆ. ಅದರಲ್ಲಿ ಭಾರತದ ಎಲ್ಲ ಭಾಷೆಗಳೂ ಒಳಗೊಂಡಿದ್ದವು.

Advertisement

ಕೆಲವು ವರ್ಷಗಳ ಬಳಿಕ ಮಲಯಾಳಂ ಸಿನೆಮಾ ಜಾಸ್ತಿ ನೋಡಲು ಪ್ರಾರಂಭಿಸಿದೆ. ಅಲ್ಲಿಂದ ಮತ್ತೆ ಸಿನೆಮಾ ನೋಡುವ ನನ್ನ ದೃಷ್ಟಿಯೇ ಬದಲಾಯಿತು ಹಾಗೂ ಆಸಕ್ತಿಯೂ ಹೆಚ್ಚಾಯಿತು.

ಜನರು ಸಿನೆಮಾ ನೋಡಲು ಅನೇಕ ಕಾರಣಗಳು ಇರುತ್ತವೆ: ಮನೋರಂಜನೆಗಾಗಿ, ಕಲಿಕೆಗಾಗಿ, ತಮ್ಮ ಇಷ್ಟದ ನಟ/ನಟಿ ಮೇಲಿನ ಅಭಿಮಾನಕ್ಕಾಗಿ, ಟೈಮ್‌ ಪಾಸಿಗಾಗಿ, ಥ್ರಿಲ್ಲಿಂಗ್‌ಗಾಗಿ ಇತ್ಯಾದಿ.

ನಾನು ಮಲಯಾಳಂ ಸಿನೆಮಾ ನೋಡಲು ಆರಂಭಿಸಿದ ಅನಂತರ ಮನೋರಂಜನೆ ನಗಣ್ಯ ವೆನಿಸಿ, ಟೆಕ್ನಿಕಲ್‌ ವಿಷಯಗಳು ಇಷ್ಟವಾಗ ತೊಡಗಿದವು. ಮಲಯಾಳಂ ಸಿನೆಮಾ ಎಂದ ತತ್‌ಕ್ಷಣ ಎಲ್ಲರ ನೆನಪಿಗೆ ಬರುವ ಹೆಸರುಗಳೆಂದರೆ ಮೋಹನ್‌ ಲಾಲ್‌, ಮಮ್ಮುಟ್ಟಿ. ಆದರೆ ನಾನು ಪ್ರಾರಂಭದಲ್ಲಿ ಪ್ರಭಾವಕ್ಕೆ ಒಳಗಾದದ್ದು ಫ‌ಹಾದ್‌ ಫಾಸಿಲ್‌ ಎಂಬ ನಟನಿಂದ; ಅವರ “ಮಹೇಶಿಂಡೆ ಪ್ರತೀಕಾರಮ…’ ಸಿನೆಮಾ ಮೂಲಕ.

ಒಬ್ಬ “ಸೊ ಕಾಲ್ಡ್‌’ ಸಿನೆಮಾ ಹೀರೋಗೆ ಇರಬೇಕಾದ ಅಂಗ ಸೌಷ್ಠವ, ಗತ್ತು, ಸೌಂದರ್ಯ ಈತನಿಗೆ ಬೇಕಾಗೇ ಇಲ್ಲ. ಕೇವಲ ಕಣ್ಣುಗಳ ಮೂಲಕವೇ ನಟಿಸುವ ಅವನಲ್ಲಿರುವ ಕಲೆ ಬೇರೆ ಯಾವ ನಟನಲ್ಲೂ ನಾನು ಕಂಡಿಲ್ಲ. ಜತೆಗೆ ಆತನ ಚಿತ್ರಗಳ ಆಯ್ಕೆ ಮತ್ತು ಅದರಲ್ಲಿರುವ ಸಹಜತೆ ನನ್ನನ್ನು ಆಕರ್ಷಿಸಿದ ಅಂಶಗಳು.

Advertisement

ಸಿನೆಮಾ ರಂಗದಲ್ಲಿ ಸಹಜತೆಗೆ ಇನ್ನೊಂದು ಹೆಸರೆಂದರೆ ಅದು ಮಲಯಾಳಂ ಎಂದೇ ಹೇಳಬಹುದು. ಬೇರೆ ಭಾಷೆಗಳಲ್ಲಿ ಇಲ್ಲ ಎಂದಲ್ಲ, ಆದರೆ ಮಲಯಾಳಂ ಸಿನೆಮಾಗಳಲ್ಲಿ ಇರುವಷ್ಟು ಬೇರೆ ಯಾವ ಸಿನೆಮಾಗಳಲ್ಲಿಯೂ ನಾನು ಕಂಡಿಲ್ಲ. ಕನ್ನಡದಲ್ಲಿ ಸಹಜ ಅಭಿನಯವನ್ನು ನೀಡಲು ಸಮರ್ಥ ರಾಗಿರುವ ನಟರು ಅನೇಕರಿದ್ದರೂ ಅವರನ್ನು ಸಮರ್ಪಕವಾಗಿ ಉಪಯೋಗಿಸು ಕೊಳ್ಳು ವುದರಲ್ಲಿ ಹೆಚ್ಚು ಸಫ‌ಲತೆ ಕಂಡಿಲ್ಲ. ʼ

ಫ‌ಹಾದ್‌ ವಿಷಯಕ್ಕೆ ಬರುವುದಾದರೆ, ಅವರ ಸಿನೆಮಾಗಳು ಯಶಸ್ವಿಯಾಗುವುದು ಕಥೆಗಿಂತಲೂ ಹೆಚ್ಚಾಗಿ ತೋರಿಸಿರುವ ಪರಿಸರ, ನಟನೆ, ಸಿನೆಮಾಟೋಗ್ರಫಿ, ಸಂಗೀತ ಮತ್ತು ಬಹು ಮುಖ್ಯವಾಗಿ ಸಹಜತೆಯಿಂದ. “ತೊಂಡಿಮುದಲುಮ್‌ ದೃಕ್ಷಾಕ್ಷಿ ಯುಮ್‌’ ಸಿನೆಮಾದಲ್ಲಿ ತೋರಿಸಿರುವ ಪೊಲೀಸ್‌ ಸ್ಟೇಷನ್‌ ಹಾಗೂ ಅಲ್ಲಿ ನಟಿಸಿರುವ ನಿಜವಾದ ಪೊಲೀಸರು, “ಟ್ರಾನ್ಸ್‌’ ಚಿತ್ರದಲ್ಲಿ ಸಂದರ್ಭಕ್ಕೆ ಅನುಗುಣವಾಗಿರುವ ಹಿನ್ನೆಲೆ ಸಂಗೀತ, “ಕುಂಬಲಂಗಿ ನೈಟ್ಸ್‌’ ಸಿನೆಮಾದಲ್ಲಿ ಬರುವ ವಿಲಕ್ಷಣ, ವಿಚಿತ್ರವಾದ ಪಾತ್ರ, ಇವೆಲ್ಲವೂ ಒಂದಕ್ಕಿಂತ ಒಂದು ಅತ್ಯದ್ಭುತ ಸಿನೆಮಾಗಳು. ಕೇವಲ ಫ‌ಹಾದ್‌ ನಟನೆ ಅಲ್ಲದೆ ಈ ಎಲ್ಲ ಸಿನೆಮಾಗಳಲ್ಲಿ ತೋರಿಸಿರುವ ಸಹಜ ಪರಿಸರ, ಸಂಗೀತ, ಸಹ ನಟರ ಅಭಿನಯ, ಪ್ರಬುದ್ಧ ನಿರ್ದೇಶನ ಇವೆಲ್ಲ ಕಾರಣಗಳಿಂದ ದೊಡ್ಡ ಬಜೆಟ್‌ ಅಥವಾ ವಿಶೇಷ ಕಥೆ ಇಲ್ಲದಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಂಡಿವೆ.

ಫ‌ಹಾದ್‌ ಅನಂತರ ನನಗೆ ಇಷ್ಟವಾದ ನಟರು ಎಂದರೆ ಸೂರಜ್‌ ವೆಂಜಾರ್‌ಮೂಡ್‌ ಮತ್ತು ಸೌಬಿನ್‌ ಶಹೀರ್‌. ಇವರಿಬ್ಬರ ತಾರಾಗಣದ‌ “ಆಂಡ್ರಾಯ್ಡ್… ಕುಂಜಪ್ಪನ್‌’ ತುಂಬ ಕಾಡುವ ಸಿನೆಮಾ. ಇದೊಂದು ಕಾಲ್ಪನಿಕ ಕಥೆಯಾದರೂ ನಮ್ಮ ನಡುವೆಯೋ, ಅಕ್ಕಪಕ್ಕದಲ್ಲಿಯೋ ನಡೆಯುತ್ತಿರುವಂತೆ ಭಾಸವಾಗುತ್ತದೆ.  ಆವಾಗ ನಾನಿನ್ನು ಮೋಹನ್‌ ಲಾಲ್‌ ಎಂಬ ದೈತ್ಯ ನಟನ ನಿಜವಾದ ನಟನಾ ಕೌಶಲವನ್ನು ಕಂಡಿರಲಿಲ್ಲ. ಯಾವಾಗ “ತನ್ಮಾತ್ರ’ ಎಂಬ ಸಿನೆಮಾ ನೋಡಿದೆನೋ ಇಂತಹ ನಟನೆ ಜನ್ಮದಲ್ಲಿ ನಾನು ಯಾರಲ್ಲೂ ಕಂಡಿಲ್ಲ ಎಂದು ಅನಿಸಿತು.

ಒಂದು ಸಿನೆಮಾವನ್ನು ಕಲೆಯಾಗಿಯಷ್ಟೇ ಕಾಣುವ ನಾನು ವಾಸ್ತವಕ್ಕೆ ಹಿಂದಿರುಗಿದ ಅನಂತರ ಅದನ್ನು ಮನಸ್ಸಿನಲ್ಲಿಟ್ಟು ಕೊಳ್ಳುವುದಿಲ್ಲ. ಆದರೆ “ತನ್ಮಾತ್ರ’ ನೋಡಿದ ಅನಂತರ 2,3 ದಿನ ಬಹುವಾಗಿ ಕಾಡಿತು. “ಉತ್ತಮ ಸಿನೆಮಾ’ ಎನ್ನುವುದಕ್ಕೆ ನಿರ್ದಿಷ್ಟ ವ್ಯಾಖ್ಯಾನ ಇಲ್ಲ. ಯಾಕೆಂದರೆ ಅದು ನೋಡುಗನ ಅಭಿರುಚಿಯ ಮೇಲೆ, ದೃಷ್ಟಿಕೋನದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಒಂದು ಸಿನೆಮಾ “ತಾಂತ್ರಿಕ’ವಾಗಿ ಉತ್ತಮ ಎಂದೆನಿಸಲು ಅಪರಿಮಿತ ವ್ಯಾಖ್ಯಾನಗಳಿವೆ. ಯಾಕೆಂದರೆ ಅದು ನಿರ್ದೇಶಕನ ಸೃಜನಶೀಲತೆಯ ಮೇಲೆ ಅವಲಂಬಿತವಾಗಿರುತ್ತದೆ.

ವೀಕ್ಷಕರ ವಿಭಿನ್ನ ಅಭಿರುಚಿಗಳಿಗೆ ಧಕ್ಕೆ ಆಗದಂತೆ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಸಿನೆಮಾ ಕಟ್ಟಿಕೊಡಬಹುದು ಎಂದು ಮಲೆಯಾಳಂ ಚಿತ್ರರಂಗ ತೋರಿಸಿ ಕೊಟ್ಟಿದೆ. ಇತರ ಚಿತ್ರರಂಗವೂ ಇದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಸದಭಿರುಚಿಯ ಸಿನೆಮಾ ನೀಡಲಿ ಎನ್ನುವುದು ಚಿತ್ರಪ್ರೇಮಿಯಾದ ನನ್ನ ಆಶಯ.


ವಿಜೇತ ಎಚ್‌.ಎನ್‌., ಎಂಜಿನಿಯರ್‌, ಬೆಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next