ಬೆಳಗಾವಿ: ಮುಂದಿನ ತಿಂಗಳು ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ವಿಧಾನಸಭೆ ಮತ್ತು ವಿಧಾನ ಪರಿಷತ್ ಸಭಾಂಗಣ, ಬ್ಯಾಕ್ವೆಂಟ್ ಹಾಲ್, ಸೆಂಟ್ರಲ್ ಹಾಲ್ ಸೇರಿದಂತೆ ವಿವಿಧ ಕೊಠಡಿಗಳನ್ನು ಉಭಯ ನಾಯಕರು ಪರಿಶೀಲಿಸಿದರು.
ಸುವರ್ಣ ಸೌಧದಲ್ಲಿ ಮುಂಭಾಗದಲ್ಲಿ ಪರಿಶೀಲನೆ ನಡೆಸಿದ ಸಭಾಧ್ಯಕ್ಷ ಯು ಟಿ ಖಾದರ್ ಅವರು ಸ್ವಚ್ಛತೆ ಕಾಪಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಲೋಕೋಪಯೋಗಿ ಇಲಾಖೆಯಿಂದ ಇದರ ನಿರ್ವಹಣೆ ಆಗುತ್ತಿದೆ. ಇದರ ನಿರ್ವಹಣೆಗೆ ಸರಕಾರ ಸಾಕಷ್ಟು ವೆಚ್ಚ ಮಾಡುತ್ತಿದೆ. ಆದರೂ ಸಹ ತೃಪ್ತಿಕರ ನಿರ್ವಹಣೆ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ ನೀಡಿದರು. ನಂತರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.