Advertisement
1984ರ ಚುನಾವಣೆವರೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹುರಿಯಾಳುಗಳು ಹೆಚ್ಚಿನ ಬಾರಿ ಗೆದ್ದಿದ್ದರು. 1998 ಮತ್ತು 199ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. 2004, 2009ರಲ್ಲಿ ಬಿಎಸ್‌ಪಿ, ಎಸ್‌ಪಿ ಅಭ್ಯರ್ಥಿಗಳು ಗೆದ್ದಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಸಾಧ್ವಿ ನಿರಂಜನಾ ಜ್ಯೋತಿ 4,85,994 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಅಂದು ಅವರ ಗೆಲುವಲ್ಲಿ ನರೇಂದ್ರ ಮೋದಿ ಅಲೆ ಪ್ರಮುಖ ಪಾತ್ರ ವಹಿಸಿತ್ತು, ಈ ಬಾರಿ ಸಾಧ್ವಿಯ ವರ್ಚಸ್ಸೂ ಉತ್ತಮವಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
Related Articles
Advertisement
ಈ ಬಾರಿ ಎಸ್‌ಪಿ ಮತ್ತು ಬಿಎಸ್‌ಪಿ ಜತೆಗೂಡಿ ಉತ್ತರ ಪ್ರದೇಶದಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಿವೆ. ಹೀಗಾಗಿ, ಮುಸ್ಲಿಂ, ಎಸ್‌ಸಿ, ಎಸ್‌ಟಿ ಸಮುದಾಯದ ಮತಗಳು ಹೆಚ್ಚು ವಿಭಜನೆಯಾಗದು ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳನ್ನು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವರ್ಚಸ್ಸನ್ನು ಮುಂದಿಟ್ಟುಕೊಂಡು ಬಿಜೆಪಿ ಮತ ಕೇಳುತ್ತಿದೆ. ಇನ್ನು ಕಾಂಗ್ರೆಸ್ ಮತ್ತು ಮೈತ್ರಿಕೂಟದ ಅಭ್ಯರ್ಥಿಗಳು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು, ಕೇಂದ್ರದ ನಿಲುವುಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿವೆ.
ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಅಂದರೆ ಕಾಂಗ್ರೆಸ್, ಎಸ್‌ಪಿ-ಬಿಎಸ್‌ಪಿ ಮತ್ತು ಬಿಜೆಪಿ ನಡುವೆ ಹೋರಾಟ ಇದೆ. ನೇರವಾಗಿ ಬಿಜೆಪಿ ಮತ್ತು ಎಸ್‌ಪಿ-ಬಿಎಸ್‌ಪಿ ಅಭ್ಯರ್ಥಿಗಳ ನಡುವೆ ಹೋರಾಟ ಇದೆ.
ಈ ಕ್ಷೇತ್ರ ಅತ್ಯಂತ ಹಿಂದುಳಿದಿದೆ. ಜಿಲ್ಲೆಯ ಪ್ರಧಾನ ಕೇಂದ್ರದಲ್ಲಿಯೇ ಸರಿಯಾದ ರೀತಿಯ ಒಳಚರಂಡಿ ವ್ಯವಸ್ಥೆಯೇ ಇಲ್ಲ. ಇದರ ಜತೆಗೆ ಉದ್ಯೋಗ ಸೃಷ್ಟಿಗಾಗಿ ಸರಿಯಾದ ರೀತಿಯ ಕೈಗಾರಿಕೆಗಳೇ ಇಲ್ಲ. 2013ರಲ್ಲಿ ಸಮಾಜವಾದಿ ಪಕ್ಷದ ಆಡಳಿತದ ಅವಧಿಯಲ್ಲಿ ಜಾರಿ ಮಾಡಲಾಗುತ್ತದೆ ಎಂದು ಹೇಳಲಾಗಿದ್ದ ಟ್ರಾಮಾ ಸೆಂಟರ್ ಇನ್ನೂ ಕೂಡ ಆರಂಭಿಕ ಹಂತದಲ್ಲಿಯೇ ಇದೆ ಎನ್ನುತ್ತಾರೆ ಬಿಜೆಪಿ ವಿರೋಧಿ ಅಭ್ಯರ್ಥಿಗಳು. ಆದರೆ ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜಿಲ್ಲೆಯನ್ನು ಅತ್ಯಂತ ಹಿಂದುಳಿದ ಜಿಲ್ಲೆ ಎಂದು ಘೋಷಣೆ ಮಾಡಿ, ಹಲವು ಯೋಜನೆಗಳನ್ನು ತರುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ಸಾಧ್ವಿ.