ಲಕ್ನೋ: ಈಶಾನ್ಯ ರಾಜ್ಯಗಳ ಗಡಿ ಮೂಲಕ ಉತ್ತರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಕಾನೂನು ಬಾಹಿರವಾಗಿ ಒಳನುಸುಳಿ ವಾಸ್ತವ್ಯ ಹೂಡಿರುವ ಸುಮಾರು 9,000 ಸಾವಿರ ಶಂಕಿತ ರೋಹಿಂಗ್ಯಾಗಳನ್ನು ಪತ್ತೆ ಹಚ್ಚಲು ಉತ್ತರಪ್ರದೇಶ ಪೊಲೀಸರು ಮುಂದಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಂಟ್ವಾಳ: ಗುಡ್ಡ ಜರಿದು ರಸ್ತೆಗೆ ಬಿದ್ದ ಕಲ್ಲು ಬಂಡೆ; ಸಾರ್ವಜನಿಕ ರಸ್ತೆ ಬಂದ್
ರೋಹಿಂಗ್ಯಾಗಳ ಗುರುತಿನ ಪ್ರಕ್ರಿಯೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಅನೇಕ ಅಕ್ರಮ ವಲಸಿಗರನ್ನು ಬಂಧಿಸುವ ಸಾಧ್ಯತೆ ಇದ್ದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ರಮ ವಲಸಿಗ ರೋಹಿಂಗ್ಯಾಗಳು ನಗರದ ಹೊರವಲಯದಲ್ಲಿರುವ ಕ್ಯಾಂಪ್ ಗಳಲ್ಲಿ, ರಸ್ತೆ ಬದಿಗಳಲ್ಲಿ, ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳ ಸಮೀಪ ವಾಸಿಸುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ರಾಜ್ಯದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಭಯೋತ್ಪಾದಕ ನಿಗ್ರಹ ದಳ ಪತ್ತೆ ಹಚ್ಚುವ ಕಾರ್ಯಾಚರಣೆಗೆ ಇಳಿದಿದ್ದು, ಸೋಮವಾರ 55 ಪುರುಷರು, 14 ಮಹಿಳೆಯರು ಹಾಗೂ 5 ಮಕ್ಕಳನ್ನು ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ.
ಪಶ್ಚಿಮ ಉತ್ತರಪ್ರದೇಶದ ಆರು ಜಿಲ್ಲೆಗಳಲ್ಲಿ ವಶಕ್ಕೆ ಪಡೆದ ರೋಹಿಂಗ್ಯಾಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸ್ಪೆಷಲ್ ಡಿಜಿ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ. 2019ರ ಸೆಪ್ಟೆಂಬರ್ 30ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಕ್ರಮವಾಗಿ ವಾಸವಾಗಿರುವ ರೋಹಿಂಗ್ಯಾಗಳ ಗುರುತು ಪತ್ತೆ ಹಚ್ಚುವಂತೆ ಎಲ್ಲಾ ಪೊಲೀಸ್ ಠಾಣೆಗಳಿಗೂ ನೋಟಿಸ್ ಜಾರಿಗೊಳಿಸಿದ್ದ ನಂತರ ಈ ಪ್ರಕ್ರಿಯೆ ಚುರುಕು ಪಡೆದಿರುವುದಾಗಿ ಮಾಜಿ ಡಿಜಿಪಿ ಓಪಿ ಸಿಂಗ್ ತಿಳಿಸಿದ್ದಾರೆ.