ಕಾರವಾರ: ಕಳೆದೊಂದು ವಾರದಿಂದ ಹೊತ್ತಿ ಉರಿಯುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಇದೀಗ ಶಾಂತವಾಗಿದೆ. ಹೊನ್ನಾವರ, ಕುಮಟಾ, ಶಿರಸಿಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಎಲ್ಲ ಸಮುದಾಯಗಳ ಶಾಂತಿ ಸಭೆ ನಡೆಸಿರುವುದು ಫಲ ನೀಡಿದೆ. ಜಿಲ್ಲಾ ಪೊಲೀಸ್ ಗುಪ್ತದಳಕ್ಕೆ ಬಂದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಶಾಂತ ವಾತಾವರಣವಿದೆ.
ಜನ ಮುಕ್ತವಾಗಿ ಪಟ್ಟಣಗಳಲ್ಲಿ ಸಂಚರಿಸ ತೊಡಗಿದ್ದರೆ. ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಮುಂಡಗೋಡ, ಸಿದ್ದಾಪುರ ಪಟ್ಟಣಗಳು ಶಾಂತವಾಗಿವೆ. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ. ಆಯಕಟ್ಟಿನ ಜಾಗಗಳಲ್ಲಿ ನಿಗಾ ವಹಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಕಾವಲು ಹೆಚ್ಚಿಸಲಾಗಿದೆ. ಕಾರವಾರದಲ್ಲಿ ಪೊಲೀಸರು ಜನತೆಯಲ್ಲಿ ಧೈರ್ಯ ತುಂಬಲು ಸಂಜೆ ಪಥ ಸಂಚಲನ ನಡೆಸಿದ್ದಾರೆ.
28 ಪ್ರಕರಣ ದಾಖಲು: ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್ ಮಾಡಿದವರ ವಿರುದ್ಧ ತಾಲೂಕು ದಂಡಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯಿಂದ ಜಿಲ್ಲಾದ್ಯಂತ 28 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಕುರಿತು ಕಾರವಾರ ತಾಲೂಕು ದಂಡಾ ಧಿಕಾರಿಗಳು 7, ಹೊನ್ನಾವರ ತಾಲೂಕು ದಂಡಾ ಧಿಕಾರಿ 6, ಜೊತೆಗೆ ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕವಾಗಿ 15 ಪ್ರಕರಣ ದಾಖಲಾಗಿದೆ. ಕಾಮೆಂಟ್ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಿಸಲು ಚಿಂತನೆ ನಡೆದಿದೆ.
ನನ್ನ ಮಗ ಪರೇಶ್ ಸಾವಿನ ಪ್ರಕರಣದಲ್ಲಿ ಸರ್ಕಾರ ಅಪರಾಧಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಐಜಿಪಿ ನಿಂಬಾಳ್ಕರ್ ಸಹಜ ಸಾವು ಎಂದಿದ್ದಾರೆ. ಸ್ವಲ್ಪ ಸಮಯದ ಬಳಿಕ ಆರ್.ವಿ. ದೇಶಪಾಂಡೆ ಅವರು ಮರಣೋತ್ತರ ವರದಿ ಇನ್ನೂ ಬಂದಿಲ್ಲ ಎನ್ನುತ್ತಾರೆ. ನನ್ನ ಮಗನ ಸಾವಿಗೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ.
– ಕಮಲಾಕರ ಮೇಸ್ತ, ಪರೇಶ್ ಮೇಸ್ತ ತಂದೆ
ಗಲಭೆ, ದೊಂಬಿ ಮಾಡಬೇಕು ಅಂತ ನಿಂತೋರಿಗೆ ಏನು ಹೇಳಲಿಕ್ಕಾಗುತ್ತೆ? 8 ಅಲ್ಲ 80 ಹತ್ಯೆಗಳಾಗಲಿ ಏನಿವಾಗ ಎಂದು ಗಲಭೆ ಮಾಡ್ಲೆàಬೇಕು ಅಂತ ನಿಂತಿದ್ದಾರೆ. ಇದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಚುನಾವಣೆಗೆ ಹೀಗೆಲ್ಲ ಮಾಡಿದ್ರೆ ಹೇಗೆ? ಎಷ್ಟು ಲಾಠಿ ಚಾರ್ಜ್ ಆಗಿದೆ ಎಂದು ಅಮಿತ್ ಶಾ ಕೇಳ್ತಾರೆ, ಈಶ್ವರಪ್ಪ ಸುಳ್ಳು ಹೇಳಿ ಅಂತಾರೆ. ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
– ರಮೇಶ್‌ಕುಮಾರ್, ಆರೋಗ್ಯ ಸಚಿವ
ಅಮಿತ್ ಶಾ ಭೇಟಿ ಬಳಿಕ ಕೋಮುಗಲಭೆ ಹೆಚ್ಚಾಗಿದೆ. ಇತ್ತೀಚಿನ ಘಟನೆಗಳಿಗೂ ಅಮಿತ್ ಶಾ ಮೂಲ ಕಾರಣ, ಇವರ ಈ ಷಡ್ಯಂತ್ರ ಜನರಿಗೂ ಗೊತ್ತಾಗಿದೆ. ಸಣ್ಣ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ.
– ಯು.ಟಿ. ಖಾದರ್, ಆಹಾರ ಸಚಿವ
ಅಮಿತ್ ಶಾ ಸೂಚನೆಯಂತೆ ಬಿಜೆಪಿ ನಾಯಕರು ರಾಜ್ಯದಲ್ಲಿ ಗಲಭೆಗಳನ್ನು ಸೃಷ್ಟಿಸುತ್ತಿದ್ದಾರೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಲಾಠಿಚಾರ್ಜ್, ಗೋಲಿಬಾರ್ ಮಾಡುವಂತೆ ಪ್ರಚೋದಿಸುತ್ತಿದ್ದಾರೆ. ಹೊನ್ನಾವರ, ಕುಮಟಾ ಹಾಗೂ ಶಿರಸಿಯಲ್ಲಿ ಆಗುತ್ತಿರುವುದು ಇದೇ. ಅಲ್ಪಸಂಖ್ಯಾತ ಸಮುದಾಯದವರು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಹಕಾರ ನೀಡಬೇಕು.
– ನಸೀರ್ ಅಹ್ಮದ್, ಅಧ್ಯಕ್ಷ, ಕರ್ನಾಟಕ
ರಾಜ್ಯ ಅಲ್ಪಸಂಖ್ಯಾತರ ಆಯೋಗ