ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಸಿಲ್ ಕ್ಯಾರಾ ಸುರಂಗದೊಳಗೆ ಕಳೆದ 13 ದಿನಗಳಿಂದ ಕಾರ್ಮಿಕರು ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಆದರೆ ಕೆಲವು ಅಡಿಗಳು ಕಾಣಿಸಿಕೊಳ್ಳುತ್ತಿದ್ದು, ಇದೀಗ ಗುರುವಾರ ತಡರಾತ್ರಿ ಡ್ರಿಲ್ಲಿಂಗ್ (ಕೊರೆಯುವ) ಮೆಷಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ರಕ್ಷಣಾ ಕಾರ್ಯಾಚರಣೆ ಮತ್ತೆ ಸ್ಥಗಿತಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Horoscope:ಸಾಧನೆಯ ಹಾದಿಯಲ್ಲಿ ಪರೀಕ್ಷೆಗಳು ಒಳ್ಳೆ ಪಾಠ,ಉದ್ಯೋಗ ಸ್ಥಾನದಲ್ಲಿ ವಿಭಾಗ ಬದಲಾವಣೆ
ಸಿಲ್ ಕ್ಯಾರಾ ಸುರಂಗದ ಕಾರ್ಯಾಚರಣೆ ನಡೆಸುತ್ತಿರುವ ಸ್ಥಳದಿಂದ ಸುಮಾರು 57 ಮೀಟರ್ ದೂರದಲ್ಲಿ ಕಾರ್ಮಿಕರು ಸಿಲುಕಿಕೊಂಡಿದ್ದರು. ಹಲವು ತೊಂದರೆಗಳ ನಡುವೆಯೂ ಈವರೆಗೆ ಸುಮಾರು 46.8 ಮೀಟರ್ ಗಳಷ್ಟು ದೂರದವರೆಗೆ ಕಾರ್ಯಾಚರಣೆ ನಡೆಸಲಾಗಿತ್ತು.
ಎಎನ್ ಐಗೆ ಅಧಿಕಾರಿಗಳು ತಿಳಿಸಿರುವ ಮಾಹಿತಿ ಪ್ರಕಾರ, ಸುರಂಗ ರಕ್ಷಣಾ ಕಾರ್ಯಾಚರಣೆಗೆ ಬಳಸಿರುವ ಡ್ರಿಲ್ಲಿಂಗ್ ಮೆಷಿನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಅದನ್ನು ಸರಿಪಡಿಸಿ ರಕ್ಷಣಾ ಕಾರ್ಯ ಮುಂದುವರಿಸಲಾಗುವುದು. ಇನ್ನು ಯಾವುದೇ ಅಡ್ಡಿ ಉಂಟಾಗಲಾರದು ಎಂದು ತಿಳಿಸಿದ್ದಾರೆ.
ಸಿಲ್ ಕ್ಯಾರಾ ಸುರಂಗ ರಕ್ಷಣಾ ಕಾರ್ಯಾಚರಣೆ ಬುಧವಾರ ಅಂತಿಮ ಹಂತ ತಲುಪಿದ್ದು, ಕಾರ್ಮಿಕರನ್ನು ಹೊರ ತರುವುದಾಗಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಕೊನೆ ಹಂತದಲ್ಲಿ ತಾಂತ್ರಿಕ ದೋಷದಿಂದಾಗಿ ವಿಳಂಬವಾಗಿದ್ದು, ಶುಕ್ರವಾರ ಮಧ್ಯಾಹ್ನದೊಳಗೆ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರ ತರಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.