Advertisement

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

08:46 PM Oct 20, 2021 | Team Udayavani |

ಬೆಂಗಳೂರು: ಉತ್ತರಾಖಂಡದಲ್ಲಿ ಉಂಟಾಗಿರುವ ನೆರೆ ಹಾಗೂ ಭೂಕುಸಿತದಲ್ಲಿ ರಾಜ್ಯದ 96 ಮಂದಿ ಸಿಲುಕಿದ್ದು, 92 ಮಂದಿ ಸುರಕ್ಷಿತವಾಗಿದ್ದಾರೆ, ನಾಲ್ವರು ನೆಟ್‌ವರ್ಕ್‌ ಸಮಸ್ಯೆಯಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

Advertisement

ಮಂಗಳವಾರ ರಾತ್ರಿ 10 ಗಂಟೆಯಿಂದ ಬುಧವಾರ ಸಂಜೆ 6 ಗಂಟೆವರೆಗೆ ಸಹಾಯವಾಣಿಗೆ ಹತ್ತು ಕರೆಗಳು ಬಂದಿದ್ದು, 96 ಮಂದಿ ಉತ್ತರಾಖಂಡದ ವಿವಿಧ ಸ್ಥಳಗಳಲ್ಲಿ ಸಿಲುಕಿದ್ದಾರೆ. ಈ ಪೈಕಿ 92 ಮಂದಿ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನುಳಿದ ನಾಲ್ವರ ಪೈಕಿ ಮೂವರು ನೆಟ್‌ವರ್ಕ್‌ ಸಮಸ್ಯೆಯಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಬ್ಬರು ಉತ್ತರಾಖಂಡ ಸರ್ಕಾರ ನೇಮಿಸಿರುವ ಸುರûಾ ಸೇನಾ ಬಲ(ಎಸ್‌ಎಸ್‌ಬಿ)ದ ಸ್ಥಳದಲ್ಲಿದ್ದಾರೆ. ಆದರೆ, ಬುಧವಾರ ಬೆಳಗ್ಗೆಯಿಂದ ಅವರು ಕೂಡ ಸಂಪರ್ಕಕ್ಕೆ ಸಿಕಿಲ್ಲ. ಹೀಗಾಗಿ ಅಲ್ಲಿನ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಲ್ಲಿಯೂ ವಿದ್ಯುತ್‌, ನೆಟ್‌ವರ್ಕ್‌ ಸಮಸ್ಯೆ ಇದೆ ಎಂದು ಮಾಹಿತಿ ನೀಡಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ನೆರೆ ಸಂಕಷ್ಟದಲ್ಲಿರುವವರು?

ಬಸವೇಶ್ವರನಗರದ ಶರತ್‌ ಚಂದ, ಕುಮಾರ್‌, ಚಂದ್ರಶೇಖರ್‌, ಶ್ರೀನಿವಾಸ, ಭಾಸ್ಕರ್‌, ಆರ್‌.ಟಿ.ನಗರದಿಂದ ಅನಿತಾ ಟ್ರಾವೆಲ್ಸ್‌ನಿಂದ ಸುಮಾರು 50 ಮಂದಿ ಉತ್ತರಾಖಂಡದ ಹರಿದ್ವಾರ, ಕೇದಾರನಾಥ ಪ್ರವಾಸಕ್ಕೆ ತೆರಳಿದ್ದಾರೆ. ಯಲಹಂಕದ ರಿತೇಶ್‌ ಬೆಲ್‌ ಎಂಬವರು ಗಂಗಾ ಘಾಟ್‌, ಡೆಹರಾಡೋನ್‌ನಲ್ಲಿ ಭಾರತೀಯ ಸೇನೆಯಲ್ಲಿರುವ ಉಡುಪಿ ಮೂಲದ ಮೊಹಮ್ಮದ್‌, ಅವರ ಪತ್ನಿ ಶೋಭಾ, ಪುತ್ರ ಅಖೀಲ್‌ ಮತ್ತು ವಿಜಯುಪುರದ ಸಿಂದಗಿ ತಾಲೂಕಿನ ಅನಿತಾ ಪಂಪ್ಪಣ್ಣನವರ್‌ಹಾಗೂ ಅವರ ನಾಲ್ವರು ಕುಟುಂಬ ಸದಸ್ಯರು ನೆರೆಯಲ್ಲಿ ಸಿಲುಕಿದ್ದಾರೆ ಎಂದು ಅವರ ಸಂಬಂಧಿಕರು ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಸಂತ್ರಸ್ತರು ಹಾಗೂ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

ಸಹಾಯವಾಣಿ

ರಾಜ್ಯದ ನೆರೆ ಸಂತ್ರಸ್ತರ ನೆರವಿಗಾಗಿ 24×7 ಸಹಾಯವಾಣಿ ತೆರೆದಿದ್ದು, ತುರ್ತು ಸಂದರ್ಭದಲ್ಲಿ 080-22340676 ಅಥವಾ ಟೋಲ್‌ಫ್ರೀ 080-1070ಗೆ ಕರೆ ಮಾಡಬಹುದು. ಕೂಡಲೇ ಉತ್ತರಖಂಡದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ ರಕ್ಷಣೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next