ಗೋರಖ್ ಪುರ : ದಲಿತ ವಿರೋಧಿ ಎಂದು ಆರೋಪಿಸಿ ಸಚಿವರು ಮತ್ತು ಕೆಲ ಶಾಸಕರು ಪಕ್ಷ ತೊರೆದ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದಲಿತ ಸಮುದಾಯದ ಮನೆಯಲ್ಲಿ ಸಹಭೋಜನ ಮಾಡಿ ಗಮನ ಸೆಳೆದಿದ್ದಾರೆ.
ಮಕರಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಗೋರಖ್‌ಪುರದಲ್ಲಿರುವ ಅಮೃತ್‌ಲಾಲ್ ಭಾರತಿ ಅವರ ನಿವಾಸದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಊಟ ಮಾಡಿ ‘ಖಿಚರಿ ಸಹಭೋಜ್’ಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಭಾರತಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಸಿಎಂ ಹೇಳಿದ್ದಾರೆ.
ಫೆಬ್ರವರಿ 10 ರಿಂದ ಪ್ರಾರಂಭವಾಗುವ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ, ದಲಿತ ವಿರೋಧಿ ಎಂದು ಆರೋಪಿಸಿ ಸರ್ಕಾರಕ್ಕೆ ರಾಜೀನಾಮೆ ನೀಡಿದ ಸ್ವಾಮಿ ಪ್ರಸಾದ್ ಮೌರ್ಯ, ದಾರಾ ಸಿಂಗ್ ಚೌಹಾಣ್ ಮತ್ತು ಧರಂ ಸಿಂಗ್ ಸೈನಿ ಅವರು ಲಕ್ನೋದ ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಸದಸ್ಯತ್ವ ಸ್ವೀಕರಿಸುವ ಸ್ವಲ್ಪ ಮೊದಲು ಗೋರಖ್‌ಪುರದ ದಲಿತರ ಮನೆಗೆ ಆದಿತ್ಯನಾಥ್ ಭೇಟಿ ನೀಡಿದ್ದಾರೆ.
ಹಿಂದಿನ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸರ್ಕಾರ “ಸಾಮಾಜಿಕ ಶೋಷಣೆ” ನಡೆಸಿತ್ತು ಅದು “ಸಾಮಾಜಿಕ ನ್ಯಾಯ” ಅಲ್ಲವಾಗಿತ್ತು ಎಂದು ಕಿಡಿ ಕಾರಿದರು.
ಪ್ರಸ್ತುತ ಬಿಜೆಪಿ ಸರ್ಕಾರ ಯಾವುದೇ ಭೇದಭಾವವಿಲ್ಲದೆ ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಹೇಳಿದರು.