Advertisement

Love Letter: ನೆನಪಿನಲೆಯಲ್ಲಿ ಪ್ರೀತಿಯ ಪತ್ರ…!

03:04 PM Jun 28, 2024 | Team Udayavani |

ಕೆಲವೇ ವರ್ಷಗಳ ಹಿಂದೆ, ಮನದ ಭಾವಗಳನ್ನು ತಿಳಿಸಲು ಓಲೆ ಬರೆಯುವ ಅಭ್ಯಾಸವಿತ್ತು. ಪ್ರೀತಿ, ವಿಶ್ವಾಸ, ಪ್ರೇಮದ ಭಾವಗಳನ್ನು ಬರೆದು ತಿಳಿಸಲು ಎಷ್ಟೋ ಜನರಿಗೆ ಆಸೆ, ಕುತೂಹಲವಿತ್ತು. ಆತ್ಮೀಯರಿಗೆ ನಮ್ಮ ಆಗು ಹೋಗುಗಳನ್ನು ತಿಳಿಸಲು ಬಿಳಿಯ ಹಾಳೆಯ ಮೇಲೆ ಅಕ್ಷರಗಳ ರಂಗನ್ನು ಚೆಲ್ಲಿ, ಅಂಚೆಪೆಟ್ಟಿಗೆಗೆ ಹಾಕಿ ಬರುತ್ತಿದ್ದ ಕಾಲವು ಮನದಲ್ಲಿ ಇನ್ನೂ ಅಚ್ಚಳಿಯದ ನೆನಪಾಗಿಯೇ ಉಳಿದಿದೆ.

Advertisement

ಇಂದು ಓಲೆ ಬರೆಯುವುದು ಎಂದರೆ ಕೇವಲ ನೆನಪಾಗಿಯೇ ಉಳಿದಿರುವುದಂತೂ ಸತ್ಯ. ಮೊಬೈಲ್‌ ಇಲ್ಲದೇ ಇದ್ದ ಅಂದಿನ ಕಾಲದಲ್ಲಿ ದೂರದ ಊರಿನಲ್ಲಿರುವ ಮಿತ್ರರಿಗೆ, ಸಂಬಂಧಿಕರಿಗೆ, ಪತಿಯು ಪತ್ನಿಗೆ, ಪತ್ನಿಯು ಪತಿಗೆ, ಮಕ್ಕಳಿಗೆ ಓಲೆ ಬರೆದೇ ವಿಷಯವನ್ನು ತಿಳಿಸಬೇಕಿತ್ತು ಅದೂ ಕೂಡ ಅಂಚೆ ಪೆಟ್ಟಿಗೆ ಇರುವ ಕಡೆಗೆ ಕಿಲೋ ಮೀಟರ್‌ ಗಟ್ಟಲೆ ನಡೆದುಕೊಂಡೇ ಹೋಗಬೇಕಿತ್ತು.

ಮನದ ಮಧುರ ಭಾವನೆಗಳೆಲ್ಲಾ ಲೇಖನಿಯಿಂದ ಅಕ್ಷರಗಳು ಮುತ್ತಿನ ರೂಪದಲ್ಲಿ ಜೋಡಿಸಲ್ಪಡುತ್ತಿದ್ದವು, ಅಷ್ಟೇ ಭಾವನಾತ್ಮಕವಾಗಿಯೂ, ಸುಂದರವಾಗಿಯೂ ಇದ್ದವು ಕೂಡ. ಆದರೆ ಇಂದು ಏನಿದ್ದರೂ ಮೊಬೈಲ್‌ ಯುಗ. ನಮ್ಮ ಬೆರಳ ತುದಿಯಿಂದ ಇಡೀ ವಿಶ್ವವನ್ನೇ ಸಂಚರಿಸಬಹುದು ಇಂದು!

ದೇಶ ವಿದೇಶಗಳಲ್ಲಿರುವ ಅಪರಿಚಿತರೂ ಪರಿಚಿತರಾಗಬಲ್ಲರು ಆದರೆ ಭಾವನಾತ್ಮಕ ಬಂಧ ಕಡಿಮೆ ಆಗುತ್ತಿದೆ ಎಂದು ಅನಿಸುತ್ತಿದೆ ಏಕೆಂದರೆ ಮೊಬೈಲ್‌ ನಲ್ಲಿ ನಾವೆಷ್ಟೇ ಟೈಪ್‌ ಮಾಡಿ ನಮ್ಮ ಆತ್ಮೀಯ ಮಿತ್ರರಿಗೆ, ಸಂಬಂಧಿಕರಿಗೆ ಸಂದೇಶ ಕಳುಹಿಸಿದರೂ ಕೂಡ ಅದು ನಮ್ಮ ಲೇಖನಿಯಿಂದ ಮೂಡಿದ ಕೈ ಬರಹದಂತೆ ಭಾವಾನಾತ್ಮಕವಾಗಿ ಮನದಲ್ಲಿ ಬೆರೆತು ಹೋಗಿ ಅಚ್ಚಳಿಯದ ನೆನಪಾಗಿ ಉಳಿಯಲು ಸಾಧ್ಯವಿಲ್ಲ ಎಂಬುದು ನನ್ನ ಅನಿಸಿಕೆ.

ಹಿಂದೆ ತಿಳಿದವರು ಇತರರ ಭವಿಷ್ಯದ ಬಗ್ಗೆ ಓಲೆಯನ್ನು ಬರೆಯುತ್ತಿದ್ದರು, ಅವರು ಬರೆಯುತ್ತಿದ್ದ ಓಲೆಗಳಲ್ಲಿ ಅದೆಷ್ಟೋ ವರ್ಷಗಳ ಭವಿಷ್ಯವೇ ಇರುತ್ತಿತ್ತು ಎಂದು ಹೇಳಿರುವುದನ್ನು ನಾವು ಕೇಳಿರುತ್ತೇವೆ. ಹಾಗೆಯೇ ರಾಮಾಯಣ, ಮಹಾಭಾರತದ ಕಾಲದಲ್ಲಿಯೂ ಕೂಡ ವಿರಹ ವೇದನೆಯನ್ನು ಸಹಿಸಲಾರದೆ ಪ್ರಿಯತಮನಿಗೆ ಅಥವಾ ಪ್ರಿಯತಮೆಗೆ ಓಲೆ ಬರೆಯುತ್ತಿದ್ದರು, ಆ ಓಲೆಗಳನ್ನು ಪಕ್ಷಿಗಳ ಮೂಲಕ ಅವರಿರುವ ಊರಿಗೆ ಕಳುಹಿಸುತ್ತಿದ್ದರು ಎಂಬ ಕಥೆಯನ್ನು ಕೂಡ ನಾವು ಕೇಳಿರುತ್ತೇವೆ ಏಕೆಂದರೆ ವಾಹನ ವ್ಯವಸ್ಥೆಯಾಗಲಿ, ಅಂಚೆ ಪೆಟ್ಟಿಗೆಯಾಗಲಿ ಇಲ್ಲದ ಅಂದಿನ ಕಾಲದಲ್ಲಿ ಬರೆದ ಓಲೆಗಳನ್ನು ಪಕ್ಷಿಗಳ ಮೂಲಕ ಕಳುಹಿಸುವುದು ಅನಿವಾರ್ಯವಾಗಿತ್ತು. ಹಾಗೆಯೇ ಮರು ಉತ್ತರಕ್ಕಾಗಿ ಪ್ರೀತಿ ಪಾತ್ರರ ಓಲೆಯ ನಿರೀಕ್ಷೆಯಲ್ಲಿಯೇ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು.

Advertisement

ಆದರೆ ಇಂದು ಯುವ ಜನತೆಗೆ ಓಲೆ ಬರೆಯುವುದೂ ಮರೆತು ಹೋದಂತಿದೆ!, ಮಕ್ಕಳಿಗೆ ಓಲೆ, ಅಂಚೆಯಣ್ಣ, ಅಂಚೆ ಪೆಟ್ಟಿಗೆಗಳು ಎಲ್ಲವೂ ಅಚ್ಚರಿಯ ವಿಷಯವಾಗಿ ಬಿಟ್ಟಿದೆ! ಸಂಬಂಧಿಕರಿಗೆ, ಮಿತ್ರರಿಗೆ ಆಗು ಹೋಗುಗಳನ್ನು ತಿಳಿಸಲು ಓಲೆ ಬರೆದು, ಕಿಲೋಮೀಟರ್‌ ಗಟ್ಟಲೆ ನಡೆದುಕೊಂಡು ಹೋಗಿ ಅಂಚೆ ಪೆಟ್ಟಿಗೆಗೆ ಹಾಕಿ ಬಂದು, ಅವರ ಮರು ಉತ್ತರಕ್ಕಾಗಿ ಮರು ಪತ್ರವನ್ನು ನಿರೀಕ್ಷೆ ಮಾಡುತ್ತಿದ್ದ ಬಾಲ್ಯದ ದಿನಗಳು ತುಂಬಾ ನೆನಪಾಗುತ್ತಿದೆ.

- ಪ್ರಜ್ಞಾ ರವೀಶ್‌

ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next