Advertisement

Uttarkashi  ಸುರಂಗ ಆ ಹನ್ನೊಂದು ದಿನಗಳು

12:37 AM Nov 24, 2023 | Team Udayavani |

ಉತ್ತರಾಖಂಡ ರಾಜ್ಯದಲ್ಲಿನ ಬಹು ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಸಿಲ್ಕಾéರಾ ಸುರಂಗ ಮಾರ್ಗ ನಿರ್ಮಾಣದಲ್ಲಿ ಬಹುದೊಡ್ಡ ಅಡ್ಡಿಯುಂಟಾಗಿ ಆಗಲೇ 11 ದಿನ ಕಳೆದಿದೆ. ಸುರಂಗ ನಿರ್ಮಾಣದ ವೇಳೆ ಬೆಟ್ಟ ಕುಸಿದು, 41 ಮಂದಿ ಕಾರ್ಮಿಕರು ಒಳಗೇ ಸಿಲುಕಿಕೊಂಡಿದ್ದಾರೆ. ನ.12ರ ಬೆಳಗಿನ ಜಾವ 5.30ರ ವೇಳೆಗೆ ಆಗಿರುವ ಘಟನೆ ಇದು. ಅಂದಿನಿಂದ ಇಲ್ಲಿವರೆಗೂ ಕಾರ್ಮಿಕರನ್ನು ಹೊರಗೆ ತರಲು ಸಾಕಷ್ಟು ಶ್ರಮ ವಹಿಸಲಾಗಿದೆ.

Advertisement

ಏನಿದು ಯೋಜನೆ?

ದೇಶದ ಅತ್ಯಂತ ಮಹತ್ವದ ಯೋಜನೆ ಇದು. ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು ಕೈಗೊಂಡಿರುವ ಚಾರ್‌ಧಾಮ್‌ ಮಹಾಮಾರ್ಗ್‌ ಪರಿಯೋಜನೆಯಲ್ಲಿ ಈ ಸಿಲ್ಕಾéರಾ ಸುರಂಗ ಬರುತ್ತದೆ. ಇದು ನಾಲ್ಕು ಕಿ.ಮೀ. ಉದ್ದದ ಸುರಂಗ. ಕಳೆದ ವರ್ಷವೇ ಇದರ ಕಾಮಗಾರಿ ಮುಗಿಯಬೇಕಾಗಿತ್ತು. ಸಿಲ್ಕಾéರಾ ಮತ್ತು ದಂಡಲ್ಗಾಂವ್‌ ಅನ್ನು ಈ ಸುರಂಗ ಸಂಪರ್ಕಿಸುತ್ತದೆ. 2340 ಮೀ. ಆಳದಲ್ಲಿ ಈ ಸುರಂಗವನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ ಈ ಚಾರ್‌ಧಾಮ್‌ ಮಹಾಮಾರ್ಗ್‌ ಪರಿಯೋಜನೆ ಮೂಲಕ ಕೇಂದ್ರ ಹೆದ್ದಾರಿ ಸಚಿವಾಲಯ 1000 ಕಿ.ಮೀ. ರಸ್ತೆ ನಿರ್ಮಾಣ ಮಾಡುತ್ತಿದೆ. ಹೊಸದಿಲ್ಲಿಯಿಂದ ಉತ್ತರಾಖಂಡವನ್ನು ಸಂಪರ್ಕಿಸುವ ಮಹಾ ಯೋಜನೆ ಇದು.

ದುರಂತ ಸಂಭವಿಸಿರುವುದು ಎಲ್ಲಿ?

ನ.12ರ ಬೆಳಗಿನ ಜಾವ ಈ ಘಟನೆ ನಡೆದಿದೆ. ಸುರಂಗದ ಮುಂಭಾಗದಿಂದ 200 ಮೀ. ಒಳಗೆ ಬೆಟ್ಟ ಕುಸಿದು ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದಾರೆ.  ನ.12ರಿಂದಲೂ ಇವರಿಗೆ ಹೊರಗಿನಿಂದ ಆಮ್ಲಜನಕ ಮತ್ತು ಆಹಾರ ಒದಗಿಸಲಾಗುತ್ತಿದೆ. ಆದರೆ ಇತ್ತೀಚೆಗೆ  ಕಾರ್ಮಿಕರಿಗೆ ಬಿಸಿ ಆಹಾರವನ್ನೂ ಕಳುಹಿಸಲಾಗುತ್ತಿದೆ.

Advertisement

ಏನೇನು ಆಹಾರ?

ಕಾರ್ಮಿಕರನ್ನು ಪೈಪ್‌ ಮೂಲಕ ಸಂಪರ್ಕ ಸಾಧಿಸಿದ ಮೇಲೆ ಅವರಿಗೆ ಬಿಸಿ ಆಹಾರವನ್ನೂ ಕಳುಹಿಸಲಾಗುತ್ತಿದೆ. ಇದಕ್ಕಾಗಿಯೇ ವಿಶೇಷ ಅಡುಗೆ ಸಿಬಂದಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕಿಚಡಿ, ಪಲಾವ್‌, ಮಟ್ಟರ್‌ ಪನೀರ್‌, ಚಪಾತಿ ಕೊಡಲಾಗುತ್ತಿದೆ. ಇದಕ್ಕೆ ಖಾರ ಕಡಿಮೆ, ಎಣ್ಣೆಯನ್ನೂ ಕಡಿಮೆ ಹಾಕುವುದಲ್ಲದೇ, ಚೆನ್ನಾಗಿ ಜೀರ್ಣವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಅಡುಗೆ ಬಗ್ಗೆ ನುರಿತ ವೈದ್ಯರಿಂದ ಸಲಹೆ ಪಡೆಯಲಾಗುತ್ತಿದೆ.

ಅಂತಾರಾಷ್ಟ್ರೀಯ ತಜ್ಞರಿಂದಲೂ ನೆರವು

41 ಕಾರ್ಮಿಕರ ರಕ್ಷಣೆಗಾಗಿ ವಿದೇಶಿ ತಜ್ಞರಿಂದಲೂ ನೆರವು ಪಡೆಯಲಾಗುತ್ತಿದೆ. ಅಂತಾರಾಷ್ಟ್ರೀಯ ಟನೆಲಿಂಗ್‌ ಆ್ಯಂಡ್‌ ಅಂಡರ್‌ಗ್ರೌಂಡ್‌ ಸ್ಪೇಸ್‌ ಅಸೋಸಿಯೇಶನ್‌ ಅಧ್ಯಕ್ಷ ಅರ್ನಾಲ್ಡ್‌ ಡಿಕ್ಸ್‌ ಅವರು ರಕ್ಷಣ ಕಾರ್ಯಾಚರಣೆಯಲ್ಲಿದ್ದಾರೆ. ಇವರು ಮತ್ತು ಇವರ ತಂಡವು ಸ್ಥಳದಲ್ಲೇ ಇದ್ದು, ಸಹಾಯ ಮಾಡುತ್ತಿದೆ. ಇದರ ಜತೆಗೆ ಥೈಲ್ಯಾಂಡ್‌ ಸೇರಿದಂತೆ ಬೇರೆ ದೇಶಗಳ ತಜ್ಞರ ನೆರವನ್ನೂ ಪಡೆಯಲಾಗಿದೆ.

11 ದಿನ ಆಗಿದ್ದೇನು?

ನ 12 ಅಂದು ಬೆಳಗಿನ ಜಾವ 5.30ರ ವೇಳೆಗೆ ಸುರಂಗದ ಒಂದು ಭಾಗ ದಿಢೀರನೇ ಕುಸಿಯಿತು. ಹೊರಗಿದ್ದವರು ಕುಸಿದ ತತ್‌ಕ್ಷಣ ಕೂಗಿಕೊಂಡರು. ಆದರೆ ಒಳಗಿನವರಿಗೆ ಕೇಳಿಸದ ಕಾರಣ ಅಲ್ಲೇ ಉಳಿದರು. ಆರಂಭದಲ್ಲಿ ಏನಾಯಿತು ಎಂಬುದೇ ಯಾರಿಗೂ ಗೊತ್ತಾಗಿರಲಿಲ್ಲ. ಅಲ್ಲೇ ಇದ್ದ ಕಾರ್ಮಿಕರೆಲ್ಲರೂ ತಪ್ಪಿಸಿಕೊಂಡಿರುವವರ ಅಥವಾ ಒಳಗೆ ಉಳಿದಿರುವವರ ಬಗ್ಗೆ ಹುಡುಕಾಟ ನಡೆಸಿದರು. ಅಂದರೆ ಅಂ ದು ರಾತ್ರಿ ಪಾಳಿಗೆ ಬಂದವರ ಬಗ್ಗೆಯೂ ಹುಡುಕಾ ಟ ನಡೆಸಿದರು. ಇದು ಸಣ್ಣ ಮಟ್ಟದ ಕುಸಿತ ಎಂದೇ ಅವರು ತಿಳಿದಿದ್ದರು. ತತ್‌ಕ್ಷಣವೇ ಅಲ್ಲಿ ಬಿದ್ದಿದ್ದ ಕಲ್ಲುಗಳನ್ನು ತೆಗೆಯಲು ಯತ್ನಿಸಿದಾಗ ದೊಡ್ಡ ಮಟ್ಟದಲ್ಲೇ ಕುಸಿತವಾಗಿರುವುದು ಗೊತ್ತಾಯಿತು. ಕೂಡಲೇ ಕಾರ್ಮಿಕರು ರಾಜ್ಯ ವಿಪತ್ತು ನಿರ್ವಹಣ ಪಡೆಗೆ ಮಾಹಿತಿ ನೀಡಿ ಕರೆಸಿಕೊಂಡರು.

ನ 12,13 ಈ ಎರಡೂ ದಿನಗಳು ರಾಜ್ಯ ವಿಪತ್ತು ಸ್ಪಂದನ ಪಡೆ(ಎಸ್‌ಡಿಆರ್‌ಎಫ್)ಯ ಸದಸ್ಯರು, ಬಿದ್ದಿದ್ದ ಕಲ್ಲುಗಳನ್ನು ತೆಗೆಯಲು ಶುರು ಮಾಡಿದರು. ಆದರೆ ತೆಗೆದಂತೆ ಮತ್ತೆ ಮತ್ತೆ ಕಲ್ಲು, ಮಣ್ಣು ಬೀಳುತ್ತಲೇ ಇತ್ತು. ಹೀಗಾಗಿ ಶಾಟ್‌ಕ್ರೀಟ್‌ ಮಾದರಿಯನ್ನು ಬಳಸಿ ತೆಗೆಯಲು ನೋಡಿದರು. ಇದರಲ್ಲಿ ಸ್ವಲ್ಪವೇ ಯಶಸ್ಸು ಕಂಡರು. ಇದರ ಜತೆಗೆ ಒಳಗೆ ಸಿಲುಕಿರುವವರನ್ನು ಸುರಕ್ಷಿತವಾಗಿ ವಾಪಸ್‌ ಕರೆಸಲೇಬೇಕಾಗಿತ್ತು. ಹೀಗಾಗಿ ಮತ್ತೆ ಮತ್ತೆ ಮೇಲಿಂದ ಬೀಳುತ್ತಿದ್ದ ಕಲ್ಲು ಮತ್ತು ಮಣ್ಣು ತೆಗೆಯುತ್ತಲೇ ಇದ್ದರು. ಆದರೆ ಇವರು ತೆಗೆದಂತೆ ಮೇಲಿಂದ ಮೇಲೆ ಬೀಳುತ್ತಲೇ ಇತ್ತು. ಹೀಗಾಗಿ ಬೇರೆ ಯೋಜನೆ ಹಾಕಿಕೊಳ್ಳುವ ಜರೂರತ್ತು ಉಂಟಾಯಿತು.

ನ 14ಕಾರ್ಮಿಕರ ರಕ್ಷಣೆಗಾಗಿ ಎಸ್‌ಡಿಆರ್‌ಎಫ್ ಹೊಸ ತಂತ್ರಗಾರಿಕೆಯ ಮೊರೆ ಹೋಯಿತು. ಡೆಹ್ರಾಡೂನ್‌ನಿಂದ ಆಗರ್‌ ಯಂತ್ರವನ್ನು ತರಿಸಿ, ಇದರ ಮೂಲಕ ಕೊರೆಸಿ, 900 ಎಂಎಂ ಅಗಲದ ಪೈಪ್‌ ಹಾಕುವ ಕೆಲಸ ಮಾಡಲಾಯಿತು. ಆದರೆ ಈ ಮೆಷಿನ್‌ಗೆ ಕೇವಲ 2 ಮೀಟರ್‌ ಅಷ್ಟೇ ಕೊರೆಯಲು ಸಾಧ್ಯವಾಯಿತು. ಮುಂದಕ್ಕೆ ಹೋಗಲು ಆಗಲೇ ಇಲ್ಲ.

ನ 15 ಮುಂದಿನ ಹಾದಿಯಲ್ಲಿ ರಕ್ಷಣ ಕಾರ್ಯಾಚರಣೆ ನಡೆಸುತ್ತಿದ್ದವರು, ಅಮೆರಿಕ ಮೂಲದ ದೊಡ್ಡ ಯಂತ್ರದ ಮೊರೆ ಹೋದರು. ಇದು ಡ್ರಿಲ್ಲಿಂಗ್‌ ಮೆಷಿನ್‌ ಆಗಿದ್ದು, ದ್ಲಿಲಿಯಿಂದ ವಿಮಾನದ  ಮೂಲಕ ತರಿಸಿಕೊಳ್ಳಲಾಯಿತು. ಅಂದರೆ ದಿಲ್ಲಿಯಿಂದ ಈ ಯಂತ್ರವನ್ನು ಮೂರು ಭಾಗ ಮಾಡಿ, ಎರಡು ಹರ್ಕಲಸ್‌ ಸಿ-130 ವಿಮಾನದಲ್ಲಿ ತರಲಾಯಿತು. ಬಳಿಕ ಘಟನ ಸ್ಥಳದಲ್ಲಿ ಜೋಡಿಸಲಾಯಿತು.

ನ 16 ಈ ಯಂತ್ರದಿಂದ ಸಾಕಷ್ಟು ಪ್ರಯೋಜನಗಳೂ ಆದವು. ಅಂದು ಬೆಳಗ್ಗೆಯೇ ಯಂತ್ರ ಕೊರೆಯಲು ಆರಂಭಿಸಿತು. ಕೇವಲ ಅರ್ಧಗಂಟೆಯಲ್ಲಿ 3 ಮೀ. ಕೊರೆದಿತ್ತು. ಸಂಜೆ ವೇಳೆಗೆ 9 ಮೀ.ನಷ್ಟು ಕೊರೆದಿತ್ತು.

ನ 17 ಈ ಯಂತ್ರವೂ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿತು. ಆದರೆ 22ನೇ ಮೀಟರ್‌ ಕೊರೆದಿದ್ದಾಗ ತೊಂದರೆಗಳು ಶುರುವಾದವು. ಅಲ್ಲಿಂದ ಮುಂದಕ್ಕೆ ಹೋಗಲು ಯಂತ್ರ ವಿಫ‌ಲವಾಯಿತು. ಇದರ ಬೀಯರಿಂಗ್‌ಗಳಿಗೆ ಹಾನಿಯಾಯಿತು. ಇಂದೋರ್‌ನಿಂದ ಬ್ಯಾಕ್‌ಅಪ್‌ ಮೆಷಿನ್‌ ತರಿಸಿಕೊಳ್ಳಲು ನಿರ್ಧರಿಸಲಾಯಿತು.ಜತೆಗೆ ಕಾರ್ಯಾಚರಣೆ ನಡೆಸುತ್ತಿದ್ದವರಿಗೆ ಬೇರೆ ರೀತಿಯ ಶಬ್ದ ಬರುತ್ತಿರುವುದು ಗೊತ್ತಾಯಿತು. ಅಂದು ಮಧ್ಯಾಹ್ನ 2.45ರ ವೇಳೆಗೆ ದೊಡ್ಡ ಮಟ್ಟದ ಶಬ್ದ ಕೇಳಿಸಿತು. ಆಗ ಬೆಟ್ಟ ಮತ್ತೆ ಕುಸಿಯುತ್ತಿರುವುದು ಕಂಡು ಬಂದ ಕಾರಣ, ಕಾರ್ಯಾಚರಣೆ ಸ್ಥಗಿತ ಮಾಡಲಾಯಿತು.

ನ 18 ಸತತ ತೊಂದರೆಗಳ ಹೊರತಾಗಿಯೂ, ರಕ್ಷಣ ಕಾರ್ಯಾಚರಣೆ ನಡೆಸುತ್ತಿದ್ದವರು ಬೇರೆ ಮಾರ್ಗಗಳಿಗಾಗಿ ಹುಡುಕಾಟ ನಡೆಸುತ್ತಲೇ ಇದ್ದರು. ಬೆಟ್ಟದ ಮೇಲಿಂದ ನೇರವಾಗಿ ಕೆಳಗೆ ಕೊರೆಯುವ ನಿರ್ಧಾರಕ್ಕೂ ಬಂದರು. ಇದರ ಜತೆಯಲ್ಲೇ ಒಳಗಿದ್ದವರ ಕುಟುಂಬ ಸದಸ್ಯರು, ಸಂಬಂಧಿಗಳು ಬರಲು ಆರಂಭಿಸಿದರು. ಜತೆಗೆ ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಬಂದರು.

ನ 19 ಕಾರ್ಯಾಚರಣೆಗೆ ತಡೆಯಾದ ಹಿನ್ನೆಲೆಯಲ್ಲಿ ಉತ್ತರಾಖಂಡ ಸರಕಾರ, ಬೇರೆ ಆಯ್ಕೆಗಳ ಮೊರೆ ಹೋಗಲು ನಿರ್ಧರಿಸಿತು. ಈ ಸಂಬಂಧ ಸಭೆ ನಡೆಸಿ ನಿರ್ಧಾರ ತೆಗೆದುಕೊಂಡಿತು. ಅಲ್ಲದೆ ಐದು ಸಂಸ್ಥೆಗಳನ್ನು ಕರೆಸಲೂ ತೀರ್ಮಾನಿಸಿತು. ಅವುಗಳೆಂದರೆ ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆ, ಸಟ್ಲೆಜ್‌ ಜಲ ವಿದ್ಯುತ್‌ ನಿಗಮ, ರೈಲು ವಿಕಾಸ ನಿಗಮ ಲಿಮಿಟೆಡ್‌, ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ, ತೆಹ್ರಿ ಹೈಡ್ರೋ ಅಭಿವೃದ್ಧಿ ಕಾರ್ಪೊರೇಶನ್‌  ಲಿಮಿಟೆಡ್‌ ಅನ್ನು ರಕ್ಷಣ ಕಾರ್ಯಾಚರಣೆಗೆ ನೇಮಕ ಮಾಡಲಾಯಿತು.

ನ 20 ಮೊದಲ ಯಶಸ್ಸು ಎನ್ನುವಂತೆ ಕಾರ್ಮಿಕರು ಸಿಲುಕಿರುವ ಪ್ರದೇಶಕ್ಕೆ 6 ಇಂಚಿನ ರಂಧ್ರ ಕೊರೆದು, ಪೈಪ್‌ ತೂರಿಸಲಾಯಿತು. ಇದರ ಮೂಲಕ ಅಗತ್ಯ ವಸ್ತುಗಳನ್ನು ಕಳುಹಿಸಲು ಆರಂಭಿಸಲಾಯಿತು.

ನ 21 ಬೆಳಗಿನ ಜಾವ 3.45ರ ವೇಳೆಗೆ ಪೈಪ್‌ ಮೂಲಕ ಎಂಡೋಸ್ಕೋಪಿಕ್‌ ಕೆಮರಾವನ್ನು ಕಳುಹಿಸಲಾಯಿತು. ಈ ಮೂಲಕ ಒಳಗಿದ್ದವರ ಕುರಿತ ಮೊದಲ ದೃಶ್ಯಾವಳಿ ಸೆರೆ ಹಿಡಿಯಲಾಯಿತು. 10 ದಿನಗಳ ಬಳಿಕ ಒಳಗೆ ಸಿಲುಕಿರುವ ಕಾರ್ಮಿಕರಿಗೆ ಹಣ್ಣು ಮತ್ತು ಆಹಾರ ಒದಗಿಸಲಾಯಿತು. ಬಳಿಕ ರಕ್ಷಣ  ಕಾರ್ಯಾಚರಣೆಯನ್ನೂ ಮುಂದುವರಿಸಲಾಯಿತು.

ನ 22 ಇಡೀ ರಕ್ಷಣ ಕಾರ್ಯಾಚರಣೆಯಲ್ಲಿ ಅತ್ಯಂತ ಪ್ರಮುಖ ದಿನ. ಸುಮಾರು 39 ಮೀ.ನಷ್ಟು ಡ್ರಿಲ್ಲಿಂಗ್‌ ಮಾಡಲಾಯಿತು. ಉಳಿದಂತೆ ಕೇವಲ 10ರಿಂದ 12 ಮೀ. ಮಾತ್ರ ಬಾಕಿಯಿತ್ತು. ಈ ವೇಳೆ ಕಬ್ಬಿಣದ ರಾಡ್‌ಗಳು ಕಂಡು ಬಂದಿದ್ದವು.

ನ 23 ರಕ್ಷಣ ಸಿಬಂದಿ ಅಡ್ಡವಾಗಿದ್ದ ಕಬ್ಬಿಣದ ಕಂಬಿಗಳನ್ನು ತೆಗೆದರು. ಹೀಗಾಗಿ ಪೈಪ್‌ಗಳನ್ನು ತೂರಿಸುತ್ತಾ, ಕಾರ್ಮಿಕರು ಇರುವ ಕಡೆಗೆ ಡ್ರಿಲ್ಲಿಂಗ್‌ ಮುಂದುವರಿಸಿದರು. ಅಮೆರಿಕದ ಅಗರ್‌ ಯಂತ್ರದ ಮೂಲಕವೇ ಈ ರಕ್ಷಣ ಕಾರ್ಯಾಚರಣೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next