ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಆಸ್ಪತ್ರೆ, ನರ್ಸಿಂಗ್‌ಹೋಂ, ಪ್ರಯೋಗಾಲಯಗಳು ಹಾಗೂ ಕ್ಲಿನಿಕ್‌ಗಳು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಕಡ್ಡಾಯವಾಗಿ ನೋಂದಣಿ ಆಗಬೇಕು ಎಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ಕೆ. ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡ ಕೆನರಾ ಐಎಂಎ ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಸೌಲಭ್ಯ ಸಂಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ಹಿಂದಿನ ಸಭೆಯಲ್ಲಿ ಅಧ್ಯಕ್ಷರು ತೃಪ್ತಿ ವ್ಯಕ್ತಪಡಿಸಿಲ್ಲ ಹಾಗೂ ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಖುದ್ದು ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಿರುತ್ತಾರೆ. ತ್ಯಾಜ್ಯ ನಿರ್ವಹಣೆ ಅಸಮರ್ಪಕವಾಗಿರಲು ಕಾರಣ ಇನ್ನೂ ಕೆಲವು ಆಸ್ಪತ್ರೆಗಳು ಸಂಸ್ಥೆಯೊಂದಿಗೆ ನೋಂದಣಿ ಮಾಡಿಕೊಂಡಿಲ್ಲದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಸರ್ಕಾರಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳು ಸಂಸ್ಥೆಯೊಂದಿಗೆ ನೋಂದಣಿ ಆಗಬೇಕು ಹಾಗೂ ತ್ಯಾಜ್ಯ ಸಂಸ್ಕರಣಾ ಸಂಸ್ಥೆ ಮುಂದೆ ಯಾವುದೇ ಸಬೂಬು ಹೇಳಬೇಡಿ. ಸಂಬಂಧಿತ ಆಸ್ಪತ್ರೆಗಳಿಂದ ನಿರ್ವಹಣಾ ವೆಚ್ಚ ಪಡೆದು ಸಮರ್ಪಕವಾಗಿ ನಿಭಾಯಿಸುವಂತೆ ಕೆನರಾ ಐಎಂಎಗೆ ಜಿಲ್ಲಾಧಿಕಾರಿ ಸೂಚಿಸಿದರು.
ಅಲ್ಲದೆ ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗುತ್ತಿದೆಯೇ ಎಂಬುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸಿ ವರದಿ ಸಲ್ಲಿಸಬೇಕು ಹಾಗೂ ವಾರ್ಷಿಕ ನಾಲ್ಕು ಬಾರಿ ಸಂಸ್ಥೆ ನಿರ್ವಹಣೆ ಕುರಿತು ದೃಢೀಕರಣ ನೀಡಬೇಕು ಎಂದು ಅವರು ಹೇಳಿದರು.
ಪ್ರತಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಸಮಿತಿ ರಚಿಸಬೇಕು ಹಾಗೂ ತಾಲೂಕು ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲು ಅನುಕೂಲವಾಗುತ್ತದೆ. ಅಲ್ಲದೆ ಆಸ್ಪತ್ರೆಗಳ ಹಾಗೂ ಕ್ಲಿನಿಕ್‌ಗಳ ಪಟ್ಟಿಯನ್ನು ನಗರ ಹಾಗೂ ಗ್ರಾಮಾಂತರ ಪ್ರದೇಶದ ಪ್ರತ್ಯೇಕವಾಗಿ ಸಲ್ಲಿಸಿದಲ್ಲಿ ತಮ್ಮ ಹಂತದಲ್ಲಿಯೇ ಎಲ್ಲ ಆಸ್ಪತ್ರೆಗಳ ಕಡ್ಡಾಯ ನೋಂದಣಿಗೆ ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು.
Advertisement
ಡಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೈವಿಕ ವೈದ್ಯಕೀಯ ತ್ಯಾಜ್ಯದ ನಿರ್ವಹಣೆ ಸಮರ್ಪಕವಾಗಿ ಆಗಬೇಕು. ಅದಕ್ಕಾಗಿ ಜಿಲ್ಲೆಯ ಪ್ರತಿ ಆಸ್ಪತ್ರೆ, ನರ್ಸಿಂಗ್ ಹೋಮ್, ಕ್ಲಿನಿಕ್‌ಗಳು ಹಾಗೂ ಪ್ರಯೋಗಾಲಯಗಳು ಕಡ್ಡಾಯವಾಗಿ ನೋಂದಣಿ ಒಳಪಡಬೇಕು ಎಂದು ಸೂಚಿಸಿದರು.
Related Articles
Advertisement
ತ್ಯಾಜ್ಯ ಸಂಸ್ಕರಣಾ ಸಂಸ್ಥೆಯ ಎಲ್ಲ ಆಸ್ಪತ್ರೆಗಳ ನೋಂದಣಿ ನಂತರ ಎಲ್ಲರಿಗೂ ತರಬೇತಿ ನೀಡಿ ವೈದ್ಯಕೀಯ ತ್ಯಾಜ್ಯಗಳ ಸಂಗ್ರಹ, ಅದಕ್ಕಿರುವ ನಿಯಮಗಳು ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಡಿಎಚ್ಒ ಡಾ| ಜಿ.ಎನ್. ಅಶೋಕ್‌ಕುಮಾರ್, ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಶಿವಾನಂದ ಕುಡ್ತಲಕರ್, ಐಎಂಎ ಅಧ್ಯಕ್ಷ ಡಾ| ನಿತೀನ್ ಪಿಕಳೆ, ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಸೌಲಭ್ಯ ಸಂಸ್ಥೆ ಮುಖ್ಯಸ್ಥ ಡಾ| ಎನ್.ವಿ. ನಾಯಕ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ವಿಜಯಲಕ್ಷ್ಮೀ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.