ಹನೂರು: ಷಷ್ಠಿ ಹಬ್ಬದ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ಭಾನುವಾರ ತಡರಾತ್ರಿ ಜರುಗಿದವು.
ಮಲೆ ಮಹದೇಶ್ವರ ಬೆಟ್ಟದಲ್ಲಿಷಷ್ಠಿಯ ಹಬ್ಬದ ಹಿನ್ನೆಲೆ ಉತ್ಸವಮೂರ್ತಿಯನ್ನು ಏಳು ತಲೆಯ ಸರ್ಪವಾಹನದಲ್ಲಿ ಇಟ್ಟು ಬೇಡಗಂಪಣ ಅರ್ಚಕರಿಂದದೀವಟಿಗೆ ಸೇವೆ ನೆರವೇರಿಸಿ ಕರಿಮಣಿ, ನಿಚ್ಚೋಲೆ, ಮಾಸ್ತಿಬಳೆ, ಅರಿಶಿಣ, ಕುಂಕುಮ, ಅಕ್ಷತೆ ಮತ್ತು ಶ್ರೀಗಂಧ ಗಳಿಂದ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಲಾಯಿತು.
ಬಳಿಕ ದೊಡ್ಡ ಸತ್ತಿಗೆ, ಚಿಕ್ಕ ಸತ್ತಿಗೆ, ಬೆಳ್ಳಿ ಸತ್ತಿಗೆ, ನಂದಿಕಂಬ, ಜಾಗಟೆ, ನಗಾರಿ ಮತ್ತು ಮಂಗಳ ವಾದ್ಯಗಳ ಸಮೇತ ದೇವಾಲಯದೊಳ ಆವರಣವನ್ನು 3ಸುತ್ತು ಮೆರವಣಿಗೆ ನಡೆಸಲಾಯಿತು. ಬಳಿಕ ಮಹಾಮಂಗಳಾರತಿ ನೆರವೇರಿಸಲಾಯಿತು.
ಷಷ್ಠಿ ಹಬ್ಬದ ಹಿನ್ನೆಲೆ ಮಲೆ ಮಾದಪ್ಪನಿಗೆ ಬೆಳಗಿನ ಜಾವದ ಅಭಿಷೇಕ ಪೂಜಾಕೈಂಕರ್ಯಗಳು ಜರುಗಿದವು. ಶ್ರೀ ಕ್ಷೇತ್ರದ ನಂದನವನದ ಪಕ್ಕದಲ್ಲಿರುವ ನಾಗರಕಲ್ಲಿನ ಸಮೀಪ ತೆರಳಿ ಸರ್ಪ ಆರಾಧನೆ, ಜಲಾಭಿಷೇಕ, ತೈಲಾಭಿಷೇಕ, ಹಾಲು ಮತ್ತು ಪಂಚಾಮೃತ ಅಭಿಷೇಕ ನಡೆಸಲಾಯಿತು. ವಿವಿಧ ಬಗೆಯ ಪುಷ್ಪ ಗಳಿಂದ ಅಲಂಕರಿಸಿ ಧೂಪ-ದೀಪ ಸೇವೆಗಳನ್ನು ನೆರವೇರಿಸಿ ಮಹಾ ಮಂಗಳಾರತಿ ಬೆಳಗಲಾಯಿತು. ಬಳಿಕ ಮಾದಪ್ಪನ ಭಕ್ತರು ಮತ್ತು ಸ್ಥಳೀಯರು ತನಿ ಎರೆದರು.
ಮೆರವಣಿಗೆಯಲ್ಲಿ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನಸ್ವಾಮಿಗಳು, ಆಗಮಿಕರಾದ ಕರವೀರಸ್ವಾಮಿ, ಪಾರುಪತ್ತೆದಾರರಾದ ಮಲ್ಲಿಕಾರ್ಜುನ, ಪುಟ್ಟಯ್ಯ, ಅರ್ಚಕರಾದಕಿರುಬಮಾದಯ್ಯ, ಶೇಷಪ್ಪ, ಕೆ.ವಿ.ಮುರುಗ,ವೀರಪ್ಪಸ್ವಾಮಿ,ಬಸವರಾಜು, ಪುಟ್ಟತಂಬಡಿ, ಪ್ರಾಧಿಕಾರದ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿದ್ದರು.