ಹರಿದ್ವಾರ್: 40 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣ ಉತ್ತರಾಖಂಡ್ ನ ಪೊಲೀಸರಿಗೆ ಹಿಂದೆಂದೂ ಊಹಿಸಲಾರದಷ್ಟು ಗೊಂದಲಕ್ಕೆ ಸಿಲುಕಿದ ಘಟನೆಯೊಂದು ವರದಿಯಾಗಿದೆ. ಇದಕ್ಕೆ ಮುಖ್ಯ ಕಾರಣವಾಗಿದ್ದು, ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಶವವನ್ನು ಪಡೆಯಲು ಐವರು ಪತ್ನಿಯರು ಬಂದಿದ್ದು!
ಇದು ನನ್ನ ಪತಿಯ ಶವ ಎಂದು ಐದು ಮಂದಿಯೂ ಪೊಲೀಸರಿಗೆ ತಿಳಿಸಿದ್ದರು. ನನ್ನ ಗಂಡ ಬೇರೊಂದು ಮದುವೆಯಾದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿಕೊಂಡಿದ್ದರಂತೆ. ಹೀಗೆ ಪೊಲೀಸ್ ಠಾಣೆಯಲ್ಲಿ ಆತನ ಶವ ಸಂಸ್ಕಾರದ ವಿಚಾರದಲ್ಲಿ ಗಲಾಟೆ ನಡೆದು ಹೈಡ್ರಾಮಾ ನಡೆದಿರುವುದು ಪೊಲೀಸರಿಗೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿತ್ತು ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ ಇನ್ನೂ ಇಬ್ಬರು ಮಹಿಳೆಯರು ಆಗಮಿಸಿ ತಾವು ಪತ್ನಿಯರು ಎಂದು ಹೇಳಿಕೊಂಡು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೀಗ ಶವದ ಅಂತ್ಯ ಸಂಸ್ಕಾರದ ವಿಚಾರಕ್ಕೂ ಮುನ್ನ ಪೊಲೀಸರು ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ಕಾದು ನೋಡಿದ ಮೇಲೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ಥಳೀಯ ಪೊಲೀಸರು ವಿವರ ನೀಡಿದ್ದಾರೆ.
ರವಿದಾಸ್ ಬಸ್ತಿ ನಿವಾಸಿಯಾದ ಪವನ್ ಕುಮಾರ್(40ವರ್ಷ) ವೃತ್ತಿಯಲ್ಲಿ ಚಾಲಕ. ಪೊಲೀಸರ ಮಾಹಿತಿ ಪ್ರಕಾರ, ಭಾನುವಾರ ರಾತ್ರಿ ಪವನ್ ವಿಷ ಸೇವಿಸಿದ್ದು ಪ್ರಜ್ಞಾಹೀನರಾಗಿ ಬಿದ್ದಿದ್ದನ್ನು ಗಮನಿಸಿ ಪತ್ನಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಮೃತ ಪವನ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ. ಪವನ್ ಸಾಮಾನ್ಯ ಜೀವನ ಶೈಲಿ ಹೊಂದಿದ್ದು, ಹೆಚ್ಚು ಗೆಳೆಯರು ಕೂಡಾ ಇಲ್ಲ. ಪವನ್ ಯಾಕೆ ಹೀಗೆ ಮಾಡಿಕೊಂಡ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಆಸ್ಪತ್ರೆಗೆ ತಂದು ಸೇರಿಸಿದ ಮಹಿಳೆಯರು ಪತ್ನಿ ಎಂದು ಹೇಳುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ. ಮೃತ ವ್ಯಕ್ತಿ ಪವನ್ ಬ್ಯಾಂಕ್ ಖಾತೆ ಜೀರೋ ಬ್ಯಾಲೆನ್ಸ್ ಹೊಂದಿದ್ದು, ಈತ ಬಾಡಿಗೆ ಮನೆಯಲ್ಲಿ ವಾಸವಾಗಿರುವುದಾಗಿ ಪೊಲೀಸ್ ಠಾಣಾಧಿಕಾರಿ ಪ್ರವೀಣ್ ಸಿಂಗ್ ಕೋಶಿಯಾರಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.