Advertisement

ಧಗಧಗಿಸುತ್ತಿದೆ ಉತ್ತರ ಕನ್ನಡ: ಪೊಲೀಸರ ಘೋರ ವೈಫ‌ಲ್ಯ

12:35 PM Dec 13, 2017 | |

ಹೊನ್ನಾವರದಲ್ಲಿ ಕೆಲ ದಿನಗಳ ಹಿಂದೆ ಪ್ರಾರಂಭವಾಗಿರುವ ಗಲಾಟೆ ಈಗ ಪೂರ್ಣವಾಗಿ ಕೋಮುಗಲಭೆಯ ರೂಪ ಪಡೆದುಕೊಂಡಿದೆ. ಸುಮಾರು ಹತ್ತು ದಿನಗಳಿಂದ ಹಿಂಸಾಚಾರದ ಕೇಂದ್ರ ಸ್ಥಾನವಾಗಿರುವ ಹೊನ್ನಾವರವೂ ಸೇರಿದಂತೆ ಜಿಲ್ಲೆಯಾದ್ಯಂತ ವ್ಯಾಪಾರ ವಹಿವಾಟುಗಳು ಮತ್ತು ವಾಹನ ಓಡಾಟ ಅಸ್ತವ್ಯಸ್ತವಾಗಿ ಜನರು ಬವಣೆ ಅನುಭವಿಸುತ್ತಿದ್ದಾರೆ.

Advertisement

ಹೊನ್ನಾವರದಲ್ಲಿ ಪ್ರಾರಂಭವಾಗಿರುವ ಹಿಂಸಾ ಚಾರ, ಕುಮಟಾ, ಶಿರಸಿ ಪೇಟೆಗಳಿಗೂ ಹರಡಿದೆ. ನಿತ್ಯ ಪ್ರತಿಭಟನೆ, ಮೆರವಣಿಗೆ, ಕಲ್ಲುತೂರಾಟ, ಕಿಚ್ಚಿಕ್ಕುವಿಕೆ ಮುಂತಾದ ಕುಕೃತ್ಯಗಳು ನಡೆಯುತ್ತಿವೆ. ಸೋಮವಾರ ಐಜಿಪಿ ಹೇಮಂತ ನಿಂಬಾಳ್ಕರ್‌ ಕಾರಿಗೆ ಬೆಂಕಿ ಹಚ್ಚಲಾಗಿದೆ. ಮಂಗಳವಾರ ಶಿರಸಿ ಬಂದ್‌ ವೇಳೆ ವ್ಯಾಪಕವಾಗಿ ಹಿಂಸಾಚಾರ ನಡೆದು ಹಲವು ವಾಹನಗಳಿಗೆ ಮತ್ತು ಕಟ್ಟಡಗಳಿಗೆ ಹಾನಿ ಯಾಗಿದೆ. ಕಳೆದ ಕೆಲವು ವರ್ಷಗಳಿಂದ ದೊಡ್ಡಮಟ್ಟದ ಗಲಭೆಗಳು ನಡೆಯದೆ ಶಾಂತವಾಗಿದ್ದ ಉತ್ತರಕನ್ನಡ ಇದೀಗ ಉದ್ವಿಗ್ನಗೊಂಡಿದ್ದು, ಪರಿಸ್ಥಿತಿ ಕೈಮೀರಿ ಹೋಗುವ ಆತಂಕ ಕಾಣಿಸಿಕೊಂಡಿದೆ. ಇಷ್ಟಾಗಿದ್ದರೂ ಸರಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ಅಚ್ಚರಿ ಯುಂಟು ಮಾಡುತ್ತಿದೆ.

ಉತ್ತರ ಕನ್ನಡದ ಹಿಂಸಾಚಾರದಲ್ಲಿ ಎದ್ದು ಕಾಣುತ್ತಿರುವುದು ಪೊಲೀಸರ ಘೋರ ವೈಫ‌ಲ್ಯ. ಚುನಾವಣೆ ಹೊತ್ತಿಗಾಗುವಾಗ ರಾಜ್ಯದಲ್ಲಿ ಕೋಮುಗಲಭೆಗಳು ಆಗುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಕೆಲ ತಿಂಗಳ ಹಿಂದೆಯೇ ವರದಿ ನೀಡಿದ್ದರೂ ಸರಕಾರ ಎಚ್ಚೆತ್ತುಕೊಂಡಿಲ್ಲ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಗೃಹ ಖಾತೆಗೆ ಹೊಸ ಸಚಿವರು ಬಂದಿದ್ದರೂ ಇಲಾಖೆ ತನ್ನ ಹಳೇ ಕಾರ್ಯಶೈಲಿಯನ್ನು ಮಾತ್ರ ಬದಲಾಯಿಸಿಕೊಂಡಿಲ್ಲ.  ಬೈಕ್‌ ಸವಾರ ಮತ್ತು ಅಟೋರಿಕ್ಷಾ ಚಾಲಕನ ನಡುವೆ ಚಿಕ್ಕದೊಂದು ಕಾರಣಕ್ಕೆ ನಡೆದ ಜಗಳವೇ ಹೊನ್ನಾವರದ ಕೋಮುಗಲಭೆಯ ಮೂಲ ಕಾರಣ. ಡಿ.6ರಂದು ಹೊನ್ನಾವರ ಪೇಟೆಯಲ್ಲಿ ತುಸು ಬಿಗು ವಾತಾ ವರಣವಿತ್ತು. ಈ ಸಂದರ್ಭದಲ್ಲಿ ಒಂದು ಕೋಮಿನ ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಅವರನ್ನು ಚದುರಿಸಲು ಪ್ರಯತ್ನಿಸಿದ್ದಾರೆ. ಬೆ

ಸ್ತ ಸಮುದಾಯದ ಯುವಕ ಪರೇಶ್‌ ಮೇಸ್ತ ಎಂಬುವರು ಈ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಶುಕ್ರವಾರ ಶನಿ ಗುಡಿಯ ಹಿಂಭಾಗ ದಲ್ಲಿರುವ ಶೆಟ್ಟಿ ಕೆರೆಯಲ್ಲಿ ಮೇಸ್ತ ಶವ ಪತ್ತೆಯಾಗಿದೆ. ಈ ಸಾವಿನ ಕುರಿತು ಹಲವು ಗೊಂದಲಗಳಿವೆ. ಫೇಸ್‌ಬುಕ್‌, ವಾಟ್ಸಪ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ಮೇಸ್ತ ಶವದ ಚಿತ್ರ ನೋಡಿದರೆ ಬೆಚ್ಚಿ ಬೀಳಿಸುವಂತಿದೆ. ಅವರನ್ನು ಪೇಟೆಯಲ್ಲಿರುವ ಒಂದು ಹೊಟೇಲಿನಲ್ಲಿ ಕೂಡಿ ಹಾಕಿ ಬರ್ಬರವಾಗಿ ಹಿಂಸಿಸಿ ಸಾಯಿಸಲಾಗಿದೆ. ಇದರ ಹಿಂದೆ ಮೂಲಭೂತವಾದಿಗಳು ಇದ್ದಾರೆ ಎನ್ನುವುದು ಆರೋಪ. ಆದರೆ ಪೊಲೀಸರು ಮೇಸ್ತ ಅವರದ್ದು ಸಹಜ ಸಾವು ಎಂದು ಹೇಳುತ್ತಿದ್ದಾರೆ ಹಾಗೂ ಅವರಿಗೆ ಚಿತ್ರಹಿಂಸೆ ನೀಡಿರುವುದನ್ನು ನಿರಾಕರಿಸುತ್ತಿದ್ದಾರೆ. ಯುವಕನೊಬ್ಬ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವುದು ಸಹಜ ಸಾವು ಹೇಗಾಗುತ್ತದೆ ಎನ್ನುವುದನ್ನು ಪೊಲೀಸರೇ ವಿವರಿಸಬೇಕಷ್ಟೆ. ಈ ನಡುವೆ ಗುರುವಾರ ಸಿಎಂ ಸಿದ್ದರಾಮಯ್ಯ ಈ ದಾರಿಯಾಗಿ ಹೋಗಿದ್ದಾರೆ. ಆ ದಿನವೇ ಮೇಸ್ತ ಸಾವು ಸಂಭವಿಸಿತ್ತು. ಮುಖ್ಯಮಂತ್ರಿ ಬರುತ್ತಿದ್ದಾರೆ ಎಂಬ ಕಾರಣಕ್ಕೆ ಈ ವಿಷಯವನ್ನು ಮುಚ್ಚಿಟ್ಟಿದ್ದರು ಎನ್ನುವುದು ಇಲ್ಲಿನ ಹಿಂದು ಸಂಘಟನೆಗಳ ಆರೋಪ.

ಮಂಗಳೂರಿನಲ್ಲಿ ಶರತ್‌ ಮಡಿವಾಳ ಎಂಬವರ ಹತ್ಯೆಯಾದಾಗಲೂ ಸಿಎಂ ವಿರುದ್ಧ ಇದೇ ರೀತಿಯ ಆರೋಪ ಕೇಳಿ ಬಂದಿತ್ತು. ಇದಲ್ಲದೆ ಕೆಲವು ಮಂದಿ ಡಿ.6ರಂದು ತಲವಾರು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದರೂ ಪೊಲೀಸರು ಅವರನ್ನು ಬಂಧಿಸಿರಲಿಲ್ಲ ಎಂಬ ಆರೋಪವೂ ಇದೆ. ಈ ಕುರಿತಾದ ಕೆಲವು ವೀಡಿಯೊ ದೃಶ್ಯಗಳು ಕೂಡ ಸಾಮಾಜಿಕ ತಾಣದಲ್ಲಿ ಕಾಣಸಿಕ್ಕಿವೆ. ಇವೆಲ್ಲ ಆರೋಪಗಳೇ ಆಗಿದ್ದರೂ ಆರಂಭಿಕ ಹಂತದಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿಸಿದ್ದಾರೆ ಮತ್ತು ನಿಷ್ಪಕ್ಷಪಾತವಾಗಿ ನಡೆದುಕೊಂಡಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.  ಕಳೆದ ಜುಲೈಯಿಂದೀಚೆಗೆ ಸರಿ ಸುಮಾರು ಮೂರು ತಿಂಗಳು ಮಂಗಳೂರು ಭಾಗದಲ್ಲಿ ಕೋಮುಗಲಭೆ ಸಂಭವಿಸಿದೆ.

Advertisement

ಬಿ.ಸಿ.ರೋಡ್‌, ಕಲ್ಲಡ್ಕ, ಬಂಟ್ವಾಳ, ಪುತ್ತೂರು ಸೇರಿದಂತೆ ಹಲವೆಡೆ ಅಹಿತಕರ ಘಟನೆಗಳು ನಡೆದಿರುವುದು ಇನ್ನೂ ಹಸಿರಾಗಿದೆ. ಕೆಲವು ಕೊಲೆಗಳು ನಡೆದು ಪರಿಸ್ಥಿತಿ ಶಾಂತವಾಗಲು ಬಹಳ ದಿನ ಹಿಡಿದಿತ್ತು. ಸುಮಾರು ಎರಡೂವರೆ ತಿಂಗಳು 144 ಸೆಕ್ಷನ್‌ ನಿರ್ಬಂಧದಡಿಯಲ್ಲಿ ಜನರ ಬದುಕು ಸಾಗಿತ್ತು. ಕೋಮುಗಲಭೆಗೆ ರಾಜಕೀಯ ಬಣ್ಣವೂ ಸೇರಿಕೊಂಡರೆ ಏನಾಗಬೇಕೋ ಅದು ಮಂಗಳೂರಿನಲ್ಲೂ ಆಗಿದೆ, ಹೊನ್ನಾವರದಲ್ಲೂ ಆಗುತ್ತಿದೆ. ಏಕೋ ರಾಜ್ಯದಲ್ಲಿ ಈ ಮಾದರಿಯ ಕೋಮುಗಲಭೆಗಳು ನಡೆದ ಸಂದರ್ಭದಲ್ಲೆಲ್ಲ ಸರಕಾರದ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಸರಕಾರವಾಗಲಿ, ವಿಪಕ್ಷವಾಗಲಿ ಹಿಂಸಾಚಾರದ ಬೆಂಕಿಯಲ್ಲಿ ರಾಜಕೀಯ ಲಾಭದ ಲೆಕ್ಕಾಚಾರ ಹಾಕುವುದು ಸರಿಯಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next