ಉತ್ತರಕಾಶಿ: ಸತತ ಹದಿನೇಳು ದಿನಗಳಿಂದ ದೇಶಾದ್ಯಂತ ಆತಂಕ, ದುಗುಡ ಸೃಷ್ಟಿಸಿದ್ದ ಉತ್ತರಕಾಶಿಯಲ್ಲಿ ಮಂಗಳವಾರ ಸೂರ್ಯಾಸ್ತವಾಗುತ್ತಿದ್ದಂತೆ ಹರ್ಷದ ಹೊನಲು ಹೊಮ್ಮಿತ್ತು. ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿದ್ದ ಎಲ್ಲ 41 ಕಾರ್ಮಿಕರನ್ನೂ ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಯಿತು.
ಈ ಮೂಲಕ ದೇಶ-ವಿದೇಶಗಳ ಸುರಂಗ ತಜ್ಞರು, ಎನ್‌ಡಿಆರ್‌ಎಫ್, ಸೇನಾ ತಂಡಗಳು, ರ್ಯಾಟ್ ಹೋಲ್ ಮೈನರ್‌ಗಳ ಸತತ 400ಕ್ಕೂ ಅಧಿಕ ತಾಸುಗಳ ಪರಿಶ್ರಮಕ್ಕೆ ಕೊನೆಗೂ ಫಲ ಸಿಕ್ಕಿತು. ದೇಶದ ಕೋಟ್ಯಂತರ ಜನರ ಪ್ರಾರ್ಥನೆಯೂ ಫಲಿಸಿತು. ರಕ್ಷಣ ಕಾರ್ಯಾಚರಣೆಯ ಕೊನೆಯ ಹಂತದಲ್ಲಿ ರ್ಯಾಟ್ ಹೋಲ್ ಮೈನರ್‌ಗಳು ಕೈಯಿಂದಲೇ 12 ಮೀ. ದೂರ ಅವಶೇಷಗಳನ್ನು ಅಗೆದು ಕಾರ್ಮಿಕರಿದ್ದಲ್ಲಿಗೆ ತಲುಪಿದರು.
ಅನಂತರ 2 ಮೀ. ವ್ಯಾಸದ ಪೈಪ್‌ನೊಳಗೆ ನುಗ್ಗಿದ ಎನ್‌ಡಿಆರ್‌ಎಫ್ ತಂಡದ ಸದಸ್ಯರು ವಿಶೇಷವಾಗಿ ತಯಾರಿಸಲಾದ ಚಕ್ರಗಳಿರುವ ಸ್ಟ್ರೆಚರ್ ಮೇಲೆ ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಮಲಗಿಸಿದರು. ಅನಂತರ ಹಗ್ಗದ ಸಹಾಯದಿಂದ ಒಬ್ಬೊಬ್ಬರನ್ನೇ ಹೊರಕ್ಕೆ ಎಳೆಯಲಾಯಿತು.
ಸುರಂಗದೊಳಗೇ ಸಮಾಧಿಯಾಗುವ ಭಯದ ನಡುವೆಯೂ ಭರವಸೆಯನ್ನು ಹೊತ್ತು ಇಷ್ಟು ದಿನ ಕಾದಿದ್ದ ಕಾರ್ಮಿಕರ ಕಂಗಳು ಹೊರಪ್ರಪಂಚವನ್ನು ನೋಡುತ್ತಲೇ ಹನಿಗೂಡಿದವು. ಕಾರ್ಮಿಕರ ಕುಟುಂಬ ಸದಸ್ಯರು ಮಾತ್ರವಲ್ಲದೆ ರಕ್ಷಣ ತಂಡದ ಸದಸ್ಯರು, ಸ್ಥಳೀಯರು ಸಿಹಿಹಂಚಿ ಹರ್ಷ ವ್ಯಕ್ತಪಡಿಸಿದರು. ಕಾರ್ಮಿಕರು ಹೊರ ಬರುತ್ತಿದ್ದಂತೆ ಅವರನ್ನು 30 ಕಿ.ಮೀ. ದೂರದಲ್ಲಿ ನಿರ್ಮಿಸಲಾಗಿದ್ದ ತುರ್ತು ವೈದ್ಯಕೀಯ ಘಟಕಕ್ಕೆ ಕರೆದೊಯ್ಯಲಾಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಮಿ ಸಹಿತ ಪ್ರಮುಖರು ರಕ್ಷಣ ತಂಡ ತೋರಿದ ಬದ್ಧತೆ, ಸಿಲುಕಿಕೊಂಡಿದ್ದ ಕಾರ್ಮಿಕರ ಧೈರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಉತ್ತರಕಾಶಿಯಲ್ಲಿ ನಮ್ಮ ಶ್ರಮಿಕ ಸಹೋದರರ ರಕ್ಷಣ ಕಾರ್ಯಾಚರಣೆಯು ನಮ್ಮೆಲ್ಲರನ್ನೂ ಭಾವುಕರನ್ನಾಗಿಸಿದೆ. ಕಾರ್ಮಿಕರ ಸಾಹಸ ಮತ್ತು ಧೈರ್ಯವು ಎಲ್ಲರಿಗೂ ಪ್ರೇರಣೆ. ರಕ್ಷಣ ತಂಡದ ಬದ್ಧತೆ, ಸಂಕಲ್ಪ ಶಕ್ತಿಯು ಕಾರ್ಮಿಕರಿಗೆ ಹೊಸ ಬದುಕು ಕಲ್ಪಿಸಿದೆ. ಇವರೆಲ್ಲರೂ ಅಭಿನಂದನಾರ್ಹರು.
– ನರೇಂದ್ರ ಮೋದಿ, ಪ್ರಧಾನಿ
ಇದನ್ನೂ ಓದಿ: IFFI: ಈಗ ನಾವು ರೂಪಿಸುತ್ತಿರುವುದು ಕಾಂತಾರದ ಎರಡನೇ ಭಾಗವಲ್ಲ… – ರಿಷಬ್ ಶೆಟ್ಟಿ