Advertisement

Uttara Kannada; ಮತ್ತೆ ಅನಂತ್‌ ಹೆಗಡೆ ಕಣಕ್ಕಿಳಿಯುತ್ತಾರಾ?  ಕಾಗೇರಿ ಸ್ಪರ್ಧಿಸುತ್ತಾರಾ?

11:34 PM Jan 29, 2024 | Team Udayavani |

ಕಾರವಾರ: ಉತ್ತರ ಕನ್ನಡ (ಕೆನರಾ) ಲೋಕಸಭಾ ಕ್ಷೇತ್ರ ಬೆಳಗಾವಿ ಜಿಲ್ಲೆಯ ಎರಡು ಹಾಗೂ ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ನ್ನೊಳಗೊಂಡಿದೆ. ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಕಾಂಗ್ರೆಸ್‌ ಈ ಬಾರಿ ಈ ಕೋಟೆಯನ್ನು ಬೇಧಿಸುವ ವಿಶ್ವಾಸ ದಲ್ಲಿದೆ. ಎರಡೂ ಪಕ್ಷಗಳಿಂದ ಟಿಕೆಟ್‌ ಯಾರಿಗೆ ಎಂಬುದು ಸದ್ಯದ ಪ್ರಶ್ನೆ.
ಉತ್ತರಕನ್ನಡದ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾರವಾರ, ಭಟ್ಕಳ, ಶಿರಸಿ ಮತ್ತು ಹಳಿಯಾಳದಲ್ಲಿ ಈಗ ಕಾಂಗ್ರೆಸ್‌ ಶಾಸಕರು ಹಾಗೂ ಕುಮಟಾ ಮತ್ತು ಯಲ್ಲಾಪುರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಕಾಂಗ್ರೆಸ್‌ ಪಾಲಾಗಿದ್ದರೆ, ಖಾನಾಪುರ ಬಿಜೆಪಿ ತೆಕ್ಕೆಯಲ್ಲಿದೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್‌ ಈ ಬಾರಿ ಲೋಕಸಭಾ ಕ್ಷೇತ್ರವನ್ನೂ ಗೆಲ್ಲಲು ಚಿಂತನೆ ನಡೆಸಿದೆ. ಆದರೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಎದುರಿಸುವುದು ಅಷ್ಟು ಸುಲಭವಲ್ಲ ಎಂಬುದನ್ನು ಅರಿತು ಆಂತರಿಕ ಸರ್ವೇಯನ್ನೂ ನಡೆಸುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಹೊಡೆತ ತಿಂದ ಬಿಜೆಪಿ ಲೋಕಸಭೆ ಕ್ಷೇತ್ರವನ್ನು ಉಳಿಸಿಕೊಂಡು ಕಾಂಗ್ರೆಸ್‌ಗೆ ತಿರುಗೇಟು ನೀಡುವ ತವಕದಲ್ಲಿದೆ.

Advertisement

ಹೆಗಡೆಗೋ-ಹೊಸಬರಿಗೋ?
ಹಾಲಿ ಸಂಸದ, ಮಾಜಿ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರೇ ಮತ್ತೆ ಕಣಕ್ಕಿಳಿಯುವರೋ ಅಥವಾ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮೊದಲ ಬಾರಿಗೆ ಲೋಕಸಭೆಗೆ ಅವಕಾಶ ಸಿಗಲಿದೆಯೇ ಎಂಬ ಕುತೂಹಲ ಒಂದು ಕಡೆಯಾದರೆ, ಹೊಸಬರಿಗೆ ಪಕ್ಷ ಮಣೆ ಹಾಕಲಿದೆಯೇ ಎಂಬ ಪ್ರಶ್ನೆಯೂ ಜೀವಂತವಾಗಿದೆ. ಆರು ಬಾರಿ ಗೆದ್ದಿರುವ ಸಂಸದ ಅನಂತ್‌ ಕುಮಾರ್‌ ಅವರು, ಕಳೆದ ಚುನಾವಣೆ ಸಮಯದಲ್ಲೇ ಇದು ತಮ್ಮ ಕೊನೆಯ ಸ್ಪರ್ಧೆ ಎಂದು ಹೇಳಿದ್ದರು. ಅನಾರೋಗ್ಯ ಕಾರಣದಿಂದ ಮೂರು ವರ್ಷಗಳ ಕಾಲ ರಾಜಕೀಯದಿಂದ ದೂರವಿದ್ದರು. ವಿಧಾನ ಪರಿಷತ್‌, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿರಲಿಲ್ಲ. ಪ್ರಧಾನಿ ಮೋದಿ ಬಂದಾಗಲೂ ವೇದಿಕೆ ಹಂಚಿಕೊಂಡಿ ರಲಿಲ್ಲ. 25 ವರ್ಷ ಸಂಸದನಾಗಿದ್ದು, ರಾಜಕೀಯ ಸಾಕು ಎಂದಿದ್ದರು. ಹೀಗಾಗಿ ಈ ಬಾರಿ ಅವರು ಸ್ಪರ್ಧಿಸುವುದಿಲ್ಲ ಎಂಬ ಮಾತಿತ್ತು. ಆದರೆ ಒಂದು ತಿಂಗಳಿನಿಂದ ಪರಿಸ್ಥಿತಿ ಬದಲಾಗಿದೆ, ಮನೆ ಬಾಗಿಲಿಗೆ ಬಂದು ಪಕ್ಷದ ಕಾರ್ಯಕರ್ತರು ಹಾಗೂ ಕಟ್ಟಾ ಬೆಂಬಲಿಗರು ಹಾಕಿದ ಒತ್ತಡಕ್ಕೆ ಮಣಿದು ಫಿನಿಕ್ಸ್‌ನಂತೆ ಮುನ್ನೆಲೆಗೆ ಬಂದಿದ್ದಾರೆ. ಕ್ಷೇತ್ರವಿಡೀ ಪ್ರವಾಸ ಮಾಡಿದ್ದಾರೆ. ಆದರೆ ಎಲ್ಲಿಯೂ ತಾನೇ ಅಭ್ಯರ್ಥಿ ಎಂದು ಹೇಳಿಕೊಂಡಿಲ್ಲ.

ಈ ನಡುವೆ ಸಂಘ ಪರಿವಾರದಿಂದ ಹೆಗಡೆಯನ್ನೇ ಮತ್ತೆ ಕಣಕ್ಕಿಳಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ. ಅವರು ಸ್ಪರ್ಧಿಸುವುದಿಲ್ಲ ಎಂಬ ಕಾರಣಕ್ಕೆ ಹಲವು ಆಕಾಂಕ್ಷಿಗಳಿದ್ದರು. ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಯಾದ ಮಾಜಿ ಶಾಸಕಿ ರೂಪಾಲಿ ನಾಯ್ಕ, ಬಿಜೆಪಿ ರಾಜ್ಯ ವಕ್ತಾರ ಯಲ್ಲಾ ಪುರದ ಹರಿಪ್ರಕಾಶ್‌ ಕೋಣೆಮನೆ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಉಳಿದಂತೆ ಶಿರಸಿಯ ಅನಂತಮೂರ್ತಿ ಹೆಗಡೆ, ವಕೀಲ ನಾಗರಾಜ ನಾಯಕ ಅವರೂ ಟಿಕೆಟ್‌ ಕೇಳಿದ್ದಾರೆ. ಹಿಂದುಳಿದ ವರ್ಗಕ್ಕೆ ಬಿಜೆಪಿ ಟಿಕೆಟ್‌ ಕೊಡಬೇಕೆಂಬ ಆಗ್ರಹವೂ ಇದೆ.

ಕಾಂಗ್ರೆಸ್‌ನಲ್ಲೂ ಲೆಕ್ಕಾಚಾರ
ಕಾಂಗ್ರೆಸ್‌ನಲ್ಲೂ ಇದೇ ಸ್ಥಿತಿ ಇದ್ದು, ಯಾರನ್ನು ಕಣಕ್ಕಿಳಿಸುವುದು ಎಂಬ ಬಗ್ಗೆ ಹಲವು ಲೆಕ್ಕಾಚಾರ ನಡೆದಿದೆ. ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅಥವಾ ಶಾಸಕ ಶಿವರಾಮ ಹೆಬ್ಟಾರರನ್ನು ಕಣಕ್ಕಿಳಿಸುವ ಚಿಂತನೆ ನಡೆದಿದೆ. ಹೆಬ್ಟಾರ್‌ ಇನ್ನೂ ಕಾಂಗ್ರೆಸ್‌ ಸೇರಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಸಿಎಂ ಜತೆ ನಿಕಟ ಸಂಪರ್ಕದಲ್ಲಿದ್ದಾರೆ. ಇವರ ಪಕ್ಷ ಸೇರ್ಪಡೆಯನ್ನು ಶಾಸಕರಾದ ಆರ್‌. ವಿ. ದೇಶಪಾಂಡೆ, ಭೀಮಣ್ಣ ನಾಯ್ಕ ವಿರೋಧಿಸುತ್ತಿದ್ದಾರೆ. ಬಿಜೆಪಿಯಿಂದ ಅನಂತಕುಮಾರ್‌ ಹೆಗಡೆ ಅಥವಾ ಕಾಗೇರಿ ಅಭ್ಯರ್ಥಿಯಾದರೆ ಅವರನ್ನು ಎದುರಿಸಲು ಹರಿಪ್ರಸಾದ್‌ ಅಥವಾ ಶಿವರಾಮ ಹೆಬ್ಟಾರ್‌ರಿಂದ ಸಾಧ್ಯ ಎಂಬುದು ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್‌ ಲೆಕ್ಕಾಚಾರ.

ಇನ್ನೊಂದೆಡೆ ಹೊಸ ಮುಖ, ಖ್ಯಾತ ನ್ಯಾಯವಾದಿ ಸಿದ್ದಾಪುರ ಮೂಲದ ಜಿ.ಟಿ.ನಾಯ್ಕ ಹೆಸರು ಹೈಕಮಾಂಡ್‌ ತಲುಪಿದೆ. ಅವರು ಜಿಲ್ಲೆಯಲ್ಲಿ ಪರಿಚಿತರು. ಕಿತ್ತೂರು, ಖಾನಾಪುರದಲ್ಲಿ ಸ್ವಲ್ಪ ಶಕ್ತಿ ಹಾಕಿದರೆ ಗೆಲುವು ಸಾಧ್ಯ ಎಂಬ ಲೆಕ್ಕಾಚಾರವಿದೆ. ಅಲ್ಲದೆ, ನಾಮಧಾರಿ ಸಮುದಾಯಕ್ಕೆ ಸಂಸದ ಪ್ರಾತಿನಿಧ್ಯ ತಪ್ಪಿ 25 ವರ್ಷಗಳಾಗಿವೆ. ಇದನ್ನು ತುಂಬಿಕೊಡಲು ಅವರನ್ನು ಮುನ್ನೆಲೆಗೆ ತರುವ ಸಾಧ್ಯತೆಗಳು ಹೆಚ್ಚಿವೆ. ಇದರೊಂದಿಗೆ ಅರಣ್ಯ ಹಕ್ಕು ಅತಿಕ್ರಮಣ ಸಕ್ರಮ ಹೋರಾಟಗಾರ ವಕೀಲ ರವೀಂದ್ರ ನಾಯ್ಕ, ಪ್ರಶಾಂತ ದೇಶಪಾಂಡೆ, ನಿವೇದಿತ್‌ ಆಳ್ವ ಅವರ ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಜತೆಗೆ ಖಾನಾಪುರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್‌ ಹೆಸರು ಕೇಳಿಬರುತ್ತಿದೆ. ಈ ಮಧ್ಯೆ ಸಚಿವ ಮಂಕಾಳು ವೈದ್ಯರನ್ನೇ ಕಾಂಗ್ರೆಸ್‌ ಕಣಕ್ಕಿಳಿಸಲಿದೆ ಎಂದೂ ಹೇಳಲಾಗು ತ್ತಿದೆ. ಅವರು ಸ್ಪರ್ಧಿಸಿದರೆ ಮುಖಂ ಡರು ಒಗ್ಗಟ್ಟಿನಿಂದ ದುಡಿಯಲಿದ್ದಾರೆ ಎಂಬುದು ವರಿಷ್ಠರ ಲೆಕ್ಕಾಚಾರ.

Advertisement

ಬಿಜೆಪಿ ಸಂಭಾವ್ಯರು
ಅನಂತಕುಮಾರ್‌ ಹೆಗಡೆ
ವಿಶ್ವೇಶ್ವರ ಹೆಗಡೆ ಕಾಗೇರಿ
ರೂಪಾಲಿ ನಾಯ್ಕ
ನಾಗರಾಜ ನಾಯಕ್‌
ಹರಿಪ್ರಕಾಶ ಕೋಣೆಮನೆ
ಅನಂತಮೂರ್ತಿ ಹೆಗಡೆ

ಕಾಂಗ್ರೆಸ್‌ ಸಂಭಾವ್ಯರು
ಮಂಕಾಳು ವೈದ್ಯ
ಬಿ.ಕೆ.ಹರಿಪ್ರಸಾದ್‌
ಶಿವರಾಮ ಹೆಬ್ಟಾರ್‌
ಅಂಜಲಿ ನಿಂಬಾಳ್ಕರ್‌
ಜಿ.ಟಿ.ನಾಯ್ಕ
ಪ್ರಶಾಂತ್‌ ದೇಶಪಾಂಡೆ
ನಿವೇದಿತ್‌ ಆಳ್ವ
ರವೀಂದ್ರ ನಾಯ್ಕ

ನಾಗರಾಜ್‌ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next