Advertisement

ಖರ್ಚಾಗದ ಅನುದಾನ ನೆರೆ ಪರಿಹಾರಕ್ಕೆ ಬಳಕೆ: ಬಿಎಸ್‌ವೈ

11:05 PM Sep 24, 2019 | Team Udayavani |

ಚಿತ್ರದುರ್ಗ: ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆ ಮಾಡಿ ಖರ್ಚಾಗದೇ ಉಳಿದಿರುವ ಅನುದಾನವನ್ನು ನೆರೆ ಸಂತ್ರಸ್ತರ ಪರಿಹಾರಕ್ಕೆ ಬಳಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಸಿರಿಗೆರೆ ತರಳಬಾಳು ಬೃಹನ್ಮಠದಲ್ಲಿ ಮಂಗಳವಾರ ನಡೆದ ಲಿಂಗೈಕ್ಯ ಜಗದ್ಗುರು ಶ್ರೀ ಶಿವಕುಮಾರ ಸ್ವಾಮೀಜಿಯವರ 27ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ನೆರೆ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡುವ ಸಲುವಾಗಿ ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸ ಲಾಗುವುದು ಎಂದರು. ಆದರೆ ಯಾವೆಲ್ಲ ಯೋಜನೆಗಳಿಗೆ ಕೊಕ್‌ ನೀಡಲಾಗುತ್ತದೆ ಎಂಬುದನ್ನು ಮಾತ್ರ ಬಹಿರಂಗಪಡಿಸಲಿಲ್ಲ. ನೆರೆ ಸಂತ್ರಸ್ತರಿಗಾಗಿ ಈಗಾಗಲೇ ರಾಜ್ಯ ಸರ್ಕಾರ 2500 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದಿಂದ ನಾಲ್ಕೈದು ದಿನದಲ್ಲಿ ಪರಿಹಾರ ಬರಲಿದೆ. ಮನೆ ನಿರ್ಮಾಣಕ್ಕಾಗಿ ಇದೇ ಮೊದಲ ಬಾರಿ ಐದು ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದು, ಮೊದಲ ಕಂತು ಒಂದು ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ಅಗ್ನಿಪರೀಕ್ಷೆ: ಮುಖ್ಯಮಂತ್ರಿ ಆದಾಗಿನಿಂದಲೂ ಅಗ್ನಿಪರೀಕ್ಷೆ ಎದುರಿಸುತ್ತಿರುವೆ. ಒಂದೆಡೆ ವಿಪರೀತ ಮಳೆ, ಮತ್ತೂಂದೆಡೆ ಬರ ಇದೆ. ಲಕ್ಷಾಂತರ ಮನೆಗಳನ್ನು ಕಟ್ಟಿಸಬೇಕಿದೆ. ರಸ್ತೆ, ಸೇತುವೆ ನಿರ್ಮಾಣವಾಗಬೇಕಿದೆ ಎಂದು ಯಡಿಯೂರಪ್ಪ ಹೇಳಿದರು. ಹಿಂದಿನ ಸರ್ಕಾರಗಳು ಜಾರಿ ಮಾಡಿರುವ ಸಾಲ ಮನ್ನಾ ಯೋಜನೆಯ ಲಾಭವನ್ನು ಹಂತ ಹಂತವಾಗಿ ಎಲ್ಲಾ ರೈತರಿಗೂ ತಲುಪಿಸಲಾಗುವುದು. ಸದ್ಯಕ್ಕೆ ನಮ್ಮ ಸರ್ಕಾರ ಅತಿವೃಷ್ಟಿ ಹಾನಿ ಸರಿಪಡಿಸಲು ಹಣ ಹೊಂದಿಸುತ್ತಿದ್ದು, ಮುಂದಿನ ಬಜೆಟ್‌ನಲ್ಲಿ ರಾಜ್ಯದ ಸಮಗ್ರ ನೀರಾವರಿಗೆ ಆದ್ಯತೆ ನೀಡಲಾಗುವುದು ಎಂದರು.

“ಸಮಾಜ ಒಡೆಯಲು ಹೋಗಿ ಕೈ ಸುಟ್ಟುಕೊಂಡ್ರು’
ಚಿತ್ರದುರ್ಗ: “ವೀರಶೈವ ಸಮಾಜವನ್ನು ಒಡೆಯಲು ಮುಂದಾದವರು ಕೈ ಸುಟ್ಟುಕೊಂಡಿದ್ದಾರೆ’ ಎಂದು ಮಾಜಿ ಸಚಿವ, ಶಾಸಕ ಡಾ|ಶಾಮನೂರು ಶಿವಶಂಕರಪ್ಪ ಟೀಕಿಸಿದ್ದಾರೆ. ಸಿರಿಗೆರೆ ತರಳಬಾಳು ಮಠದಲ್ಲಿ ಮಂಗಳವಾರ ನಡೆದ ಲಿಂಗೈಕ್ಯ ಜಗದ್ಗುರು ಶ್ರೀ ಶಿವಕುಮಾರ ಸ್ವಾಮೀಜಿಯವರ 27ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಅವರು ಮಾತನಾಡಿದರು. ವೀರಶೈವ ಮಹಾಸಭಾ ಅಧ್ಯಕ್ಷರಾಗುವ ಪ್ರಸ್ತಾಪ ಬಂದಾಗ ಮೊದಲು ನಿರಾಕರಿಸಿದ್ದೆ.

ಅನಂತರ ಈ ಬಗ್ಗೆ ಸಿರಿಗೆರೆ ಗುರುಗಳ ಜತೆ ಚರ್ಚಿಸಿದಾಗ ಜವಾಬ್ದಾರಿ ತೆಗೆದುಕೊಳ್ಳಲು ಸೂಚನೆ ನೀಡಿದ್ದರು. ವೀರಶೈವ ಮಹಾಸಭಾದ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಜಗಳ ಪ್ರಾರಂಭವಾಯ್ತು. ಸಮಾಜವನ್ನು ಒಡೆಯುವ ಕೆಲಸ ಮಾಡಿದರು. ಈ ಕೆಲಸಕ್ಕೆ ಕೈ ಹಾಕಿದವರು ಕೈ ಸುಟ್ಟುಕೊಂಡಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಕುಟುಕಿದರು.

Advertisement

ವೀರಶೈವರು ಎಲ್ಲ ಒಳಪಂಗಡಗಳನ್ನು ಮರೆತು ಎಲ್ಲರೂ ಒಂದೇ ಎಂಬ ಭಾವನೆ ಹೊಂದಬೇಕು. ಈ ಹಿಂದೆ ಜನಗಣತಿಯಲ್ಲಿ ವೀರಶೈವರ ಜನಸಂಖ್ಯೆ ಎರಡು ಕೋಟಿ ಇತ್ತು. ಇತ್ತೀಚೆಗೆ ಜನಗಣತಿ ಮಾಡಿಸಿದಾಗ 80 ಲಕ್ಷಕ್ಕೆ ಬಂದಿದ್ದೇವೆ. ಎಲ್ಲರೂ ವೀರಶೈವರು ಎಂದು ಬರೆಸುವ ಬದಲು ಒಳಪಂಗಡಗಳ ಹೆಸರು ಬರೆಸಿದ ಕಾರಣಕ್ಕೆ ಹೀಗಾಗಿದೆ. ಮುಂದೆ ಗಣತಿ ನಡೆದಾಗ ಎಲ್ಲರೂ ವೀರಶೈವ ಎಂದೇ ನಮೂದಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next