ಲಕ್ನೋ : ನಾನಾ ರೀತಿಯ ಆನ್‌ಲೈನ್ ವಂಚನೆಗೆ ಈಗ ಹೊಸಬಗೆಯ ವಂಚನೆಯೊಂದು ಸೇರ್ಪಡೆಯಾಗಿದೆ. ಈ ಹೊಸಬಗೆಯ ಆನ್‌ಲೈನ್ ವಂಚನೆಯಲ್ಲಿ ಏಳು ಲಕ್ಷ ಅಮಾಯಕ ಜನರಿಗೆ 3,700 ಕೋಟಿ ರೂ. ಪಂಗನಾಮ ಹಾಕಲಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಈ ಆನ್‌ಲೈನ್ ವಂಚನೆಯ ಖದೀಮರು ತಮ್ಮ ಆಕ್ರಮ ಗಳಿಕೆಯನ್ನು ಕೂಡಿ ಹಾಕಿದ್ದ ಬ್ಯಾಂಕ್ ಖಾತೆಯೊಂದನ್ನು ಸೀಸ್ ಮಾಡಲಾಗಿದ್ದು ಅದರಲ್ಲಿನ 100 ಕೋಟಿ ರೂ.ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಆನ್‌ಲೈನ್ ವಂಚಕರು ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 63ರಲ್ಲಿ ಎಬ್ಲೇಸ್ ಇನ್‌ಫೋ ಸೊಲ್ಯುಶನ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಒಂದು ಕ್ಲಿಕ್‌ಗೆ ಐದು ರೂ. ಗಳಿಸುವ ಆಮಿಷ ಒಡ್ಡಿ ಸುಮಾರು 7 ಲಕ್ಷ ಮಂದಿಗೆ 3,700 ಕೋಟಿ ರೂ. ವಂಚಿಸಿದ್ದರು.
ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಆರೋಪಿಗಳನ್ನು ಆನುಭವ್ ಮಿತ್ತಲ್, ಶ್ರೀಧರ್ ಪ್ರಸಾದ ಮತ್ತು ಮಹೇಶ್ ದಯಾಳ್ ಎಂದು ಗುರುತಿಸಲಾಗಿದೆ.
ಈ ವಂಚಕರು 2015ರ ಆಗಸ್ಟ್ ತಿಂಗಳಲ್ಲೇ ಟ್ರೇಡ್ ಡಾಟ್ ಬಿಜ್ ಎಂಬ ಪೋರ್ಟಲ್ ಒಂದನ್ನು ಆರಂಭಿಸಿ ಅಮಾಯಕರನ್ನು ವಂಚಿಸುವ ಕೈಚಳಕವನ್ನು ಆರಂಭಿಸಿದ್ದರು. ಕನಿಷ್ಠ 5,750 ರೂ.ಗಳಿಂದ 57,500 ರೂ.ಗಳ ವರೆಗೆ ಹಣ ತೆತ್ತು ಸದಸ್ಯತ್ವ ಪಡೆದು ಚೈನ್ ವಹಿವಾಟಿನಲ್ಲಿ ತೊಡಗುವಂತೆ ಜನರನ್ನು ಈ ಅಮಾಯಕರು ವಂಚಿಸುತ್ತಿದ್ದರು.
ಈ ಅಮಾಯಕರು ಜನರಿಗೆ ಪಂಗನಾಮ ಹಾಕಿ ಕೋಟಿಗಟ್ಟಲೆ ಹಣವನ್ನು ಕೂಡಿ ಹಾಕಿರುವ ಎಲ್ಲ ಬ್ಯಾಂಕ್ ಖಾತೆಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ತನಿಖೆ ಮುಂದುವರಿದಿದೆ.