ಲಕ್ನೋ : ಕ್ರಿಕೆಟಿಗ ಸುರೇಶ್ ರೈನಾ ಅವರ ಸಂಬಂಧಿಕರ ಮೇಲೆ 2020 ರಲ್ಲಿ ನಡೆದ ದಾಳಿಯಲ್ಲಿ ಬೇಕಾಗಿದ್ದ ಕ್ರಿಮಿನಲ್ ಒಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಶನಿವಾರ ಸಂಜೆ ಮುಜಾಫರ್‌ನಗರದ ಶಾಹಪುರ್ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
“ತಲೆಯ ಮೇಲೆ 50,000 ರೂಪಾಯಿ ಇನಾಮು ಹೊತ್ತಿದ್ದ ರಶೀದ್ ಅಲಿಯಾಸ್ ಚಲ್ತಾ ಫಿರ್ತಾ ಅಲಿಯಾಸ್ ಸಿಪಾಹಿಯಾ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾಗಿದ್ದಾನೆ” ಎಂದು ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಸಂಜೀವ್ ಸುಮನ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಎಸ್‌ಎಸ್‌ಪಿ ಪ್ರಕಾರ, ಶಹಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂತಾರಾಜ್ಯ ಗ್ಯಾಂಗ್‌ನ ಸದಸ್ಯರು ತಂಗಿದ್ದಾರೆ ಎಂಬ ಸುಳಿವು ಆಧರಿಸಿ ಪೊಲೀಸರು ಬೈಕ್ ನಲ್ಲಿ ಬಂದ ಇಬ್ಬರನ್ನು ತಡೆದರು. ಇಬ್ಬರು ಪೊಲೀಸ್ ಸಿಬಂದಿ ಯ ಮೇಲೆ ಗುಂಡು ಹಾರಿಸಿದ್ದಾರೆ,ಪ್ರತೀಕಾರದ ಗುಂಡಿನ ದಾಳಿಯಲ್ಲಿ, ರಶೀದ್ ಹತ್ಯೆಗೀಡಾಗಿದ್ದು,ಸಹಚರ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ರಶೀದ್ ಬಳಿ ಎರಡು ರಿವಾಲ್ವರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್‌ಕೌಂಟರ್ ವೇಳೆ ಶಾಹಪುರದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಬಬ್ಲು ಸಿಂಗ್ ಅವರಿಗೂ ಬುಲೆಟ್ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಶೀದ್‌ನ ಸಹಚರನನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.
2020 ರಲ್ಲಿ ಪಂಜಾಬ್‌ನಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಅವರ ಮೂವರು ಸಂಬಂಧಿಕರ ಕೊಲೆ ಸೇರಿದಂತೆ ಹಲವಾರು ಡಕಾಯಿತಿ ಮತ್ತು ಕೊಲೆ ಪ್ರಕರಣಗಳಲ್ಲಿ ರಶೀದ್ ಬೇಕಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
2020 ರಲ್ಲಿ ಆಗಸ್ಟ್ 19 ಮತ್ತು 20 ರ ಮಧ್ಯರಾತ್ರಿ ಪಠಾಣ್‌ಕೋಟ್‌ನ ಥರ್ಯಾಲ್ ಗ್ರಾಮದಲ್ಲಿ ಘಟನೆ ನಡೆದಿದ್ದು, ರೈನಾ ಅವರ ಚಿಕ್ಕಪ್ಪ, ವೃತ್ತಿಯಲ್ಲಿ ಗುತ್ತಿಗೆದಾರ ಅಶೋಕ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದರು, ಗಾಯಗೊಂಡಿದ್ದ ಅವರ ಪತ್ನಿ ಆಶಾರಾಣಿ, ಮಗ ಕೌಶಲ್ ಆಗಸ್ಟ್ 31 ರಂದು, ಸಾವನ್ನಪ್ಪಿದ್ದರು. ಇಬ್ಬರು ಗಾಯಗೊಂಡಿದ್ದರು.