ಆ ದಿನ ಉಜಿರೆಯಿಂದ ಬಾಗಲಕೋಟೆಗೆ ಹೋಗುತ್ತಿದೆ. ಬಸ್ಸಿನಲ್ಲಿ ಕುಳಿತು ಹಾಗೆ ಕಿಟಕಿಯ ಹೊರಗೆ ಕಣ್ಣಾಯಿಸಿದಾಗ ಅಲ್ಲೊಂದು ದೊಡ್ಡ ಅಪಾರ್ಟೆಂಟ್ ಕಟ್ಟುತ್ತಿರುವುದು ಕಂಡುಬಂತು. ಅನೇಕರು ಬಿಡುವಿಲ್ಲದೆ ಕೂಲಿ ಕೆಲಸ ಮಾಡುತ್ತಿದ್ದರು. ಒಂದು ಮೂಲೆಯಲ್ಲಿ ಅಪಾರ್ಟೆಂಟ್ ಕಟ್ಟಲು ಹಾಕಿದ್ದ ಇಟ್ಟಿಗೆ ಹಾಗೂ ಮರಳಿನಲ್ಲಿ ಸಣ್ಣ ಹುಡುಗನೊಬ್ಬ ತನ್ನ ಪಾಡಿಗೆ ಆಟ ಆಡುತ್ತಿದ್ದ.
ಮೊದಲಿಗೆ ಆ ಮಗುವನ್ನು ನೋಡಿ ಸಂತೋಷವಾಯಿತು, ಅಷ್ಟೊಂದು ಚೆಂದವಾಗಿದ್ದ ಆ ಸಣ್ಣ ಹುಡುಗ. ಆದರೆ ಒಂದು ಕ್ಷಣ ನನ್ನ ತಲೆ ಹೋದದ್ದು ಆ ಮಗುವಿನ ಮುಂದಿನ ಭವಿಷ್ಯದ ಬಗ್ಗೆ. ಇದೇ ಮರಳಿನಲ್ಲಿ ಆಡಿ ಮತ್ತೆ ಇಲ್ಲಿಯೇ ಯಾವುದೊ ಒಂದು ಪರಿಸ್ಥಿತಿಗೆ ಜೋತು ಬಿದ್ದು. ಕಷ್ಟಕ್ಕೊ ಒತ್ತಾಯಕ್ಕೊ ಸಿಲುಕಿ ಅಲ್ಲಿಯೇ ಕೂಲಿಯಾಗುತ್ತಾನಲ್ಲ ಎಂದು ಅನಿಸಲು ತೊಡಗಿತು.
ಹಾಗಾದರೆ ತಪ್ಪು ಯಾರದ್ದು? ಆ ಪುಟ ಹುಡುಗದ್ದ ಅಥವಾ ತಮ್ಮ ಊರನ್ನು ಬಿಟ್ಟು ಬೇರೆ ಎಲ್ಲೋ ದುಡಿಯಲು ಬಂದ ಅವರ ತಂದೆ ತಾಯಿಯದ್ದ? ಉತ್ತರ ಗೊತ್ತಿಲ್ಲ. ಆದರೆ ಇನ್ನು ಕೆಲವೇ ದಿನಗಳಲ್ಲಿ ಅದೇ ಅಪಾರ್ಟೆಂಟ್ ಒಳಗೆ ಅನೇಕ ಶ್ರೀಮಂತರ ಮಕ್ಕಳು, ಈ ಮಗು ಆಡಿದ ಮರಳಿನಲ್ಲೇ ಆಡವಾಡುತ್ತವೆ.
ಆದರೆ ಆಗ ಅದು ಚಿಣ್ಣರ ಪಾರ್ಕ್ ಆಗಿರಲಿದೆ. ಆದರೆ ಈ ಹುಡುಗ ಮತ್ತೂಂದು ಕಟ್ಟಡ ನಿರ್ಮಾಣದ ಕೆಲಸದಲ್ಲಿರುತ್ತಾನೆ. ವಿಚಿತ್ರ ಅಲ್ವಾ? ನಿಜ, ಪರಿಸ್ಥಿತಿ ಎಲ್ಲರಿಗೂ ಒಂದೇ ತರಹನಾಗಿರುವುದಿಲ್ಲ. ಮುಂದೆ ಮಣ್ಣಿನ ಮಕ್ಕಳೇ ಚಿನ್ನದ ಮಕ್ಕಳಾಗುವುದು, ಇಂದು ಕಷ್ಟಪಟ್ಟ ಮಕ್ಕಳು ಮುಂದೆ ದೊಡ್ಡ ಮಟ್ಟಕ್ಕೆ ಏರಬಹುದು. ಆದರೆ ಆ ಲಕ್ಷಾಂತರ ಮಕ್ಕಳಲ್ಲಿ ಕೆಲವರಿಗೆ ಮಾತ್ರ ಆ ಅವಕಾಶ ಸಿಗುವುದು. ಇನ್ನು ಎಷ್ಟೋ ಮಕ್ಕಳು ಅವಕಾಶ ವಂಚಿತರಾಗಿ ಸಣ್ಣ ಪುಟ್ಟ ಕೆಲಸಗಳಲ್ಲಿ ಉಳಿಯುತ್ತಾರೆ.
ನನ್ನ ಆಶಯ ಇಷ್ಟೇ. ನಮ್ಮ ದೇಶದಲ್ಲಿ ಇಂತಹ ತುಂಬಾ ಮಕ್ಕಳಿದ್ದಾರೆ. ಅವರೆಲ್ಲರಿಗೂ ಒಂದು ಭವಿಷ್ಯ ಇರುತ್ತದೆ. ಸಾಧ್ಯವಾದರೆ ಅವರಿಗೆ ಸಹಾಯ ಮಾಡಿ, ಸಹಾಯ ಅಂದರೆ ಅವರು ಜೀವನವನ್ನೇ ಬದಲಿಸಿ ಅಂತಲ್ಲ ಸಣ್ಣದಾಗಿ ಹೆಜ್ಜೆ ಇಡುತ್ತಿರುವವರಿಗೆ ಕೈ ಹಿಡಿದು ನಡೆಸಿದರೂ ಸಾಕು. ಮುಂದೆ ಅವರೇ ಓಡುತ್ತಾರೆ. ಟೀ ಮಾರುತ್ತಾ ಇದ್ದ ಹುಡುಗ ಒಂದು ಸಣ್ಣ ಸಹಾಯದಿಂದ ಎನ್‌ಕೌಂಟರ್ ದಯಾನಾಯಕ ಆಗಿದ್ದಾರೆ. ಯಾರಿಗೆ ಗೊತ್ತು, ಇನ್ನೆಷ್ಟು ಪ್ರತಿಭೆಗಳು ಮಣ್ಣಿನಲ್ಲಿ ಆಡವಾಡುತ್ತಿದ್ದಾರೋ, ನಿಮ್ಮ ಒಂದು ಪುಟ್ಟ ಸಹಾಯ ಅವರ ಬಾಳಿನ ದೊಡ್ಡ ತಿರುವು ಆಗಬಹುದು. ಬಾಡಿ ಹೋಗುತ್ತಿದ್ದ ಒಂದು ಸಸಿಗೆ ಹನಿಯ ನೀರಿನಂತಾಗಬಹುದು. ನಿಮ್ಮ ಒಂದು ಸಹಾಯ ಅವರನ್ನು ದೊಡ್ಡ ಆಲದ ಮರವನ್ನಾಗಿ ಮಾಡಲಿ.
n ಸೌಮ್ಯಾ ಕಾಗಲ್
ಬಾಗಲಕೋಟೆ