ರಾಂಚಿ: ಪ್ರವಾಸಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಆಸೀಸ್ ಆರಂಭಿಕ ಅಟಗಾರರ ಅದ್ಭುತ ಆಟದ ಸಹಾಯದಿಂದ ನಿಗದಿತ 50 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 313 ರನ್ ಗಳಿಸಿದೆ.
ಇಲ್ಲಿನ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ನಾಯಕ ಆರೋನ್ ಫಿಂಚ್ ಮತ್ತು ಉಸ್ಮಾನ್ ಖ್ವಾಜಾ ಭಾರತೀಯ ಬೌಲರ್ ಗಳ ಬೆವರಿಳಿಸಿದರು. ಮೊದಲ ವಿಕೆಟ್ ಗೆ 193 ರನ್ ಗಳ ಅತ್ಯುತ್ತಮ ಜೊತೆಯಾಟ ನಡೆಸಿದ ಈ ಜೋಡಿ ತಂಡಕ್ಕೆ ಸುಭದ್ರ ಅಡಿಪಾಯ ಹಾಕಿ ಕೊಟ್ಟರು.
ನಾಯಕ ಫಿಂಚ್ 93 ರನ್ ಗಳಿಸಿ ಔಟಾಗಿ ಶತಕ ವಂಚಿತರಾದರು. ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಭಾರತಕ್ಕೆ ಮೊದಲ ಯಶಸ್ಸು ತಂದು ಕೊಟ್ಟರು. ಮತ್ತೊಬ್ಬ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ 104 ರನ್ ಗಳಿಸಿ ಏಕದಿನ ಕ್ರಿಕೆಟ್ ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿ ಸಂಭ್ರಮಿಸಿದರು.
ನಂತರ ಸ್ಪೋಟಕ ಬ್ಯಾಟಿಂಗ್ ನಡೆಸಿದ ಗ್ಲೆನ್ ಮ್ಯಾಕ್ಸ್ ವೆಲ್ 47 ರನ್ ಗಳಿಸಿ ರನೌಟಾದರೆ, ಕೊನೆಯಲ್ಲಿ ಮಾರ್ಕಸ್ ಸ್ಟೊಯಿನಸ್ 31 ರನ್ ಗಳ ಅಮೂಲ್ಯ ಇನ್ನಿಂಗ್ಸ್ ಕಟ್ಟಿದರು.
ಒಂದು ಹಂತದಲ್ಲಿ ಆಸೀಸ್ 350 ರನ್ ಬಾರಿಸುವ ಲಕ್ಷಣ ಗೊಚರಿಸಿತ್ತು. ಆ ವೇಳೆ ಒಂದೇ ಓವರ್ ನಲ್ಲಿ ಶಾನ್ ಮಾರ್ಶ್ ಮತ್ತು ಪೀಟರ್ ಹ್ಯಾಂಡ್ಸ್ ಕಾಂಬ್ ವಿಕೆಟ್ ಪಡೆದ ಕುಲದೀಪ್ ಯಾದವ್ ಸ್ವಲ್ಪ ಮಟ್ಟಿನ ನಿಯಂತ್ರಣಕ್ಕೆ ಕಾರಣರಾದರು.