ಹೊಸದಿಲ್ಲಿ/ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಇತ್ಯರ್ಥಗೊಂಡ ಬಳಿಕ 2022ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯುವುದು ಎಲ್ಲ ರಾಜಕೀಯ ಪಕ್ಷಗಳಿಗೆ ಮಹತ್ವದ್ದಾಗಿದೆ.
ಹೀಗಾಗಿ ಅಯೋಧ್ಯೆಯನ್ನೇ ಚುನಾವಣ ಪ್ರಚಾರದ ಆರಂಭದ ಸ್ಥಳವನ್ನಾಗಿ ಮಾಡಿಕೊಂಡಿವೆ. ಬಿಜೆಪಿ, ಸಮಾಜವಾದಿ ಪಕ್ಷ, ಬಿಎಸ್‌ಪಿ ಈಗಾಗಲೇ ಮುಂದಿನ ಚುನಾವಣೆಗಾಗಿ ಪ್ರಚಾರವನ್ನು ಅಯೋಧ್ಯೆಯಿಂದಲೇ ಆರಂಭ ಮಾಡಿವೆ.
ಇಷ್ಟು ಮಾತ್ರವಲ್ಲ ರಾಜ್ಯ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಲಿರುವ ಸಂಸದ ಅಸಾದು ದ್ದೀನ್ ಒವೈಸಿ ಅವರ ಎಐಎಂಐಎಂ ಪಕ್ಷ, ಕುಂಡಾ ಕ್ಷೇತ್ರದ ಶಾಸಕ ರಘುರಾಜ್ ಪ್ರತಾಪ್ ಸಿಂಗ್ ನೇತೃತ್ವದ ಜನಸತ್ತಾ ಲೋಕತಾಂತ್ರಿಕ ದಳ ಕೂಡ ಅಲ್ಲಿಂದಲೇ ಪ್ರಚಾರ ನಡೆಸಲು ಮುಂದಾಗಿದೆ. ಸದ್ಯ ಅಯೋಧ್ಯೆ ಕ್ಷೇತ್ರವನ್ನು ಬಿಜೆಪಿಯ ವೇದ ಪ್ರಕಾಶ್ ಗುಪ್ತಾ ಪ್ರತಿನಿಧಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 2020 ಆ.5ರಂದು ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇ ರಿಸಿದ ಬಳಿಕ ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಪದೇ ಪದೆ ಅಯೋಧ್ಯೆಗೆ ಭೇಟಿ ನೀಡಿ ದೇಗುಲ ಕಾಮಗಾರಿ ಮತ್ತು ಇತರ ಅಂಶಗಳ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಇದರ ಜತೆಗೆ ಬಿಜೆಪಿ ಸೆ.5ರಂದು “ಪ್ರಬುದ್ಧ ಸಮ್ಮೇಳನ’ ಎಂಬ ಶೀರ್ಷಿಕೆ ಯಲ್ಲಿ ಬುದ್ಧಿಜೀವಿಗಳ ಸಮಾವೇಶ ಏರ್ಪಡಿಸಿತ್ತು. ಬಿಎಸ್‌ಪಿ ನಾಯಕಿ ಮಾಯಾವತಿ ಜು.23ರಂದು “ಬ್ರಾಹ್ಮಣ ಸಮ್ಮೇಳನ’ ಆಯೋಜಿಸಿ ಮತ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದರು.
ಮೈತ್ರಿ ಇಲ್ಲ: ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಯಾವುದೇ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಆದರೆ, ವಿಪಕ್ಷಗಳು ರಚಿಸಲು ಉದ್ದೇಶಿಸಿರುವ ಒಕ್ಕೂಟಕ್ಕೆ ಷರತ್ತುಗಳನ್ನು ಮುಂದಿಟ್ಟುಕೊಂಡು ಬೆಂಬಲ ಸೂಚಿಸಲಿದೆ ಎಂದು ಬಿಎಸ್‌ಪಿಯ ರಾಜ್ಯಸಭಾ ಸದಸ್ಯ ಸತೀಶ್ಚಂದ್ರ ಮಿಶ್ರಾ ಹೇಳಿದ್ದಾರೆ. “ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಂಸತ್ ಅಧಿವೇಶನದಲ್ಲಿ ಕೆಲವೊಂದು ಮಸೂದೆಗಳ ಬಗ್ಗೆ ಸರಕಾರದ ಪರವಾಗಿ ಬೆಂಬಲ ನೀಡಿದ್ದರ ಬಗ್ಗೆ ಸಮಜಾಯಿಶಿ ನೀಡಿದ ಸತೀಶ್ಚಂದ್ರ “ದೇಶದ ಮತ್ತು ಜನರ ಹಿತಾಸಕ್ತಿಗಳನ್ನು ಆಮೂಲಾಗ್ರವಾಗಿ ಅಧ್ಯಯನ ನಡೆಸಿದ ಬಳಿಕ ಸಂಸತ್‌ನಲ್ಲಿ ಮಸೂದೆಗಳಿಗೆ ಬೆಂಬಲ ನೀಡಿದ್ದೇವೆ’ ಎಂದು ಎಚ್ಚರಿಕೆಯ ಉತ್ತರ ನೀಡಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉ.ಪ್ರ.ಸಿಎಂ ಯೋಗಿ ಆದಿತ್ಯನಾಥ್ ಅವರ ವಿರುದ್ಧ ನೇರವಾಗಿ ಹೋರಾಟ ಮಾಡಲಿದೆಯೇ ಎಂಬ ಪ್ರಶ್ನೆಗೆ ಅವರು ನೇರ ಉತ್ತರ ನೀಡಲಿಲ್ಲ.
ಗೈರಾಗಲಿದ್ದಾರೆ ನಿತೀಶ್:
2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ತೃತೀಯ ರಂಗ ರಚನೆ ನಿಟ್ಟಿನಲ್ಲಿ ಜಿಂಧ್‌ನಲ್ಲಿ ಇಂಡಿಯನ್ ನ್ಯಾಶನಲ್ ಲೋಕದಳ (ಐಎನ್‌ಎಲ್‌ಡಿ) ನಾಯಕ ಓಂ ಪ್ರಕಾಶ್ ಚೌಟಾಲಾ ಸೆ.25ಕ್ಕೆ ಬೃಹತ್ ರ್ಯಾಲಿ ಆಯೋಜಿಸಿದ್ದಾರೆ. ಆ ಕಾರ್ಯ ಕ್ರಮದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಭಾಗವಹಿಸುತ್ತಿಲ್ಲ. ಬಿಹಾರದಲ್ಲಿ ಪ್ರವಾಹ ಮತ್ತು ಕೊರೊನಾ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ತಿಳಿಸಿದ್ದಾರೆ.
ನಮ್ಮದೂ ಇದೆ ಸ್ಪರ್ಧೆ: ಉತ್ತರ ಪ್ರದೇಶ, ಗೋವಾ ವಿಧಾನಸಭೆ ಚುನಾವಣೆಗಳಲ್ಲಿ ಶಿವಸೇನೆ ಕೂಡ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ ಎಂದು ಪಕ್ಷದ ನಾಯಕ ಸಂಜಯ ರಾವತ್ ಹೇಳಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ರೈತರು ನಮ್ಮ ಪಕ್ಷಕ್ಕೇ ಬೆಂಬಲ ಸೂಚಿಸಿದ್ದಾರೆ ಎಂದರು ರಾವತ್.
ಆಪ್‌ನ ಸಂಚಾಲಕರಾಗಿ ಕೇಜ್ರಿವಾಲ್ ಪುನರಾಯ್ಕೆ :
ಆಮ್ ಆದ್ಮಿ ಪಕ್ಷದ ಸಂಚಾಲಕರಾಗಿ ಸತತ ಮೂರನೇ ಬಾರಿಗೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಪುನ ರಾಯ್ಕೆಯಾಗಿದ್ದಾರೆ. ಹೊಸದಿಲ್ಲಿಯಲ್ಲಿ ರವಿವಾರ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪಕ್ಷದ ನಾಯಕರಾದ ಪಂಕಜ್ ಗುಪ್ತಾ ಅವರನ್ನು ಕಾರ್ಯದರ್ಶಿ ಮತ್ತು ಎನ್.ಡಿ. ಗುಪ್ತಾ ಅವರನ್ನು ಖಜಾಂಚಿಯನ್ನಾಗಿ ನೇಮಿಸಲಾಗಿದೆ. ಇದರ ಜತೆಗೆ 34 ಮಂದಿ ಇರುವ ಕಾರ್ಯಕಾರಿ ಸಮಿತಿಯನ್ನೂ ರಚಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಆಪ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ವರ್ಚುವಲ್ ಮೂಲಕ ನಡೆಯಿತು. ಕಾರ್ಯಕಾರಿ ಸಮಿತಿಯಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ, ಮುಖಂಡ ಸತ್ಯೇಂದ್ರ ಜೈನ್ ಇದ್ದಾರೆ.