ಮೈಸೂರು: ದುಶ್ಚಟ ಹಾಗೂ ಮಾದಕ ವಸ್ತುಗಳಿಂದ ಜನರು ದೂರ ಇರುವಂತೆ ಮಾಡಿ, ನಿಷ್ಕಲ್ಮಶ ಭಾವನೆಯಿಂದ ಕುಟುಂಬ ಹಾಗೂ ತನ್ನ ಪರಿಸರದಲ್ಲಿ ಸಮಾಜಮುಖೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಾತ್ರ ಗಾಂಧೀಜಿ ಕನಸಿನಂತೆ ರಾಮರಾಜ್ಯ ರೂಪಿಸಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರ ರೈ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ಜಿಲ್ಲಾ ಕಚೇರಿಯಲ್ಲಿ ನಡೆದ ಅಖೀಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆ ಉದ್ಘಾಟಿಸಿ ಮಾತನಾಡಿದರು.
ಪ್ರೇರಕ ಶಕ್ತಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಅಖೀಲ ಕರ್ನಾಟಕ ಜನ ಜಾಗೃತಿ ವೇದಿಕೆಯಿಂದ ಮೈಸೂರು ಜಿಲ್ಲೆಯಲ್ಲಿ 31ಮದ್ಯವರ್ಜನ ಶಿಬಿರಗಳನ್ನು ನಡೆಸಿ 3463 ಮದ್ಯವ್ಯಸನಿಗಳನ್ನು ಪಾನ ಮುಕ್ತರನ್ನಾಗಿಸಿದೆ. ಕುಟುಂಬ ಹಾಗೂ ಸಮುದಾಯದಲ್ಲಿ ನೆಮ್ಮದಿ ಜೀವನ ನಡೆಸಿಕೊಂಡು ಕುಟುಂಬಗಳ ಬಲವರ್ಧನೆಗೆ ಪ್ರೇರಕ ಶಕ್ತಿಯಾಗಿದ್ದಾರೆಂದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಮಾತನಾಡಿ, ಯುವ ಪೀಳಿಗೆ ದುಶ್ಚಟ ಹಾಗೂ ಮಾದಕ ವ್ಯಸನಕ್ಕೆ ಒಳಗಾಗುತ್ತಿದ್ದು ಇವರಲ್ಲಿ ಜಾಗೃತಿಯನ್ನು ಮೂಡಿಸಬೇಕಿದೆ. ಶಾಲಾ-ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಮಾಡುವ ಮೂಲಕ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ಜಿಲ್ಲಾ ಜನ ಜಾಗೃತಿ ವೇದಿಕೆ ಸಜ್ಜಾಗಬೇಕೆಂದರು.
ವಿವಿಧ ಯೋಜನೆ: ಯೋಜನೆ ಜಿಲ್ಲಾ ನಿರ್ದೇಶಕ ವಿಜಯ್‌ಕುಮಾರ್ ನಾಗನಾಳ ಮಾತನಾಡಿ, 2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 6 ಮದ್ಯವರ್ಜನ ಶಿಬಿರಗಳು, 100 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳು, ನವಜೀವನ ಸಮಿತಿಗಳ ಬಲವರ್ಧನೆ, ನವಜೀವನ ಸಮಿತಿ ಸದಸ್ಯರಿಗೆ ಸ್ವ-ಉದ್ಯೋಗ ಮಾಡಲು ಯೋಜನೆಯಿಂದ ಶೇ.10ರಷ್ಟು ಒಬ್ಬ ಸದಸ್ಯರಿಗೆ 10 ಸಾವಿರ ರೂ. ವರೆಗೆ ಅನುದಾನ, ನವಜೀವನ ಸಮಿತಿ ಸದಸ್ಯರಿಗೆ ಸ್ವ ಸಹಾಯ ಸಂಘ ರಚಿಸಲು ಪ್ರೋತ್ಸಾಹ ನೀಡುವುದು.
ನವ ಜೀವನ ಸಮಿತಿಯ ಪೋಷಕರ ಸಭೆ ಹಾಗೂ ನವ ಜೀವನ ಸದಸ್ಯರಿಗೆ ಉಚಿತ ಸ್ವ-ಉದ್ಯೋಗ ತರಬೇತಿ ಒದಗಿಸಲು ಜಿಲ್ಲಾ ಜನಜಾಗೃತಿ ವೇದಿಕೆ ಮುಂದಾಗಿದೆ. ಈ ಕಾರ್ಯಕ್ರಮವನ್ನು ಪ್ರಸ್ತುತ ವರ್ಷದಲ್ಲಿ ಉತ್ತಮ ರೀತಿಯಲ್ಲಿ ಸಮುದಾಯಕ್ಕೆ ಒದಗಿಸಿಕೊಡುವ ಬಗ್ಗೆ ಜನಜಾಗೃತಿ ವೇದಿಕೆ ಸಮಿತಿ ಸದಸ್ಯರು ಪ್ರಯತ್ನಿಸಬೇಕೆಂದರು.
ಗೌರವ ಸಲಹೆಗಾರರಾದ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಸಮಿತಿ ಸದಸ್ಯರಾದ ಕಿರಗಸೂರು ಶಂಕರ್, ವರದರಾಜು, ಮೂರ್ತಿ, ಕನ್ನಡ ಪ್ರಮೋದ್, ಶಕುಂತಲಾ, ಆರ್.ಗೋಪಾಲ್, ನಾಗರಾಜು, ಹೊನ್ನನಾಯಕ್, ಪ್ರಸನ್ನಕುಮಾರ್, ರಾಮೇಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಆನಂದ್.ಕೆ, ಸಂಜೀವನಾಯ್ಕ, ಯಶೋಧಶೆಟ್ಟಿ, ಗಾಯತ್ರಿ, ಆನಂದ್‌ಗೌಡ, ಶಶಿಧರ್, ಚಂದ್ರಶೇಖರ್ ಯು.ಎನ್., ಭಾಸ್ಕರ್ ಉಪಸ್ಥಿತರಿದ್ದರು.