ನವದೆಹಲಿ: ರಾಜ್ಯಾದ್ಯಂತ ಕೋವಿಡ್ ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಉತ್ತರಪ್ರದೇಶ ಸರಕಾರ ವಾರಾಂತ್ಯದ ಲಾಕ್ ಡೌನ್ ಜಾರಿಗೊಳಿಸಿರುವುದಾಗಿ ಮಂಗಳವಾರ(ಏಪ್ರಿಲ್ 20) ಘೋಷಿಸಿದೆ.
ಇದನ್ನೂ ಓದಿ:ತರೀಕೆರೆ ಬಳಿ ಬಿಯರ್ ಲಾರಿ ಅಪಘಾತ : ಬಾಟಲಿಗಾಗಿ ಮುಗಿಬಿದ್ದ ಜನ!
500ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿರುವ ಎಲ್ಲಾ ಪ್ರದೇಶಗಳಲ್ಲಿಯೂ ರಾತ್ರಿ ಕರ್ಫ್ಯೂ ಮುಂದುವರಿಯಲಿದೆ. ರಾತ್ರಿ 8ರಿಂದ ಬೆಳಗ್ಗೆ 7ಗಂಟೆವರೆಗೆ ಪ್ರತಿದಿನ ಈ ರಾತ್ರಿ ಕರ್ಫ್ಯೂ ಇರಲಿದೆ ಎಂದು ವರದಿ ತಿಳಿಸಿದೆ.
ಭೀಕರ ಕೋವಿಡ್ 19 ಸೋಂಕನ್ನು ಎದುರಿಸಲು ನಮ್ಮ ತಾಳ್ಮೆ ಮತ್ತು ನಿರ್ಬಂಧ ಅತೀ ದೊಡ್ಡ ಆಯುಧವಾಗಿದೆ ಎಂದು ಸರ್ಕಾರ ಹೇಳಿದೆ. ರಾಜ್ಯಾದ್ಯಂತ ಪ್ರತಿ ಶನಿವಾರ ಮತ್ತು ಭಾನುವಾರ ವಾರಾಂತ್ಯದ ಲಾಕ್ ಡೌನ್ ಹೇರಲಾಗಿದೆ.
ಯಾವ ಜಿಲ್ಲೆಗಳಲ್ಲಿ 500ಕ್ಕಿಂತಲೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆಯೋ ಅಲ್ಲಿ ಪ್ರತಿದಿನ ರಾತ್ರಿ 8ಗಂಟೆಯಿಂದ ಬೆಳಗ್ಗೆ 7ಗಂಟೆವರೆಗೆ ರಾತ್ರಿ ಕರ್ಫ್ಯೂ ಮುಂದುವರಿಯಲಿದೆ. ಇದು ತಕ್ಷಣಕ್ಕೆ ಜಾರಿಯಾಗುವಂತೆ ಆದೇಶ ಹೊರಡಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ಬಿಡುಗಡೆಗೊಳಿಸಿರುವ ಆದೇಶದಲ್ಲಿ ತಿಳಿಸಿದೆ.
ಕೇವಲ ಅಗತ್ಯ ವಸ್ತುಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ಎಲ್ಲಾ ಜಿಲ್ಲೆಗಳಲ್ಲಿಯೂ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ ಎಂದು ಉತ್ತರಪ್ರದೇಶ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕೆ. ಅವಾಸ್ಥಿ ತಿಳಿಸಿದ್ದಾರೆ.
ಆಕ್ಸಿಜನ್ ಪ್ಲ್ಯಾಂಟ್ ಗಳಿಗೆ ಪೊಲೀಸ್ ರಕ್ಷಣೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಆಕ್ಸಿಜನ್ ಸರಬರಾಜು ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ನಿರ್ವಹಣೆ ಮಾಡಬೇಕೆಂದು ಉತ್ತರಪ್ರದೇಶ ಸರ್ಕಾರ ಸೂಚನೆ ನೀಡಿದೆ.