ಅಹ್ಮದಾಬಾದ್: ಕಾಂಗ್ರೆಸ್‌ನ ಆಡಳಿತದ ಅವಧಿಯಲ್ಲಿ ಅಯೋಧ್ಯೆ ಯಲ್ಲಿ ಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಲು ಸಾಧ್ಯವಾಗುತ್ತಿತ್ತೇ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಶ್ನೆ ಮಾಡಿದ್ದಾರೆ.
ಡಿ.1ರಂದು ನಡೆಯುವ ಮೊದಲ ಹಂತದ ಮತದಾನ ನಡೆಯುವ ಸೌರಾಷ್ಟ್ರ, ಕಛ…, ದಕ್ಷಿಣ ಗುಜರಾತ್‌ನ ಹಲವು ಕ್ಷೇತ್ರಗಳಲ್ಲಿ ಒಟ್ಟು 89 ರ್ಯಾಲಿಗಳಲ್ಲಿ ಬಿಜೆಪಿ ನಾಯಕರು ಮಾತನಾಡಿದ್ದಾರೆ.
ಗುಜರಾತ್‌ನ ಮೊರ್ಬಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಹಲವು ಸಾಧನೆಗಳನ್ನು ಮಾಡಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಮಂದಿರ ನಿರ್ಮಾಣ, ವಿಶೇಷ ಸ್ಥಾನಮಾನ ರದ್ದು ಮಾಡಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್‌ನ ನಾಯಕರಿಗೆ ರಾಷ್ಟ್ರಗೀತೆಯನ್ನು ಗೌರವಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ. ಕೊರೊನಾ ಅವಧಿಯಲ್ಲಿ ಪ್ರಧಾನಿ ಮೋದಿಯವರು ಕೈಗೊಂಡ ಕ್ರಮಗಳನ್ನೂ ಉ.ಪ್ರ.ಸಿಎಂ ಯೋಗಿ ಆದಿತ್ಯನಾಥ್ ಕೊಂಡಾಡಿದ್ದಾರೆ.
ದೇಶ ಮುರಿಯಲಿದೆ: ಗುಜರಾತ್‌ನ ನವಸಾರಿಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕಾಂಗ್ರೆಸ್ ಕೇವಲ ದೇಶವನ್ನು ಮುರಿಯಲು ಶಕ್ತವಾಗಿದೆಯೇ ಹೊರತು ಜೋಡಿಸಲು ಮನಸ್ಸು ಮಾಡುತ್ತಿಲ್ಲ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೈಗೊಂಡ ಭಾರತ್ ಜೋಡೋ ಯಾತ್ರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂದರು.
ಐಎಎಸ್ ಅಧಿಕಾರಿ ಕರ್ತವ್ಯದಿಂದ ಹೊರಕ್ಕೆ: ಗುಜರಾತ್‌ನಲ್ಲಿ ಚುನಾವಣ ಕರ್ತವ್ಯಕ್ಕೆಂದು ನಿಯೋ ಜಿತ ರಾಗಿದ್ದ ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಅವರನ್ನು ಮುಕ್ತಗೊಳಿಸಲಾಗಿದೆ. ಚುನಾವಣ ವೀಕ್ಷಕರಾಗಿ ನೇಮಕಗೊಂಡಿದ್ದ ಅವರು, ಫೋಟೋ ಅಪ್‌ಲೋಡ್ ಮಾಡಿದ್ದರು. ಇನ್‌ಸ್ಟಾಗ್ರಾಂ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ “ಚುನಾವಣ ವೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ’ ಎಂದು ಬರೆದುಕೊಂಡಿದ್ದರು.