ನೋಯ್ಡಾ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ (ಆಗಸ್ಟ್ 08-2020)ದಂದು ನೋಯ್ಡಾದ ಸೆಕ್ಟರ್ 39ರಲ್ಲಿ 400 ಹಾಸಿಗೆಗಳ ಕೋವಿಡ್ 19 ಆಸ್ಪತ್ರೆಯನ್ನು ಉದ್ಘಾಟಿಸಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಹಾಸ್ ಎಲ್ ವೈ ಜತೆಗಿದ್ದರು.
ಸಿಎಂ ಯೋಗಿ ಆದಿತ್ಯನಾಥ್ ಭೇಟಿಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ಶುಕ್ರವಾರ ನೋಯ್ಡಾ ಪೊಲೀಸರು ಸುದ್ದಿಗಾರರ ಜತೆ ಮಾತನಾಡುತ್ತ, ಶನಿವಾರ ಮುಖ್ಯಮಂತ್ರಿ ಭೇಟಿ ನಿಟ್ಟಿನಲ್ಲಿ ನೋಯ್ಡಾದಲ್ಲಿ ಸೆಕ್ಷನ್ 144 ಜಾರಿಗೊಳಿಸುತ್ತಿದ್ದೇವೆ. ಡ್ರೋಣ್ ಹಾರಾಟಕ್ಕೂ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದರು.
ಶುಕ್ರವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಿಲ್ಲೆಯಲ್ಲಿನ ಕೋವಿಡ್ 19 ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಗೌತಮ್ ಬುದ್ಧ ನಗರದ ಅಧಿಕಾರಿಗಳೊಡನೆ ಸಭೆ ನಡೆಸಿದ್ದರು. ಸಂಜಯ್ ಗಾಂಧಿ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ಕಿಂಗ್ ಜಾರ್ಜ್ ಮೆಡಿಕಲ್ ಯೂನಿರ್ವಸಿಟಿಯಿಂದ ತಜ್ಞರ ತಂಡಗಳನ್ನು ಕಳುಹಿಸಿ ಮಾರ್ಗದರ್ಶನ ಮಾಡುವಂತೆ ಸೂಚನೆ ನೀಡಿದ್ದಾರೆ.
ಗೌತಮ್ ಬುದ್ಧ ನಗರದಲ್ಲಿ ಶುಕ್ರವಾರ 905 ಸಕ್ರಿಯ ಪ್ರಕರಣ ಸೇರಿದಂತೆ ಒಟ್ಟು 5,806 ಪ್ರಕರಣ ವರದಿಯಾಗಿದೆ. ಇದರಲ್ಲಿ 4,857 ಮಂದಿ ಗುಣಮುಖರಾಗಿದ್ದು, 43 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಉತ್ತರಪ್ರದೇಶದಲ್ಲಿ ಈವರೆಗೆ 1,13,378 ಕೋವಿಡ್ 19 ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 44,563 ಸಕ್ರಿಯ ಪ್ರಕರಣಗಳು, 66,834 ಮಂದಿ ಗುಣಮುಖರಾಗಿದ್ದು, 1918 ಜನರು ಸಾವನ್ನಪ್ಪಿರುವುದಾಗಿ ಆರೋಗ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ತಿಳಿಸಿದೆ.