Advertisement

UV Fusion: ಬಾಲ್ಯದ ಮಳೆ ಹನಿಗಳ ಸವಿ ನೆನಪು

06:07 PM Aug 06, 2024 | Team Udayavani |

ಎಡೆಬಿಡದೆ ಸುರಿಯುವ ಈ ಜಿಟಿಜಿಟಿ ಮಳೆಯನ್ನು ಮನೆಯ ಕಿಟಕಿಯ ಬಳಿ ಕೂತು ನೋಡುತ್ತಿದ್ದರೆ ಯಾರಿಗಾದರೂ ಸರಿ ಅವರ ಬಾಲ್ಯದ ದಿನಗಳು ಒಮ್ಮೆ ಕಣ್ಣ ಮುಂದೆ ಸರಿದು ಹೋಗುವುದಂತು ಖಂಡಿತ. ಮಳೆ ಜೋರಾಗುತ್ತಿದೆ ಅಂದಾಗ ನಾಳೆ ಶಾಲೆಗೆ ರಜೆ ಇರಲಿ ಎಂದು ದೇವರಲ್ಲಿ ಅಂಗಲಾಚುವುದು, ಟಿವಿಯಲ್ಲಿ ಬರೀ ಕಾಟೂìನ್‌ ನೋಡುತ್ತಿದ್ದವರು ನಾಳೆ ರಜೆ ಘೋಷಿಸುವರೇ ಎಂದು ಶ್ರದ್ಧೆಯಿಂದ ವಾರ್ತೆಯನ್ನು ನೋಡುವುದು. ನಾಳೆ ಶಾಲೆಗೆ ರಜೆ ಇದೆ ಎಂದು ಖಚಿತವಾದಾಗ ಖುಷಿಯಿಂದ ಕುಣಿದು ಕುಪ್ಪಳಿಸುವುದು, ಆಹಾ, ಬಾಲ್ಯದ ಆ ದಿನಗಳೇ ಚೆನ್ನಾಗಿದ್ದವು.

Advertisement

ಮಳೆಗಾಲದಲ್ಲಿ ಸಿಗುವ ಈ ರಜೆಯಲ್ಲಿ ಏನಾದರು ಬಿಸಿಬಿಸಿ ಕುರುಮ್‌ ಕುರುಮ್‌ ತಿಂಡಿ ತಿನ್ನುತ್ತಾ ಟಿವಿ ನೋಡೋಣವೆಂದರೆ ಮಳೆಯಿಂದ ಆಗಾಗ ತಪ್ಪುವ ನೆಟ್ವರ್ಕ್‌, ನೆಟ್ವರ್ಕ್‌ ಸರಿಯಾಯಿತೆಂದಾಗ ಕೈಕೊಡುವ ಕರೆಂಟ್‌. ಈ ಎಲ್ಲ ಪಜೀತಿಗಳಿಂದ ರಜೆಯ ಮಜಾ ಹಾಳಾಗುತ್ತದೆಯಲ್ಲ ಎಂದು ಹೊರಗೆ ಹೋಗಿ ಆಟವಾಡೋಣ ಅಂದುಕೊಂಡರೆ ಸಾಕು ಆಗ ಧೋ ಎಂದು ಜೋರಾಗಿ  ಮಳೆಯ ಆರಂಭ. ಆದರೂ ಮನೆಯವರ ಅದರಲ್ಲೂ ಅಮ್ಮನ ಕಣ್ಣುತಪ್ಪಿಸಿ ಕದ್ದು ಮುಚ್ಚಿ ಮಳೆಯಲ್ಲಿ ಆಟವಾಡುವುದರಲ್ಲೂ ಒಂದು ಮಜವಿತ್ತು. ಇನ್ನು ಮಳೆ ಸ್ವಲ್ಪ ವಿರಾಮ ನೀಡಿದರೆ ಸಾಕು ಅಂಗಳ , ಮೈದಾನದಲ್ಲಿ ಕೆಸರು ತುಂಬಿದ್ದರೂ ಅದರಲ್ಲೇ ಕುಂಟೆ-ಬಿಲ್ಲೆ, ಲಗೋರಿ, ಕಣ್ಣಮುಚ್ಚಾಲೆ, ಖೋ-ಖೋ ಆಟ ಆರಂಭವೇ.

ಮಳೆಗಾಲದಲ್ಲಿ ಸಂಜೆ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುವಾಗ ರಸ್ತೆಬದಿಯ ಮರಗಳಲ್ಲಿರುತ್ತಿದ್ದ ಜೂಸೆಹಣ್ಣು, ಮಾವಿನಹಣ್ಣುಗಳನ್ನು ಕದ್ದು ತಿನ್ನುವುದರಲ್ಲಿರುವ ಖುಷಿ ಅನುಭವಿಸುವವರಿಗೇ ಗೊತ್ತು. ಮಳೆಗಾಲದ ತಂಪು ವಾತಾವರಣದಲ್ಲಿ, ಚುಮು ಚುಮು ಚಳಿಗೆ ಬಿಸಿ ಬಿಸಿಯಾಗಿ ಏನನ್ನಾದರೂ ತಿನ್ನಬೇಕೆಂದು ಅನಿಸುವುದು ಸಹಜ. ಅದಕ್ಕೆಂದೇ ಇನ್ನೇನು ಮಳೆಗಾಲ ಶುರು ಅನ್ನುವಷ್ಟರಲ್ಲಿ ಮನೆಯಲ್ಲಿ ಮಳೆಗಾಲಕ್ಕೆ ಬೇಕಾಗುವ ಹಲಸಿನಕಾಯಿಯ ಹಪ್ಪಲ, ಸಂಡಿಗೆ, ಉಪ್ಪಿನಕಾಯಿ, ಹಾಗಲಕಾಯಿ ಚಿಪ್ಸ್‌, ಆಲೂಗಡ್ಡೆ ಚಿಪ್ಸ್‌ಗಳ ತಯಾರಗುತ್ತಿತ್ತು. ಮಳೆ ಬರುವಾಗ ಇದನ್ನೆಲ್ಲಾ ಚಪ್ಪರಿಸಿ ತಿನ್ನುವ ಸುಖವೇ ಬೇರೆ.

ಬಾಲ್ಯದ ನೆನಪುಗಳು ಇವಾದರೆ ಇನ್ನು ಯೌವನದಲ್ಲಿ ಮಳೆಗಾಲ ಕಳೆಯುವ ರೀತಿಯೇ ಬೇರೆ. ಮಳೆ ರಜೆಗೆ ಸ್ನೇಹಿತರೊಂದಿಗೆ, ಮನೆಯವರೊಂದಿಗೆ ಪ್ರವಾಸ ಆರಂಭವಾಗುತ್ತಿತ್ತು. ಈ ಸಂದರ್ಭಗಳಲ್ಲಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ ನೆನಪುಗಳು ಇನ್ನೂ ಅಚ್ಚಳಿಯದಂತೆ ಹಸುರಾಗಿವೆ. ಮಡಿಕೇರಿಯ ರಾಜಾಸೀಟ್‌, ಅಬ್ಬಿ ಜಲಪಾತ, ಜೋಗಜಲಪಾತ, ಶಿವನ ಸಮುದ್ರ, ಶೃಂಗೇರಿ, ಚಿಕ್ಕಮಗಳೂರು, ಮಂಗಳೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದೆವು. ಈ ಸ್ಥಳಗಳನ್ನು ಮಳೆಗಾಲದಲ್ಲೇ ವೀಕ್ಷಿಸಬೇಕು. ವರ್ಷದ ಈ ಅವಧಿಯಲ್ಲೇ ಮಲೆನಾಡು, ಕರಾವಳಿಯ ನಿಜವಾದ ಪ್ರಕೃತಿಕ ಸೌಂದರ್ಯ ಕಾಣುವುದು. ಪ್ರಕೃತಿಯ ರಮಣೀಯ ದೃಶ್ಯಗಳು ನಮ್ಮ ಮನಸ್ಸಿನ ದುಃಖಗಳೆಲ್ಲ ಒಂದೇ ಕ್ಷಣದಲ್ಲಿ ಮಾಯ ಮಾಡುವುದರಲ್ಲಿ ಎರಡು ಮಾತಿಲ್ಲ.

ಈಗ ಕಾಲೇಜು, ಈವರೆಗೆ ನಡೆದುದ್ದದ್ದೆಲ್ಲವೋ ಒಂದು ಕನಸಿನಂತೆ ಭಾಸವಾಗುತ್ತಿದೆ. ಈಗ ಮಳೆಯನ್ನೂ ನೋಡುತ್ತಿದ್ದರೆ ಬಾಲ್ಯದ ನೆನಪುಗಳನ್ನು ಮೆಲುಕುಹಾಕಿಕೊಂಡು ಅಂತಹ ದಿನಗಳನ್ನು ನಾವು ಅನುಭವಿಸಿದ್ದು ನಿಜವೇ ಎಂಬ ಪ್ರಶ್ನೆ ಮೂಡುತ್ತದೆ. ಏನೇ ಆದರೂ  ಮಳೆಯೊಂದಿಗೆ ಕಳೆದ ಬಾಲ್ಯದ ನೆನಪುಗಳು ಎಂದೆಂದೂ ಅಮರ.

Advertisement

ಅಕ್ಷಿತಾ ಡಿ.

ಬಿ. ವೋಕ್‌ (ಡಿಎಂಎಫ್ಎಂ), ಎಸ್‌ಡಿಎಂ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next