ಜೇವರ್ಗಿ: ಗ್ರಾಮಸ್ಥರ ಮನವಿ ಪತ್ರ ಹಾಗೂ ಅವರ ಅಹವಾಲುಗಳನ್ನು ಆಲಿಸಿ ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತಿ ತಿಂಗಳು ಮೂರನೇ ಶನಿವಾರ ತಾಲೂಕು ಮಟ್ಟದ ವಿವಿಧ ಇಲಾಖೆ, ತಾಲೂಕು ಆಡಳಿತ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಹಶೀಲ್ದಾರ್ ವಿನಯಕುಮಾರ ಪಾಟೀಲ ಹೇಳಿದರು.
ತಾಲೂಕಿನ ಸೊನ್ನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಆಯೋಜಿಸಿದ್ದ “ಅಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೊನ್ನ ವಿರಕ್ತಮಠದ ಪೀಠಾ ಧಿಪತಿ ಡಾ| ಶಿವಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ’ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ.
ಸೊನ್ನ ಗ್ರಾಮಸ್ಥರು ಮನೆ ಬಾಗಿಲಿಗೆ ಬಂದಿರುವ ಅಧಿಕಾರಿಗಳ ಮೂಲಕ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಸೊನ್ನ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಸಾರ್ವಜನಿಕ ಶೌಚಾಲಯ, ಒಳಚರಂಡಿ, ಸಿಸಿ ರಸ್ತೆ, ಅಂಗನವಾಡಿ ಕೇಂದ್ರಗಳ ದುರಸ್ತಿ ಹಾಗೂ ಖಬರಸ್ಥಾನಕ್ಕೆ ಸರ್ಕಾರಿ ಗೈರಾಣು ಜಮೀನು ಮಂಜೂರಾತಿ ಸೇರಿದಂತೆ ಅನೇಕ ಬೇಡಿಕೆಗಳ ಮನವಿ ಪತ್ರವನ್ನು ಸೊನ್ನ ಗ್ರಾಮಸ್ಥರು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಿದರು.
ಸೊನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪ್ಪ ಗುಬ್ಟಾಡ, ಉಪಾಧ್ಯಕ್ಷೆ ಸವಿತಾ ಸಿದ್ಧಣ್ಣ ಕಲ್ಲೂರ, ಡಾ| ಸಿದ್ಧು ಪಾಟೀಲ, ಅಶೋಕ ನಾಯಕ, ಸಂಗಣ್ಣಗೌಡ ಪಾಟೀಲ, ಸುಷ್ಮಾ ಪಾಟೀಲ, ಅಬಕಾರಿ ಇಲಾಖೆ ಇನ್ಸಪೆಕ್ಟರ್ ವನೀತಾ ಸಿತಾಳೆ, ಜೇವರ್ಗಿ ಪಿಎಸ್‌ಐ ಸಂಗಮೇಶ ಅಂಗಡಿ, ಶಿಕ್ಷಣ ಇಲಾಖೆಯ ರಾಜಶೇಖರ, ಆಹಾರ ಇಲಾಖೆ ಶಿರಸ್ತೇದಾರ ಡಿ.ಬಿ. ಪಾಟೀಲ, ಚಂದೂಲಾಲ್ ರಾಠೊಡ, ಸೊನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವಿರೇಶ ಮಾಕಾ, ಡಾ| ರೇಣುಕಾದೇವಿ, ಸೊನ್ನ ಪಿಡಿಒ ಬಿ.ಆರ್.ಪಾಟೀಲ, ಗ್ರಾಮಸ್ಥ ರಾದ ರಾಮಚಂದ್ರ ಧರೇನ್, ವಿಜಯಕುಮಾರ ಬಿರಾದಾರ, ಸಿದ್ಧು ಆಂದೋಲಾ ಹಾಗೂ ಸೊನ್ನ ಗ್ರಾಮಸ್ಥರು ಪಾಲ್ಗೊಂಡಿದ್ದರು. ಸೊನ್ನ ಗ್ರಾ.ಪಂ. ಕಾರ್ಯದರ್ಶಿ ಉಮ್ಮನಗೌಡ ಹಿರೇಗೌಡ ಸ್ವಾಗತಿಸಿದರು. ಮಲ್ಲಿಕಾರ್ಜುನ ಬಿರಾದಾರ ನಿರೂಪಿಸಿ ದರು. ವೈ.ಜಿ.ಮಾಲಿಪಾಟೀಲ ಪ್ರಾಸ್ತಾವಿಕ ವಾಗಿ ಮಾತನಾಡಿದರು.