Advertisement

ಉತ್ತರ ಪ್ರದೇಶ: ಮತ ಕ್ರೋಡೀಕರಣ ತಪ್ಪಿತೇ?

12:16 AM Feb 19, 2022 | Team Udayavani |

ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳು ದಟ್ಟವಾಗಿವೆ. ಆದರೆ ಕಳೆದ ಬಾರಿ ಹರಿದುಬಂದಷ್ಟು ಮತಗಳು ಈ ಬಾರಿ ಆ ಪಕ್ಷಕ್ಕೆ ಹರಿದುಬರುವುದು ಅನುಮಾನ. ಕಳೆದ ಚುನಾವಣೆಯಲ್ಲಿ ಒಗ್ಗಟ್ಟಾಗಿ ಬಿಜೆಪಿಯನ್ನು ಕೈ ಹಿಡಿದಿದ್ದ ಹಿಂದೂ ಸಮುದಾಯ ಈ ಬಾರಿ ಚದುರಿಹೋಗಿರುವುದು ಅದಕ್ಕೆ ಕಾರಣ. ಮತದಾರರ ಬದಲಾದ ಮನಃಸ್ಥಿತಿ ಇದಕ್ಕೆ ಕಾರಣವೆ, ಬಿಜೆಪಿಯ ಕೆಲವು ನಿರ್ಧಾರಗಳು ಇದಕ್ಕೆ ಕಾರಣವೇ ಎಂಬ ವಿಶ್ಲೇಷಣೆ ಇಲ್ಲಿದೆ.

Advertisement

ಅದು 2017. ಉತ್ತರ ಪ್ರದೇಶದ ಎಲ್ಲ ಭಾಗದಲ್ಲೂ ಚುನಾವಣೆಯ ಬಿರುಸು. ಇಡೀ ರಾಜ್ಯದಲ್ಲಿರುವ ಹಿಂದೂ ಸಮುದಾಯಗಳ ಒಲವು ಬಿಜೆಪಿಯತ್ತ ಹರಿದಿತ್ತು. ಹಾಗಾಗಿಯೇ ಬಿಜೆಪಿಯು, ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸದೇ ಇದ್ದರೂ ಜನ ಅದೇ ಪಕ್ಷಕ್ಕೆ ಮತ ಹಾಕಿದರು.

ಆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದು ಎರಡು ವಿಚಾರ. ಒಂದು- ಹಿಂದು ಸಮುದಾಯದ ಒಗಟ್ಟು, ಮತ್ತೊಂದು- ಪ್ರಧಾನಿ ನರೇಂದ್ರ ಮೋದಿಯವರ ಹೆಸರು. 2013ರಲ್ಲಿ ನಡೆದಿದ್ದ ಮುಜಫ‌#ರ್‌ ನಗರ್‌ ಪ್ರಕರಣದ ಅನಂತರ ಬಿಜೆಪಿ ಪರವಾಗಿ ಹಿಂದೂಗಳು ಸಂಘಟಿತರಾಗಿದ್ದರು. ಅದು 2017ರ ಚುನಾವಣೆಗೆ ನೆರವಾಯಿತು. ಆದರೆ ಕಾಲ ಬದಲಾಗಿದೆ. ರೈತರ ಪ್ರತಿಭಟನೆ, ಪಕ್ಷದಿಂದ ಒಬಿಸಿ ನಾಯಕರ ನಿರ್ಗಮನ ಈ ಬಾರಿ ಬಿಜೆಪಿಗೆ ಕೊಂಚ ಹೊಡೆತ ನೀಡುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ. 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಎರಡು ಹಂತದ ಚುನಾವಣೆಯಲ್ಲಿ ಬಿಜೆಪಿಯೇ ಹೆಚ್ಚು ಸ್ಥಾನ ಗೆದ್ದಿತ್ತು. ಇಲ್ಲಿ ಜಾಟರ ಪ್ರಾಬಲ್ಯ ಹೆಚ್ಚಾಗಿದ್ದು, ಕಳೆದ ಬಾರಿ ಇವರು ಬಿಜೆಪಿ ಕೈಹಿಡಿದಿದ್ದರು. ಈಗ ಜಯಂತ್‌ ಚೌಧರಿ ಫ್ಯಾಕ್ಟರ್‌ ಕೆಲಸ ಮಾಡಲಿದೆ ಎಂದೇ ಹೇಳಲಾಗಿದ್ದು, ಬಿಜೆಪಿಯ ಮತಗಳು ಚದುರಿವೆ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳು ಈ ಮೊದಲ ಎರಡು ಹಂತದಲ್ಲಿ ಬರಬಹುದು ಎಂಬ ವಿಶ್ಲೇಷಣೆಗಳಿವೆ.

ಕೆಳ ಹಂತದ ನಾಯಕರ ಮುನಿಸು?: ಯಾವುದೇ ಪಕ್ಷವಿರಲಿ ಅದು ತಳಹದಿಯ ಕಾರ್ಯಕರ್ತರು, ಬೇರುಮಟ್ಟದಲ್ಲಿರುವ ನಾಯಕರ ಬಲವಿಲ್ಲದೆ ನಡೆಯಲಾಗದು. ಪಕ್ಷ ಅಧಿಕಾರದಲ್ಲಿದ್ದರಂತೂ ಈ ಕೆಳ ಹಂತದ ನಾಯಕರು, ಕಾರ್ಯಕರ್ತರಿಗೆ ಹಣ, ಅಧಿಕಾರ ಹಂಚಿಕೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಲೇ ಇರಬೇಕು. ಹಾಗಿದ್ದರೆ, ಸರಕಾರ‌ವೂ ಭದ್ರ, ಪಕ್ಷವೂ ಭದ್ರ. ಇದು ಸರ್ವಕಾಲಿಕ ಸತ್ಯ. ಬಿಜೆಪಿಗೆ ಈ ವಿಚಾರ ಗೊತ್ತಿದೆ. ಆದರೆ ಕೆಳ ಹಂತದ ನಾಯಕರಿಗೆ ಸ್ವಾತಂತ್ರ್ಯ ಕೊಟ್ಟರೆ ಅವರು ಭ್ರಷ್ಟಾಚಾರಗಳಲ್ಲಿ ತೊಡಗಬಹುದು, ಗುಂಪುಗಾರಿಕೆ ಮಾಡಬಹುದು ಎಂಬ ಭೀತಿ ಹೈಕಮಾಂಡ್‌ನ‌ದ್ದು. ಹಾಗಾಗಿಯೇ ಅದು ಎಲ್ಲೆಡೆ ಒಂದು ಕೇಂದ್ರೀಕೃತ ಅಧಿಕಾರಶಾಹಿ ಸಂಸ್ಕೃತಿಯನ್ನು ಅನುಸರಿಸುತ್ತಿದೆ. ಉತ್ತರ ಪ್ರದೇಶದಲ್ಲಿಯೂ ಇಂಥದ್ದೇ ಪರಿಸ್ಥಿತಿಯಿದೆ. ಹೈಕಮಾಂಡ್‌ ಮತ್ತು ಯೋಗಿ ಆದಿತ್ಯನಾಥ್‌ ಇಬ್ಬರೇ ಅಲ್ಲಿ ಪಕ್ಷದ, ಸರಕಾರ‌ದ ಎಲ್ಲ ವಿಚಾರಗಳಲ್ಲೂ ನಿರ್ಣಾಯಕರಾಗಿದ್ದಾರೆ. ಸಾಮಾನ್ಯವಾಗಿ ಬೇರುಮಟ್ಟದ ನಾಯಕರು ಅಥವಾ ಕಾರ್ಯಕರ್ತರಲ್ಲಿ ಎಲ್ಲ ಜಾತಿಯವರೂ ಇರುತ್ತಾರೆ. ಅವರಿಗೆ ಕೇಂದ್ರೀಕೃತ ಅಧಿಕಾರ ಹಿಡಿಸುವುದಿಲ್ಲ. ಕೆಳ ಹಂತದ ನಾಯಕರ, ಅವರ ಬೆಂಬಲಿಗರ ನಿರೀಕ್ಷಿತ ಆದಾಯವನ್ನು ಹಾಗೂ ಅವರು ಅಧಿಕಾರ ಎಂಜಾಯ್‌ ಮಾಡುವುದನ್ನು ತಪ್ಪಿಸಿದೆ. ಇದೇ ಕಾರಣಕ್ಕಾಗಿ ಚುನಾವಣೆ ಘೋಷಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದಾಗ ಒಬಿಸಿಗೆ ಸೇರಿದ 11 ನಾಯಕರು ಬಿಜೆಪಿ ತೊರೆದಿದ್ದಾರೆ. ಅವರಲ್ಲಿ ಮೂವರು ಸಚಿವರು ಎಂಬುದು ಗಮನಾರ್ಹ.

ಟಿಕೆಟ್‌ ಹಂಚಿಕೆ ಅಸಮಾಧಾನ: ಇನ್ನು, ಟಿಕೆಟ್‌ ಹಂಚಿಕೆಯಲ್ಲಿನ ಅಸಮಾಧಾನವೂ ಬಿಜೆಪಿ ಪರವಾಗಿದ್ದ ಹಿಂದೂಗಳ ಒಗ್ಗಟ್ಟನ್ನು ಒಡೆದಿದೆ. ಕೆಲವು ಕಡೆ ಆ ಕ್ಷೇತ್ರದ ಜನರಿಗೆ ಪರಿಚಯವೇ ಇಲ್ಲದ ವ್ಯಕ್ತಿಗಳನ್ನು ತಂದು ಚುನಾವಣೆಗೆ ನಿಲ್ಲಿಸಲಾಗಿದೆ. ಉದಾಹರಣೆಗೆ ಮೀರಾಪುರ ಕ್ಷೇತ್ರದಲ್ಲಿ ಗುಜ್ಜಾರ್‌ ಸಮುದಾಯದವರೊಬ್ಬರಿಗೆ ಟಿಕೆಟ್‌ ನೀಡಲಾಗಿದೆ. ಈ ಬಗ್ಗೆ ಇಲ್ಲಿಯ ಗುಜ್ಜಾರ್‌ ಸಮುದಾಯಕ್ಕೆ ಸೇರಿದ ಮತದಾರರಲ್ಲಿ ಕೆಲವರನ್ನು ಕೇಳಿದರೆ, ಕಳೆದ ಚುನಾವಣೆಯಲ್ಲಿ ಗುಜ್ಜಾರ್‌ ಸಮುದಾಯ ಪೂರ್ತಿ ಬಿಜೆಪಿಗೆ ಮತ ಹಾಕಿತ್ತು. ಈ ಬಾರಿ ನಮ್ಮ ಸಮುದಾಯದವರೊಬ್ಬರಿಗೆ ಟಿಕೆಟ್‌ ನೀಡಲಾಗಿದೆ ನಿಜ. ಆದರೆ ಈ ಕ್ಷೇತ್ರದ ಜನರಿಗೆ ಅವರ ಪರಿಚಯವಿಲ್ಲ ಎನ್ನುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next