Advertisement
2017ರಲ್ಲಿ ಬಿಜೆಪಿ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಪಕ್ಷ ಪೂರ್ಣ ಬಹುಮತದಿಂದ ಚುನಾಯಿತವಾದಾಗ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬಹುದು ಎಂಬ ಕುತೂಹಲ ಎಲ್ಲರದಾಗಿತ್ತು. ಮುಖ್ಯಮಂತ್ರಿ ಗಾದಿಗೆ ಪಕ್ಷದ ಹಿರಿಯ ಮತ್ತು ಕಿರಿಯ ನಾಯಕರಾದಿಯಾಗಿ ಹತ್ತು ಹಲವು ಹೆಸರುಗಳು ಕೇಳಿಬಂದವಾದರೂ ಬಿಜೆಪಿ ವರಿಷ್ಠರು ಗೋರಖ್‌ಪುರದ ಸಂಸದರಾಗಿದ್ದ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಯೋಗಿ ಆದಿತ್ಯನಾಥ್ ಬಿಜೆಪಿಯ ಸಕ್ರಿಯ ನಾಯಕರಾಗಿದ್ದರಾದರೂ ಅವರಿಗೆ ಪಕ್ಷ ಮುಖ್ಯಮಂತ್ರಿಯಂಥ ಮಹತ್ವದ ಹೊಣೆಗಾರಿಕೆ ನೀಡೀತು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಕಟು ಹಿಂದುತ್ವವಾದಿ, ರಾಷ್ಟ್ರವಾದಿಯಾಗಿರುವ ಯೋಗಿ ಆದಿತ್ಯನಾಥ್ ತಮ್ಮ ಪ್ರಖರ ಮಾತುಗಳಿಂದಲೇ ಅಲ್ಪಸಂಖ್ಯಾಕರ ವಿರೋಧಿ ಎಂಬ ಹಣೆಪಟ್ಟಿ ಅಂಟಿಸಿಕೊಂಡವರು. ಸಂಸದರಾದ ಬಳಿಕವೂ ಇವರು ನೀಡುತ್ತಿದ್ದ ಹೇಳಿಕೆಗಳು ಸದಾ ವಿವಾದವನ್ನು ಸೃಷ್ಟಿಸುತ್ತಿದ್ದವು. ಈ ಮೂಲಕವೇ ಯೋಗಿ ಆದಿತ್ಯನಾಥ್ ದೇಶದಲ್ಲಿ ಜನಪ್ರಿಯರಾಗಿದ್ದರು. ಹಿಂದೂ ಸಮಾವೇಶಗಳು, ಬಿಜೆಪಿ ರ್ಯಾಲಿಗಳಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ಅಗ್ರ ಮಣೆ. ಬಿಜೆಪಿಯ ಚುನಾವಣ ಪ್ರಚಾರದ ನಾಯಕರ ಪಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ಅವರ ಹೆಸರು ಇದ್ದೇ ಇತ್ತು. ಇಂಥ ಯೋಗಿ ಆದಿತ್ಯನಾಥ್ ಅವರಿಗೆ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದ್ದ ರಾಜ್ಯವಾಗಿದ್ದ ಉತ್ತರ ಪ್ರದೇಶದ ಆಡಳಿತ ಚುಕ್ಕಾಣಿಯನ್ನು ಬಿಜೆಪಿ ನಾಯಕರು ವಹಿಸಿದಾಗ ಸಹಜವಾಗಿ ದೇಶದ ಜನತೆ ಅವರ ಆಡಳಿತದತ್ತ ಕುತೂಹಲದ ದೃಷ್ಟಿ ಹರಿಸಿದ್ದು ಮಾತ್ರ ಸುಳ್ಳಲ್ಲ.
Related Articles
Advertisement
ದ್ವಿತೀಯ ಪಾಳಿ ಆರಂಭ: ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸುವ ಮೂಲಕ ರಾಜ್ಯದ ಮುಖ್ಯಮಂತ್ರಿ ಯಾಗಿ ತಮ್ಮ ದ್ವಿತೀಯ ಪಾಳಿ ಆರಂಭಿಸಿದ್ದಾರೆ. ಉತ್ತರಪ್ರದೇಶವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿಸುವ ಸಂಕಲ್ಪವನ್ನು ಈಡೇರಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನಿರಿಸಿದ್ದಾರೆ. ಸಚಿವರ ಆಯ್ಕೆ ಪ್ರಕ್ರಿಯೆಯನ್ನು ಪಕ್ಷದ ವರಿಷ್ಠರ ಜತೆಗೂಡಿ ಅತ್ಯಂತ ಜಾಣ್ಮೆಯಿಂದ ಪೂರ್ಣ ಗೊಳಿಸಿರುವ ಅವರು ಜಾತಿ ಸಮೀಕರಣ, ಪ್ರಾದೇಶಿಕ ಅಸಮಾನತೆಗೆ ಆಸ್ಪದವಿಲ್ಲದಂತೆ ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿ ದ್ದಾರೆ. ಸಚಿವ ಸಂಪುಟದಲ್ಲಿ ಯುವ ಮತ್ತು ಮಧ್ಯ ವಯಸ್ಕರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಎಲ್ಲ ಮತ, ಜಾತಿ, ವರ್ಗ, ಸಮುದಾಯ ದವರಿಗೂ ತಮ್ಮ ಸಂಪುಟದಲ್ಲಿ ಯೋಗಿ ಆದಿತ್ಯನಾಥ್ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಮಾಜಿ ಐಎಎಸ್, ಐಪಿಎಸ್ ಅಧಿಕಾರಿಗಳು, ಸ್ನಾತಕೋತ್ತರ ಪದವೀಧರರು, ಪದವೀಧರರು ಹೀಗೆ ಕೇಂದ್ರದ ಮಾದರಿಯಲ್ಲಿ ಸಂಪುಟಕ್ಕೆ ಶಾಸಕರನ್ನು ಸೇರ್ಪಡೆಗೊಳಿಸಲಾಗಿದೆ. ಪ್ರದೇಶವಾರು ಲೆಕ್ಕಾಚಾರ ಮಾಡಿ ಸಚಿವ ಸ್ಥಾನ ಹಂಚಲಾಗಿದೆ. ಇನ್ನೂ 8 ಸಚಿವ ಸ್ಥಾನಗಳು ಖಾಲಿ ಇದ್ದು ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅಥವಾ ಅತ್ಯಗತ್ಯ ಎಂದೆನಿಸಿದಾಗ ಈ ಸ್ಥಾನಗಳನ್ನು ಭರ್ತಿ ಮಾಡುವ ಇರಾದೆ ಯೋಗಿ ಅವರದ್ದಾಗಿದೆ.
2024ರ ಚುನಾವಣೆಯತ್ತ ದೃಷ್ಟಿ: 2024ರ ಲೋಕಸಭೆ ಚುನಾವಣೆ ಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಉತ್ತರ ಪ್ರದೇಶ ಸಂಪುಟ ರಚನೆ ಯಾಗಿರುವುದಂತೂ ಸುಸ್ಪಷ್ಟ. 80 ಲೋಕಸಭಾ ಸ್ಥಾನಗಳನ್ನು ಹೊಂದಿ ರುವ ಉತ್ತರ ಪ್ರದೇಶ ಎಲ್ಲ ಪಕ್ಷಗಳ ಪಾಲಿಗೂ ಅತ್ಯಂತ ಮಹತ್ವದ್ದಾಗಿದೆ. 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತದರ ಮಿತ್ರಪಕ್ಷಗಳು ಜತೆಗೂಡಿ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗಳಿಸುವ ಮೂಲಕ ಕೇಂದ್ರದಲ್ಲಿ ನಿಚ್ಚಳ ಬಹುಮತ ಪಡೆಯಲು ಬಿಜೆಪಿಗೆ ಸಾಧ್ಯವಾಗಿತ್ತು. 2024ರ ಚುನಾವಣೆ ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವುದರಿಂದ ರಾಜ್ಯದಿಂದ ಗರಿಷ್ಠ ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸುವ ಜವಾಬ್ದಾರಿ ಈಗ ಯೋಗಿ ಅವರ ಹೆಗಲಿಗೇರಿದೆ. ಇದೇ ವೇಳೆ ನರೇಂದ್ರ ಮೋದಿ ಅವರ ಬಳಿಕ ಬಿಜೆಪಿಯ ಸಂಭಾವ್ಯ ಪ್ರಧಾನಿ ಅಭ್ಯರ್ಥಿ ಎಂದು ಗುರುತಿಸಲ್ಪಟ್ಟಿರುವ ಯೋಗಿ ಆದಿತ್ಯನಾಥ್ ಅವರ ಎರಡನೇ ಇನಿಂಗ್ಸ್ ನತ್ತ ಸಹಜವಾಗಿ ಇಡೀ ದೇಶದ ಜನರ ದೃಷ್ಟಿ ನೆಟ್ಟಿದೆ.
ಕಳೆದ ಐದು ವರ್ಷಗಳಿಂದ ಅಧಿಕಾರ ನಡೆಸುತ್ತಿರುವುದರಿಂದ ಇಡೀ ರಾಜ್ಯದ ಸ್ಥಿತಿಗತಿ, ಆಗಬೇಕಿರುವ ಕೆಲಸಕಾರ್ಯಗಳು, ಅಭಿವೃದ್ಧಿ ಸಾಧ್ಯತೆಗಳು, ಕೈಗೆತ್ತಿಕೊಳ್ಳಬಹುದಾದ ಯೋಜನೆಗಳು, ಜನಕಲ್ಯಾಣ ಯೋಜನೆಗಳ ಸಂಪೂರ್ಣ ಅರಿವು ಅವರಿಗಿದೆ. ಇವೆಲ್ಲವುಗಳಿಗಿಂತ ಮುಖ್ಯವಾಗಿ ಕಾರ್ಯಾಂಗದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವುದರಿಂದ ತಮ್ಮ ಕನಸು, ಆಶಯಗಳನ್ನು ಕಾರ್ಯಗತ ಗೊಳಿಸಲು ಸಹಕಾರಿಯಾಗಲಿದೆ. ಕೇಂದ್ರದಲ್ಲಿ ತಮ್ಮದೇ ಪಕ್ಷದ ಸರಕಾರವಿರುವುದು ಮತ್ತು ಪ್ರಧಾನಿ ಮೋದಿ ರಾಜ್ಯದ ವಾರಾಣಸಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವುದರಿಂದ ಅಭಿವೃದ್ಧಿಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಧನಾತ್ಮಕ ಅಂಶವಾಗಲಿದೆ. ಇನ್ನು ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರ ನಿಗದಿತ ಅವಧಿಯಲ್ಲಿ ಲೋಕಾರ್ಪಣೆ ಗೊಂಡು ಭಕ್ತರ ದರ್ಶನಕ್ಕೆ ಮುಕ್ತವಾದಲ್ಲಿ ಉತ್ತರ ಪ್ರದೇಶ ಧಾರ್ಮಿಕ ಪ್ರವಾಸೋದ್ಯಮದ ರಾಜಧಾನಿಯಾಗಿ ಮಾರ್ಪಾಡಾಗಲಿದೆ. ಪ್ರಮಾಣವಚನ ಸ್ವೀಕರಿಸಿದ ಬಳಿಕ ಹೊಸ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿರುವ ಆದಿತ್ಯನಾಥ್ ಅವರು ಚುನಾವಣೆಗೂ ಮುನ್ನ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು ಮತ್ತು ಘೋಷಿಸಿದ ಯೋಜನೆಗಳ ಜಾರಿಗಾಗಿ ನಿರ್ದಿಷ್ಟ ಕ್ರಿಯಾಯೋಜನೆ ರೂಪಿಸಲು ಸಲಹೆ ನೀಡಿದ್ದಾರೆ. ಮೊದಲ ಹಂತದಲ್ಲಿ 100 ದಿನ, ಆರು ತಿಂಗಳು ಮತ್ತು ವರ್ಷದ ಅವಧಿಯ ಕಾರ್ಯಯೋಜನೆ ರಚಿಸುವಂತೆ ಸೂಚನೆ ನೀಡಿದ್ದಾರೆ.
ಹಾಗೆಂದು ಯೋಗಿ ಅವರ ಮುಂದೆ ಸವಾಲುಗಳೇ ಇಲ್ಲ ಎಂದಲ್ಲ. ಕಳೆದ ಅವಧಿಯುದ್ದಕ್ಕೂ ರಾಜ್ಯದ ಕಾನೂನು-ಸುವ್ಯವಸ್ಥೆಯನ್ನು ಸರಿ ದಾರಿಗೆ ಆದ್ಯತೆ ನೀಡಿದ್ದರಿಂದ ಈ ಬಾರಿ ಸಹಜವಾಗಿ ರಾಜ್ಯದ ಅಭಿ ವೃದ್ಧಿ ಯೋಜನೆಗಳತ್ತ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲೇಬೇಕಿದೆ. ಕಾನೂನು-ಸುವ್ಯವಸ್ಥೆಯ ಸಮರ್ಪಕ ನಿರ್ವಹಣೆಯ ಜತೆಜತೆಯಲ್ಲಿ ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿ ಸುವ ಗುರುತರ ಜವಾಬ್ದಾರಿ ಇದೆ. ರಾಜ್ಯದಲ್ಲಿ ಹೆಚ್ಚಿರುವ ನಿರುದ್ಯೋಗ ಸಮಸ್ಯೆ, ರೈತರ ಬೆಳೆಗಳಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಒದಗಿಸು ವುದು, ಕಬ್ಬು ಬೆಳೆಗಾರರ ಹಿಂಬಾಕಿ ಪಾವತಿ ಸಹಿತ ಹಲವಾರು ಸವಾಲುಗಳನ್ನು ಎದುರಿಸುವ ಅನಿವಾರ್ಯತೆ ಯೋಗಿ ಸರಕಾರದ ಮುಂದಿದೆ. ಇನ್ನು ಉತ್ತರ ಪ್ರದೇಶ ದೇಶದ ಅತೀದೊಡ್ಡ ರಾಜ್ಯವಾಗಿದ್ದರೂ ಕೈಗಾರಿಕ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಇದು ರಾಜ್ಯದ ಬೊಕ್ಕಸದ ಮೇಲೂ ಪರಿಣಾಮ ಬೀರುತ್ತಿದೆ. ಈಗ ಶಾಂತಿ-ಸುವ್ಯವಸ್ಥೆ ನೆಲೆಸಿರುವುದರಿಂದ ರಾಜ್ಯದತ್ತ ಹೂಡಿಕೆದಾರರು ಮತ್ತು ಕೈಗಾರಿಕ ಕಂಪೆನಿಗಳನ್ನು ಆಕರ್ಷಿಸಲು ಹೆಚ್ಚಿನ ಗಮನ ಹರಿಸಬೇಕಿದೆ. ಈ ದಿಸೆಯಲ್ಲಿ ಯೋಗಿ ಆದಿತ್ಯನಾಥ್ ಕಾರ್ಯೋನ್ಮುಖವಾದಲ್ಲಿ ಉತ್ತರ ಪ್ರದೇಶ ತನ್ನ ಮತ್ತೂಂದು ಕಳಂಕದಿಂದ ಮುಕ್ತವಾಗಲಿದೆ.
ಇದೇ ವೇಳೆ ವಿಧಾನಸಭೆಯಲ್ಲಿ ವಿಪಕ್ಷ ಸಮಾಜವಾದಿ ಪಾರ್ಟಿಯ ಬಲ ಈ ಬಾರಿ ವೃದ್ಧಿಸಿದೆ. ಸ್ವತಃ ಅಖಿಲೇಶ್ ಯಾದವ್ ಅವರೇ ಯೋಗಿ ಸರಕಾರದ ಲೋಪದೋಷಗಳ ವಿರುದ್ಧ ಹೋರಾಟ ನಡೆಸಲು ಸನ್ನದ್ಧರಾಗಿದ್ದಾರೆ. ಸದ್ಯ ರಾಜ್ಯದಲ್ಲಿ ಏನಿದ್ದರೂ ಬಿಜೆಪಿ ಮತ್ತು ಸಮಾಜವಾದಿ ಪಾರ್ಟಿಯ ನಡುವೆಯೇ ಪೈಪೋಟಿ. ಈ ಹಿನ್ನೆಲೆಯಲ್ಲಿ ಯೋಗಿ ಈ ಬಾರಿ ಒಂದಿಷ್ಟು ಹೆಚ್ಚೇ ಶ್ರಮ ವಹಿಸಬೇಕಿದೆ.
-ಹರೀಶ್.ಕೆ