Advertisement
ಪ್ರತಿ ತಾಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿ, ನಗರ ಪಟ್ಟಣಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಕಾಳಿ ನದಿಯಲ್ಲಿ ನೀರಿದ್ದರೂ ಅದು ಕುಡಿಯಲು ಅಯೋಗ್ಯ. ಹಾಗಾಗಿ ಜೋಯಿಡಾ, ದಾಂಡೇಲಿಯಿಂದ ಹಿಡಿದು ಕಾರವಾರದವರೆಗೆ ಕುಡಿಯುವ ನೀರಿಗೆ ಬರ ಉಂಟಾಗಿದೆ. ಕಾರವಾರ, ಅಂಕೋಲಾ ಪಟ್ಟಣಗಳು ಗಂಗಾವಳಿ ನದಿ ನೀರನ್ನು ಅಲವಂಬಿಸಿದ್ದು, ಗಂಗಾವಳಿಯಲ್ಲಿ ನೀರಿನ ಸಂಗ್ರಹ ತೀವ್ರ ಕುಸಿದಿದೆ. ನಲ್ಲಿ ನೀರು ನಾಲ್ಕು ದಿನಕ್ಕೊಮ್ಮೆ ಬರುತ್ತಿದ್ದು, ಅದು ಸಹ ನಿಲ್ಲುವ ಲಕ್ಷಣಗಳು ಕಂಡು ಬಂದಿವೆ. ಶರಾವತಿ ನದಿ ನೀರನ್ನು ಕುಡಿಯುವ ಸ್ವರೂಪದಲ್ಲಿ ಯೋಜನೆ ರೂಪಿಸಿಲ್ಲ. ಕುಮಟಾದ ಮರಾಕಲ್ ಯೋಜನೆಯಲ್ಲಿ ನೀರಿನ ಸಂಗ್ರಹ ಬತ್ತಿದೆ. ಭಟ್ಕಳಕ್ಕೆ ಕುಡಿಯುವ ನೀರು ಪೂರೈಸುವ ಕಡವಿನಕಟ್ಟಾ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಶರಾಬಿ ಹೊಳೆಯಲ್ಲಿ ಸಹ ನೀರಿನ ಮೂಲ ಬತ್ತಿದೆ ಎಂದು ತಾಲೂಕು ಆಡಳಿತಗಳು ಹೇಳುತ್ತಿವೆ.
Related Articles
Advertisement
ಕಾರವಾರ ತಾಲೂಕಿನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಕಾರವಾರ ಪಟ್ಟಣಕ್ಕೆ ದಿನವೂ 7 ಟ್ಯಾಂಕರ್‌ಗಳಲ್ಲಿ ನೀರನ್ನು ವಿವಿಧ ವಾರ್ಡ್‌ಗಳಿಗೆ ಪೂರೈಸಲಾಗುತ್ತಿದೆ. 1.5 ಲಕ್ಷ ಲೀಟರ್ ಕಾರವಾರ ನಗರದಲ್ಲಿ ವಿತರಣೆ ಮಾಡಲಾಗುತ್ತಿದ್ದು, ಬೈತಖೋಲ, ಬಿಣಗಾ ಗ್ರಾಮಗಳಿಗೆ ಸಹ ನೀರು ಕೊಡಲಾಗುತ್ತಿದೆ. ಕಾರವಾರ ಗ್ರಾಮಾಂತರ ಭಾಗದ 19 ಮಜಿರೆಗಳಿಗೆ ನೀರು ಪೂರೈಸಲಾಗುತ್ತಿದೆ. ಇನ್ನೂ ಎರಡು ಗ್ರಾಮಗಳಿಂದ ಬೇಡಿಕೆ ಬಂದಿದೆ. ಶಿರವಾಡ, ವೈಲವಾಡಗಳಿಗೆ ಹೊಸದಾಗಿ ನೀರು ಕೊಡಬೇಕಿದೆ ಎಂದು ತಹಶೀಲ್ದಾರ ಕಚೇರಿಯ ಪ್ರಕೃತಿ ವಿಕೋಪ ವಿಭಾಗದ ಗ್ರಾಮ ಲೆಕ್ಕಿಗ ಯೋಮಕೇಶ್ ವಿವರಿಸಿದರು. ಈಗಾಗಲೇ ಹೋಟೆಗಾಳಿ, ಗೋಟೆಗಾಳಿ ಗ್ರಾಮಗಳಿಗೆ ಪ್ರತಿದಿನ 12000 ಲೀಟರ್, ಬೋಳಶಿಟ್ಟಾ, ಘಾಡಸಾಯಿ, ಹಳಗಾಜೋಗ, ಉಳಗಾ ಗ್ರಾಮಗಳಿಗೆ 12 ಸಾವಿರ ಲೀಟರ್, ಅಸ್ನೋಟಿ ಪರವಾರವಾಡಕ್ಕೆ 1000 ಲೀಟರ್, ಕಿನ್ನರಕ್ಕೆ 12000 ಲೀಟರ್, ಭೈರೆ ಶೀನಗುಡ್ಡ, ಸಣ್ಣಮಕ್ಕಿಗೆ 6000 ಲೀಟರ್ ದಿನ ಬಿಟ್ಟು ದಿನ ನೀರು ಪೂರೈಸಲಾಗುತ್ತಿದೆ.
•ನಾಗರಾಜ್ ಹರಪನಹಳ್ಳಿ