ಹೊಸದಿಲ್ಲಿ : ಹುಡುಗಿಯರ ಅಂದಚಂದಕ್ಕೆ ಅನುಗುಣವಾಗಿ ಅವರ ಮೊಬೈಲ್ ನಂಬರ್‌ಗಳನ್ನು ರೀಚಾರ್ಜ್ ಶಾಪ್ ಗಳು ಮಾರುತ್ತಿರುವುದನ್ನು ಉತ್ತರ ಪ್ರದೇಶ ಪೊಲೀಸರು ಪತ್ತೆ ಹಚ್ಚಿದ್ದಾರೆ.
50 ರೂ.ಗಳಿಂದ 500 ರೂ. ವರೆಗೆ ದುಡ್ಡು ತೆತ್ತು ಹುಡುಗಿಯರ ಮೊಬೈಲ್ ನಂಬರ್‌ಗಳನ್ನು ಪಡೆಯುವ ಪುರುಷರು, ಆ ಹುಡುಗಿಯರಿಗೆ ಫೋನ್ ಕಿರುಕುಳ ನೀಡುವುದು ರಾಜ್ಯದಲ್ಲೀಗ ವ್ಯಾಪಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುಖ್ಯ ಮಂತ್ರಿ ಅಖೀಲೇಶ್ ಯಾದವ್ ಅವರು ಅಹೋರಾತ್ರಿ ಸೇವೆಗಾಗಿ ಆರಂಭಿಸಿರುವ 1090 ಹೆಲ್ಪ್ ಲೈನ್ ಸಂಖ್ಯೆಯ ಪೋನಿಗೆ ಅಸಂಖ್ಯಾತ ದೂರುಗಳು ಬರುತ್ತಿರುವುದನ್ನು ಅನುಲಕ್ಷಿಸಿ ತನಿಖೆ ನಡೆಸಿರುವ ಪೊಲೀಸರಿಗೆ, ರೀಚಾರ್ಜ್ ಶಾಪ್ ಗಳು ಹುಡುಗಿಯರ ಮೊಬೈಲ್ ಫೋನ್ ನಂಬರ್‌ಗಳನ್ನು ಹಣಕ್ಕೆ ಮಾರುತ್ತಿರುವ ವಿಷಯ ಗೊತ್ತಾಯಿತು.
ಕಳೆದ ನಾಲ್ಕು ವರ್ಷಗಳಿಂದ ತೀವ್ರವಾಗುತ್ತಲೇ ಬಂದಿರುವ ಈ ಪಿಡುಗಿಗೆ ಸಂಬಂಧಿಸಿದಂತೆ ಈ ತನಕ ಆರು ಲಕ್ಷ ದೂರುಗಳು ಬಂದಿವೆ. ಇವುಗಳಲ್ಲಿ ಶೇ.90ರಷ್ಟು ದೂರುಗಳು ಹುಡುಗಿಯರಿಗೆ ಮೊಬೈಲ್ ಮೂಲಕ ಬರುತ್ತಿರುವ ಲೈಂಗಿಕ ಕಿರುಕುಳ ಬೆದರಿಕೆಗೆ ಸಂಬಂಧಿಸಿದ್ದವಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಹುಡುಗಿಯರು ತಮ್ಮ ಮೊಬೈಲ್ ಫೋನ್‌ಗಳನ್ನು ರೀಚಾರ್ಜ್ ಮಾಡಿಸಿಕೊಳ್ಳಲು ಶಾಪ್‌ಗ್ಳಿಗೆ ಹೋದಾಗ ಅವರ ನಂಬರ್‌ಗಳನ್ನು ಆ ಅಂಗಡಿಯವರು ಅವರ ಅಂದಚಂದಕ್ಕೆ ಅನುಗುಣವಾಗಿ ಗುರುತಿಸಿಟ್ಟುಕೊಂಡು ಬಳಿಕ ಅವುಗಳನ್ನು 50 ರೂ.ಗಳಿಂದ 500 ರೂ. ಬೆಲೆಗೆ ಮಾರುತ್ತಾರೆ. ಆ ಬಳಿಕ ಹುಡುಗಿಯರಿಗೆ ಕಿರುಕುಳ ಆರಂಭವಾಗುತ್ತದೆ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ.
ಲಕ್ನೋ, ಕಾನ್ಪುರ ನಗರ, ಅಲಹಾಬಾದ್, ವಾರಾಣಸಿ ಮತ್ತು ಆಗ್ರಾ – ಈ ಐದು ಜಿಲ್ಲೆಗಳಲ್ಲಿ ಗರಿಷ್ಠ ಸಂಖ್ಯೆಯ ದೂರುಗಳು ದಾಖಲಾಗಿವೆ. ಶ್ರಾವಸ್ತಿ, ಕಶಾಂಗಿ, ಲಲಿತ್‌ಪುರ, ಚಿತ್ರಕೂಟ ಮತ್ತು ಕೌಶಾಂಬಿ ಜಿಲ್ಲೆಗಳು ದೂರಿನ ಪ್ರಮಾಣ ಕಡಿಮೆ ಇದೆ ಎಂದು ಪೊಲೀಸರು ಹೇಳಿದ್ದಾರೆ.