ಬೀದರ: ವರ್ಷದೊಳಗೆ ಕರ್ನಾಟಕದಲ್ಲಿ ಉಸ್ಮಾನಾಬಾದ್ ಜನತಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಬ್ಯಾಂಕ್‌ನ ನಾಲ್ಕು ಹೊಸ ಶಾಖೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ವಸಂತರಾವ್ ನಾಗದೆ ಹೇಳಿದರು.
ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಬ್ಯಾಂಕ್ ಸದಸ್ಯರು ಹಾಗೂ ಗ್ರಾಹಕರ ವತಿಯಿಂದ ನಗರದ ಕೃಷ್ಣ ರಿಜೆನ್ಸಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭಾಲ್ಕಿ, ಕಲಬುರಗಿ, ಬೆಳಗಾವಿ ಹಾಗೂ ಧಾರವಾಡದಲ್ಲಿ ಹೊಸ ಶಾಖೆಗಳನ್ನು ತೆರೆಯುವ ಯೋಜನೆ ಇದೆ. ಈಗಾಗಲೇ ಬ್ಯಾಂಕ್ ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿ ಒಟ್ಟು30 ಶಾಖೆಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಬೀದರ ಹಾಗೂ ಬಸವಕಲ್ಯಾಣದಲ್ಲಿ ಶಾಖೆಗಳು ಇವೆ ಎಂದರು.
ಬ್ಯಾಂಕ್ ಒಟ್ಟು 1,754 ಕೋಟಿ ರೂ. ಠೇವಣಿ ಹೊಂದಿದೆ. 1,005 ಕೋಟಿ ರೂ. ಸಾಲ ವಿತರಿಸಿದೆ. ಕಳೆದ ವರ್ಷ 40.17 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಪ್ರತಿಷ್ಠಿತ ಬ್ಯಾಂಕ್ ವಿವಿಧ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ. ಜನರ ಆರ್ಥಿಕ ಮಟ್ಟ ಸುಧಾರಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಬ್ಯಾಂಕ್ ಹಿರಿಯ ಸದಸ್ಯ ಮಾಧವರಾವ್ ಬಿರಾದಾರ ಮಾತನಾಡಿ, ಬೀದರನವರೇ ಆದ ವಸಂತರಾವ್ ನಾಗದೆಅವರುಉಸ್ಮಾನಾಬಾದ್‌ಜನತಾ ಬ್ಯಾಂಕ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಬ್ಯಾಂಕ್ ಇಂದು ಸಹಕಾರ ಕ್ಷೇತ್ರದಲ್ಲಿ ಛಾಪು ಮೂಡಿಸುವಲ್ಲಿ ಅವರ ಕೊಡುಗೆ ಬಹುದೊಡ್ಡದಾಗಿದೆ ಎಂದರು.
ಬ್ಯಾಂಕ್ ಸದಸ್ಯರಾದ ಬಾಬುರಾವ್ ಕಾರಬಾರಿ, ವೆಂಕಟೇಶ ಮಾಯಿಂದೆ, ಬಿ.ಎಸ್. ಕುದರೆ, ಉದಯಭಾನು ಹಲವಾಯಿ, ರಾಜೇಂದ್ರ ಶರ್ಮಾ, ಮಹಮ್ಮದ್ ಸಲೀಮೊದ್ದಿನ್, ಮಹಮ್ಮದ್ ಫಯಾಜ್, ಮಹಮ್ಮದ್ ಸಮಿಯೊದ್ದಿನ್ ಬಂದಿಲಿ, ಶಾಖೆ ವ್ಯವಸ್ಥಾಪಕ ಪಿ.ಆರ್. ಮಾನೆ, ದಿಗಂಬರ ಮಾನಕರಿ, ಸೈಯದ್ ಗಿಯಾಸೊದ್ದಿನ್, ರಂಜೀತ್ ಪಾಟೀಲ ಉಪಸ್ಥಿತರಿದ್ದರು.