ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರೀ ಹಿಮಪಾತವಾಗುತ್ತಿರುವುದರಿಂದ ದೌಲಿ ಗಂಗಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು 150 ಕ್ಕಿಂತ ಹೆಚ್ಚು ಜನ ಕಾರ್ಮಿಕರು ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ.
ಕಾಣೆಯಾದ ಕಾರ್ಮಿಕರೆಲ್ಲರೂ ವಿದ್ಯುತ್ ಯೋಜನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಾಥಮಿಕ ವರದಿಯ ಪ್ರಕಾರ 10 ಜನರು ಮೃತಪಟ್ಟಿದ್ದು, 16 ಮಂದಿಯನ್ನು ರಕ್ಷಿಸಲಾಗಿದೆಯೆಂದು ತಿಳಿದುಬಂದಿದೆ.
ರಿಶಿಗಂಗಾ ವಿದ್ಯುತ್ ಯೋಜನೆಯಡಿಯಲ್ಲಿ 150 ಕಾರ್ಮಿಕರು ತಪೋವನ್-ರೇನಿಯಲ್ಲಿ ಕೆಲಸಮಾಡುತ್ತಿದ್ದು, ಈಗಾಗಲೇ 10 ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಪ್ರವಾಹ ಪರಿಸ್ಥಿತಿ ತಲೆದೋರಿದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದ್ದು, ITBP ತಂಡ, SDRF ಮತ್ತು NDRF ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಐಎಎಫ್ ಮತ್ತು ಸೇನಾ ಪಡೆ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದೆ.
ತಪೋವನ್ ಡ್ಯಾಂ ಬಳಿ ಸಿಲುಕಿದ್ದ 16 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಉತ್ತರಾಖಂಡದ ಘಟನೆಯ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಭಾರತವು ಉತ್ತರಾಖಂಡ ರಾಜ್ಯದ ಜೊತೆಗಿದೆ. ಅಲ್ಲಿನ ಪ್ರತಿಯೊಬ್ಬರ ಸುರಕ್ಷತೆಗಾಗಿ ದೇಶವು ಪ್ರಾರ್ಥಿಸುತ್ತದೆ. ಹಿರಿಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದು, ಎನ್‌ಡಿಆರ್‌ಎಫ್, ರಕ್ಷಣಾ ಕಾರ್ಯ ಮತ್ತು ಪರಿಹಾರ ಕಾರ್ಯಾಚರಣೆಗಳ ಕುರಿತು ಸತತ ಮಾಹಿತಿ ಪಡೆಯುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
150ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ: ಈಗಾಗಲೇ 10 ಮೃತದೇಹಗಳನ್ನು ನದಿಯಿಂದ ಹೊರಕ್ಕೆ ತೆಗೆಯಲಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ದುರ್ಘಟನೆಯ ವೇಳೆ 150ಕ್ಕಿಂತ ಹೆಚ್ಚು ಕಾರ್ಮಿಕರು ಸ್ಥಳದಲ್ಲಿದ್ದರು ಎಂದು ವರದಿಯಾಗಿದೆ.