ನವದೆಹಲಿ: ಉತ್ತರಾಖಂಡ್ ಸರ್ಕಾರ ಕೋವಿಡ್ 19 ಕರ್ಫ್ಯೂ ನಿರ್ಬಂಧವನ್ನು ಜೂನ್ 1ರವರೆಗೆ ವಿಸ್ತರಿಸಿರುವುದಾಗಿ ತಿಳಿಸಿದೆ. ಈ ಮೊದಲು ಘೋಷಿಸಿದಂತೆ ಮೇ 25ರ ಬೆಳಗ್ಗೆ 6ಗಂಟೆಗೆ ಕೋವಿಡ್ ಕರ್ಫ್ಯೂ ಮುಕ್ತಾಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಜೂನ್ 1ರವರೆಗೆ ವಿಸ್ತರಿಸಿರುವುದಾಗಿ ಸರ್ಕಾರ ತಿಳಿಸಿದೆ.
ಇದನ್ನೂ ಓದಿ:ಉಡುಪಿ ಕೋವಿಡ್ ಲಸಿಕಾ ಕೇಂದ್ರಕ್ಕೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್ ಭೇಟಿ
ಉತ್ತರಾಖಂಡದಲ್ಲಿ ಕಳೆದ 40 ದಿನಗಳಲ್ಲಿ ಕಡಿಮೆ ಪ್ರಮಾಣದ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದೆ. ಕಳೆದ 24ಗಂಟೆಗಳಲ್ಲಿ 2,071 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಕೋವಿಡ್ ಪಾಸಿಟಿವಿಟಿ ದರ ಕುಸಿತ ಒಂದು ಉತ್ತಮ ಸಂಕೇತವಾಗಿದೆ. ಆದರೆ ಇದರಿಂದ ನಿರ್ಲಕ್ಷ್ಯ ವಹಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರದ ವಕ್ತಾರ ಸುಬೋಧ್ ಯೂನಿಯಾಲ್ ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಒಟ್ಟು 3,15,590 ಕೋವಿಡ್ 19 ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 49,579 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಕೋವಿಡ್ ಕರ್ಫ್ಯೂ ನಿರ್ಬಂಧದ ವೇಳೆ ಹಾಲು, ಮಾಂಸ, ಮೀನು, ಹಣ್ಣು ಮತ್ತು ತರಕಾರಿ ಅಂಗಡಿಗಳು ಬೆಳಗ್ಗೆ 8ಗಂಟೆಯಿಂದ ಮಧ್ಯಾಹ್ನ 11ಗಂಟೆವರೆಗೆ ತೆರೆಯಲು ಅವಕಾಶ ನೀಡಲಾಗಿದೆ.
ವಿವಾಹ ಕಾರ್ಯಕ್ರಮದಲ್ಲಿ ಇಪ್ಪತ್ತು ಜನರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಇದ್ದು, ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಆರ್ ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ತೋರಿಸಬೇಕು ಎಂದು ತಿಳಿಸಿದೆ.