ಬಾರೇ ಬೇಗಾ.. ಶಾಲೆಗೆ ಲೇಟ್ ಆಯ್ತು.. ಇವಾಗ ವಿದ್ಯಾ ನೀನು ಬೇಗ ಬಂದಿಲ್ಲಾ ಅಂದ್ರೆ ನಾನು ನಿನ್ನನ್ನು ಬಿಟ್ಟು ಹೋಗ್ತೀನಿ. ಆಮೇಲೆ ನೀನು ಒಬ್ಬಳೇ ಬರಬೇಕು. ಇದು ಅಕ್ಕನ ಪ್ರತೀ ದಿನದ ಕಲರವವಾಗಿತ್ತು. ಹೀಗೆ ಪ್ರೈಮರಿ, ಹೈಸ್ಕೂಲ್, ಕಾಲೇಜಿನವರೆಗೆ ನಡೀತು. ಅಕ್ಕ ತಂಗಿ ಅಂದ ಮೇಲೆ ಜಗಳ ಇದ್ದಿದ್ದೆ, ಆದ್ರೆ, ಅದು ನಮ್ಮ ವಿಷಯದಲ್ಲಿ ದಿನಾ ನಡೆಯುತ್ತಿತ್ತು.
ಬೈಕೊಂಡು, ಹೊಡೆದಾಡಿಕೊಂಡು ಆಮೇಲೆ 10 ನಿಮಿಷದಲ್ಲಿ ಸರಿಯಾಗುವುದು ಮಾಮಾಲಿಯಾಗಿತ್ತು. ಎಲ್ಲರ ಪಾಲಿಗೂ ಅಮ್ಮ ಮೊದಲ ಶಿಕ್ಷಕಿಯಾದರೆ ನನ್ನ ಜೀವನದಲ್ಲಿ ಅಕ್ಕ ಮೊದಲ ಶಿಕ್ಷಕಿ, ಸಹೋದರಿ, ಗೆಳತಿ, ನನ್ನ ಮೋಟಿವೇಷನಲ್ ಸ್ಪೀಕರ್, ನನ್ನ ಎಟಿಎಂ, ನನ್ನ ಮೇಕಪ್ ಆರ್ಟಿಸ್ಟ್, ನನ್ನ ಡಿಸೈನರ್, ನನ್ನ ಸರ್ಚ್ ಎಂಜಿನ್ ಎಲ್ಲವೂ.
ನಿಮಿಷಕೊಮ್ಮೆ ಪ್ರೀತಿ, ನಿಮಿಷಕ್ಕೊಮ್ಮೆ ಜಗಳ, ಅದುವೇ ಅಕ್ಕತಂಗಿಯರ ಬಾಂಧವ್ಯ ಅಲ್ಲವೇ. ಅವಳಿಗೆ ಸಿಟ್ಟು ಮೂಗಿನ ತುದಿಯಲ್ಲಿ. ಹಾಗಂತ ನಾನು ತಾಳ್ಮೆಯ ಮೂರ್ತಿಯೇನಲ್ಲ. ನಾನು, ಅವಳು ಇಬ್ಬರು ಸೇರಿದರೆ ಆಕಾಶ -ಭೂಮಿ ಒಂದಾಗುವುದೋ ಗೊತ್ತಿಲ್ಲ. ಆದರೆ ಪಕ್ಕದ ಮನೆಯ ಜನರಂತೂ ಒಟ್ಟಾಗುತ್ತಿದ್ದರು.
ನಿನಗೆ ಏನು ಇಷ್ಟಾನೋ ಅದನ್ನೇ ಮಾಡು, ಬೇರೆಯವರ ಬಗ್ಗೆ ಯೋಚನೆ ಮಾಡಬೇಡ ಎಲ್ಲದಕ್ಕೂ ನಾನು ಸಪೋರ್ಟ್ ಮಾಡ್ತೀನಿ ಎನ್ನುವ ಅಕ್ಕನ ದೊಡ್ಡ ಗುಣವೇ ಇದು.. ಏನೇ ಅನಿಸಿದರೂ ನೇರವಾಗಿ ಮಾತನಾಡುವ ಸ್ವಭಾವ, ಸ್ವಂತಿಕೆ, ಬುದ್ಧಿವಂತಿಕೆ ಜತೆಗೆ ಧೈರ್ಯ ಇವೆಲ್ಲ ಚಿಕ್ಕಂದಿನಿಂದಲೂ ಬಂದಂತದ್ದು. ಸ್ವಾಭಿಮಾನಿ, ಪ್ರತಿಭಾನ್ವಿತೆ, ಗಟ್ಟಿಗಿತ್ತಿ ಇವೆಲ್ಲ ಬೇರೆಯವರು ಆಕೆಗೆ ಕೊಡುವಂತಹ ಕಾಂಪ್ಲಿಮೆಂಟ್‌ಗಳು.
ನಾನು ಆಕೆಗೆ ತಿಳಿಸುವುದು ಇಷ್ಟೇ..ನಾನು ನಿನ್ನಂತೆ ಆಗದಿದ್ದರೂ 22 ವರ್ಷಗಳಿಂದ ನೀನು ತೋರಿಸಿಕೊಟ್ಟಂತಹ, ದಾರಿ ಹೇಳಿದಂತಹ ಎಲ್ಲ ಮಾತನ್ನು ನಾನು ಇಲ್ಲಿವರೆಗೆ ಕೇಳಿಲ್ಲ. ಆದರೆ ನನ್ನ ಜೀವನದ ಒಂದು ಕಾಣದ ಸ್ಫೂರ್ತಿನೇ ನೀನು. ನಿನ್ನ ಎಲ್ಲ ಗುಣವನ್ನು ನಾನು ಕಾಪಿ ಮಾಡದೆ ಇದ್ರು, ಧೈರ್ಯ, ಸ್ವಾಭಿಮಾನವನ್ನು ಪಡೆದುಕೊಳ್ಳುವ ಒಂದು ಹಠದಲ್ಲಿದ್ದೇನೆ. ಹೀಗೆ ಯಾವಾಗಲೂ ನನ್ನ ಅಕ್ಕಳಾಗಿರು. ಇಂತಿ ನಿನ್ನ ವಿದ್ದು.
ವಿದ್ಯಾ, ಎಂ.ಜಿ.ಎಂ., ಉಡುಪಿ