Advertisement

ಮಳೆಗಾಲಕ್ಕೆ ಉತ್ತರ ಕನ್ನಡ ಸನ್ನದ

05:26 PM May 25, 2022 | Team Udayavani |

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗ ಸತತ ನಾಲ್ಕು ಗಂಟೆ ಮಳೆಯಾದರೂ ಸಹ ಜನರಲ್ಲಿ ನಡುಕ ಶುರುವಾಗುತ್ತದೆ. ಭೂ ಕುಸಿತ ಹಾಗೂ ನೆರೆಯ ಭೀತಿ ನದಿ ಪಾತ್ರದ ಗ್ರಾಮಗಳ ಜನರಲ್ಲಿ ಮನೆ ಮಾಡಿದೆ. ಇದಕ್ಕೆ ಜಿಲ್ಲಾಡಳಿತ ಸಹ ಹತ್ತು ಹಲವು ಮಾರ್ಗೋಪಾಯ ಕಂಡು ಕೊಂಡಿದೆ.

Advertisement

ಕಳೆದ ಮಳೆಗಾಲದಲ್ಲಿ ಕೊಚ್ಚಿ ಹೋಗಿದ್ದ ರಸ್ತೆ, ಸೇತುವೆಗಳನ್ನು ಪುನಃ ನಿರ್ಮಾಣ ಮಾಡಿದೆ. ಒಂದೆರಡು ದೊಡ್ಡ ಸೇತುವೆ ಕಾಮಗಾರಿಗಳು ಇನ್ನೂ ಆಗಬೇಕಿದೆ. ಆದರೆ ಪರ್ಯಾಯ ಮಾರ್ಗದ ಮೂಲಕ ಗ್ರಾಮಗಳನ್ನು ತಲುಪಲು ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡಿದೆ. ತಾತ್ಕಾಲಿಕ ಸೇತುವೆಗಳನ್ನು ಸಹ ಮಾಡಿದೆ. ಅರಬೈಲ್‌ ಘಟ್ಟ ಮತ್ತು ಅಣಶಿ ಘಟ್ಟಗಳಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಮೊದಲಿನ ಸ್ಥಿತಿಗೆ ತಂದಿದೆ. ಭೂ ಕುಸಿತವಾಗಿದ್ದ ಕಳಚೆ ಗ್ರಾಮಸ್ಥರಿಗೆ ಧೈರ್ಯ ತುಂಬಿದೆ. ಅಲ್ಲಿಗೆ ಕಡಿದು ಹೋಗಿದ್ದ ಸಂಪರ್ಕ ರಸ್ತೆಯನ್ನು ಸರ್ಕಾರ ಪುನಃ ನಿರ್ಮಿಸಿಕೊಟ್ಟಿದೆ. ಕಳಚೆ ಗ್ರಾಮಸ್ಥರಿಗೆ ಮಾತ್ರ ಪುನರ್ವಸತಿ ಮಾಡುವ ಭರವಸೆ ನೀಡಿದೆ. ಅದಕ್ಕೆ ಪರ್ಯಾಯ ಭೂಮಿ ಸಹ ಹುಡುಕಿಟ್ಟಿದೆ. ಆದರೆ ಕಳಚೆ ಗ್ರಾಮಸ್ಥರು ಮೂಲ ನೆಲದ ನಂಟನ್ನು ಕಳೆದುಕೊಳ್ಳಲು ಇಷ್ಟಪಡದೆ ಮತ್ತೂಂದು ಮಳೆಗಾಲ ನೋಡಿಯೇ ಬಿಡೋಣ ಎಂದು ಸನ್ನದ್ಧರಾಗಿದ್ದಾರೆ.

ಪರ್ಯಾಯ ಪುನರ್ವಸತಿ ಎಲ್ಲರಿಗೂ ಸಾಧ್ಯವಿಲ್ಲ: ಉತ್ತರ ಕನ್ನಡ ಅರಣ್ಯ ಜಿಲ್ಲೆ. ಇಲ್ಲಿ ಗ್ರಾಮಗಳ ಸ್ಥಳಾಂತರಕ್ಕೆ ಪರ್ಯಾಯ ಭೂಮಿ ಹುಡುಕುವುದು ಕಷ್ಟ. ಜನರು ಸಹ ತಮ್ಮ ಮೂಲ ಗ್ರಾಮ ತೊರೆಯಲು ಸಜ್ಜಾಗುವುದಿಲ್ಲ. ಹಾಗಾಗಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ. ಮನೆಗಳನ್ನು ನಿರ್ಮಿಸಿಕೊಡುವ ಕಾರ್ಯಯೋಜನೆ ಸರ್ಕಾರದ ಮುಂದಿಲ್ಲ.

ಕದ್ರಾ ನಿರಾಶ್ರಿತರು ಕೆಪಿಸಿ ಕ್ವಾಟರ್ಸ್‌ನಲ್ಲಿ ಉಳಿದಿದ್ದಾರೆ. ಉಳಿದಂತೆ ನದಿ ದಂಡೆ ಗ್ರಾಮಸ್ಥರು ಮೂಲ ಗ್ರಾಮಗಳಲ್ಲಿದ್ದಾರೆ. ನೆರೆಯನ್ನು ಎರಡು ಮೂರು ದಿನ ಮಳೆ ಎದುರಿಸಲು ಮಾನಸಿಕವಾಗಿ ಸಜ್ಜಾಗಿದ್ಧಾರೆ.

ಉತ್ತರ ಕನ್ನಡದ ಕಾರವಾರ ತಾಲೂಕಿನಲ್ಲಿ 26, ಅಂಕೋಲಾದಲ್ಲಿ 32, ಕುಮಟಾದಲ್ಲಿ 23 ಗ್ರಾಮಗಳು ನೆರೆಗೆ ತುತ್ತಾಗುತ್ತವೆ. ಹೊನ್ನಾವರದಲ್ಲಿ 54, ಭಟ್ಕಳದಲ್ಲಿ 6, ಶಿರಸಿಯಲ್ಲಿ 2, ಸಿದ್ದಾಪುರದಲ್ಲಿ 3, ಯಲ್ಲಾಪುರದಲ್ಲಿ 3, ಹಳಿಯಾಳದಲ್ಲಿ 7, ಜೊಯಿಡಾದಲ್ಲಿ 1, ದಾಂಡೇಲಿಯಲ್ಲಿ 12 ಗ್ರಾಮಗಳು ನೆರೆ ಪೀಡಿತ ಪ್ರದೇಶ ಎಂದು ಗುರುತಿಸಲಾಗಿದ್ದು, ನೆರೆ ಬಂದರೆ ಈ ಗ್ರಾಮಗಳ ಜನರನ್ನು ಶಾಲೆಗಳಿಗೆ ಶಿಫ್ಟ್‌ ಮಾಡಲು ಮೊದಲೇ ಸ್ಥಳ ಗುರುತಿಸಲಾಗಿದೆ. ಸೈಕ್ಲೋನ್‌ ಸೆಂಟರ್‌ ಸಹ ಅಂಕೋಲಾದಲ್ಲಿ ನಿರ್ಮಿಸಲಾಗಿದೆ.

Advertisement

200 ಕೋಟಿ ರೂ. ಅನುದಾನ ವೆಚ್ಚ: ಕಳೆದ ಸಲ ಅತಿಯಾದ ಮಳೆಯಿಂದ ಭೂ ಕುಸಿತವಾಗಿ ಅಪಾರ ಹಾನಿಯಾಗಿದ್ದಾಗ, ಆಗತಾನೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಮೊದಲ ಭೇಟಿ ನೀಡಿ 200 ಕೋಟಿ ರೂ. ಅನುದಾನ ಘೋಷಿಸಿದ್ದರು. ಆ ಅನುದಾನದಲ್ಲಿ ಅರಬೈಲ್‌ ಘಟ್ಟ ಕುಸಿತದಿಂದಾದ ಬಹುದೊಡ್ಡ ಕಂದಕ ತುಂಬಿ ರಾಷ್ಟ್ರೀಯ ಹೆದ್ದಾರಿಗೆ ಮರುಜೀವ ನೀಡಲಾಯಿತು. ಅಣಶಿ ಘಟ್ಟದಲ್ಲಿನ ಕುಸಿತವನ್ನು ಪುನಃ ಸರಿಪಡಿಸಲಾಗಿದೆ. ಅಲ್ಲಲ್ಲಿ ಕುಸಿದ ಸಣ್ಣ ಸೇತುವೆ ಕೆಲಸಗಳು, ತಾಲೂಕು ಮತ್ತು ಗ್ರಾಮದ ರಸ್ತೆಗಳನ್ನು ನಿರ್ಮಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ 100 ಕೋಟಿ ರೂ, ಕಾಮಗಾರಿ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ 100 ಕೋಟಿ ರೂ. ಅನುದಾನದಲ್ಲಿ ಶೇ.80 ರಷ್ಟು ಕಾಮಗಾರಿ ಮುಗಿದಿವೆ ಎಂದು ಜಿಲ್ಲಾಡಳಿತ ಹೇಳುತ್ತಿದೆ.

ಮೆಸೇಜ್‌ ಮೂಲಕ ಪ್ರವಾಹ ಮುನ್ಸೂಚನೆ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಳೆಯಿಂದಾಗಿ ನೆರೆ ಸೃಷ್ಟಿಯಾಗಿ ಅಪಾರ ಹಾನಿಯಾಗುತ್ತಿದೆ. ಈ ಬಾರಿ ಸಹ ಅದಾಗಲೇ ಮಳೆಗಾಲಕ್ಕೂ ಪೂರ್ವವೇ ಸುರಿದ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಹೀಗಾಗಿ ಇನ್ನೊಂದು ವಾರದಲ್ಲಿ ಆರಂಭವಾಗಲಿರುವ ಮಳೆಗಾಲಕ್ಕೆ ಜಿಲ್ಲಾಡಳಿತ ಮುಂಜಾಗ್ರತ ಕ್ರಮ ಕೈಕೊಂಡಿದ್ದು, ನೆರೆ ಸಂತ್ರಸ್ತರ ಮೊಬೈಲ್‌ಗ‌ಳಿಗೆ ಅಲರ್ಟ್‌ ಮೆಸೇಜ್‌ ಕಳುಹಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಉತ್ತರಕನ್ನಡದಲ್ಲಿ ಐದು ಅಣೆಕಟ್ಟುಗಳಿದ್ದು ಕಳೆದ ಎರಡು ವರ್ಷಗಳಿಂದ ಮಳೆಗಾಲದ ಅವ ಯಲ್ಲಿ ಮೋಡಸ್ಫೋಟವಾಗಿ, ಅಣೆಕಟ್ಟುಗಳ ಕೆಳಭಾಗದ ಪ್ರದೇಶಗಳು ಪ್ರವಾಹ ಪೀಡಿತವಾಗುತ್ತವೆ. ಯಾವಾಗ ಅಧಿಕ ಮಳೆಯಾಗತ್ತೆ, ಯಾವಾಗ ಡ್ಯಾಮ್‌ಗಳು ಭರ್ತಿಯಾಗುತ್ತವೆ, ಯಾವಾಗ ಡ್ಯಾಮ್‌ಗಳಿಂದ ನೀರು ಬಿಡ್ತಾರೆಂಬ ಮಾಹಿತಿ ಜನರಿಗೆ ಸರಿಯಾಗಿ ತಲುಪದೆ ಜನ ಕೂಡ ಪ್ರವಾಹದಲ್ಲಿ ಸಿಲುಕುವ ಪರಿಸ್ಥಿತಿ ಬಂದಾಗ ರಕ್ಷಣಾ ಕಾರ್ಯಗಳಿಗೂ ತೊಡಕುಂಟಾಗಿತ್ತು.

ಈ ಎಲ್ಲಾ ಮಾಹಿತಿ ದೊರೆತು ಜನರು ಪ್ರವಾಹ ಎದುರಾಗುವ ಮುನ್ನ ಪ್ರವಾಹ ಸಂಭವನೀಯ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂಬ ಉದ್ದೇಶದಿಂದ ಮೆಸೇಜಿಂಗ್‌ ಸಿಸ್ಟೆಮ್‌ ಅನ್ನ ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಉದಯವಾಣಿಗೆ ವಿವರಿಸಿದರು.

ನದಿ ದಂಡೆಯ ಮುಳುಗಡೆ ಗ್ರಾಮಗಳ ಮಾಹಿತಿ ಜಿಲ್ಲಾಡಳಿತದ ಬಳಿ ಇದೆ. ಪ್ರತಿ ಮನೆಯ, ಪ್ರತಿ ಸದಸ್ಯನ ಮೊಬೈಲ್‌ ನಂಬರ್‌ ಸಂಗ್ರಹಸಿದ್ದು, ಅತೀಯಾಗಿ ಮಳೆಯಾಗುವ ಸಂದೇಶ ಅವರ ಮೊಬೈಲ್‌ಗೆ ರವಾನೆಯಾಗುತ್ತದೆ. ಕಂದಾಯ ಇಲಾಖೆ, ಕೆಪಿಸಿ ಪ್ರತ್ಯೇಕ ಮಾಹಿತಿ ನೀಡುತ್ತದೆ. ಇದರಿಂದ ಮುಂಬರುವ ಅಪಾಯ ಹಾನಿ ತಪ್ಪಿಸಲು ನೆರವಾಗುತ್ತದೆ ಎಂದು ಅವರು ವಿವರಿಸಿದರು.

ಕೇಂದ್ರ ಹವಾಮಾನ ಇಲಾಖೆ ನೆರವು: ಮೆಸೇಜಿಂಗ್‌ ಸಿಸ್ಟೆಮ್‌ ಜೊತೆಗೆ ಕೇಂದ್ರದ ಹವಾಮಾನ ಇಲಾಖೆ ಸಹಯೋಗದೊಂದಿಗೆ ಪ್ರಮುಖ ಸ್ಥಳಗಳಲ್ಲಿ ಸೈರನ್‌ ಗಳನ್ನ ಅಳವಡಿಸಲಾಗುತ್ತಿದೆ. ಇದರ ಮೂಲಕ ಸೈಕ್ಲೋನ್‌, ನೆರೆ ಪ್ರವಾಹ ಸೇರಿದಂತೆ ಪ್ರಾಕೃತಿಕ ವಿಕೋಪಗಳು ಎದುರಾಗುವ ಪೂರ್ವದಲ್ಲಿ ಮೈಕ್‌ ಗಳ ಮೂಲಕ ನೇರವಾಗಿ ಕೇಂದ್ರ ಹವಾಮಾನ ಇಲಾಖೆಯಿಂದಲೇ ಮುನ್ಸೂಚನೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಜಲಾಶಯಗಳ ಭರ್ತಿಯಂತಹ ಮುನ್ನೆಚ್ಚರಿಕೆಯನ್ನೂ ನೀಡುವ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ ಎಂದೂ ತಿಳಿಸಿದ್ದಾರೆ.

-ನಾಗರಾಜ್‌ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next