ಸಿಡ್ನಿ: ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದೆದುರಿನ ವರ್ಷಾರಂಭದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಮತ್ತು ನಂಬಿಗಸ್ಥ ಸ್ಟೀವನ್ ಸ್ಮಿತ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಅವರಿಬ್ಬರ ಶತಕ ವೈಭವದಿಂದ ಆಸ್ಟ್ರೇಲಿಯ ತಂಡವು ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 475 ರನ್ನುಗಳ ಬೃಹತ್ ಮೊತ್ತ ಪೇರಿಸಿದೆ.
ಖ್ವಾಜಾ ಅವರ ಅಜೇಯ 195 ರನ್ ಮತ್ತು ಸ್ಮಿತ್ ಅವರ ಶತಕ ದಿನದ ಆಕರ್ಷಣೆಯಾಗಿತ್ತು. ದಕ್ಷಿಣ ಆಫ್ರಿಕಾ ದಾಳಿಯನ್ನು ದಿಟ್ಟ ವಾಗಿ ಎದುರಿಸಿದ ಅವರಿಬ್ಬರು ಮೂರನೇ ವಿಕೆಟಿಗೆ 209 ರನ್ನುಗಳ ಜತೆಯಾಟ ದಲ್ಲಿ ಪಾಲ್ಗೊಂಡು ತಂಡವನ್ನು ಆಧ ರಿಸಿದ್ದರು. ಸಿಡ್ನಿಯಲ್ಲಿ ಸತತ ಮೂರನೇ ಶತಕ ಸಿಡಿಸಿದ ಖ್ವಾಜಾ ಚೊಚ್ಚಲ ಬಾರಿ ದ್ವಿಶತಕ ದಾಖಲಿಸುವತ್ತ ದಾಪುಗಾಲು ಇಟ್ಟಿದ್ದಾರೆ.
ಎರಡು ವಿಕೆಟಿಗೆ 147 ರನ್ನುಗಳಿಂದ ದಿನದಾಟ ಆರಂಭಿಸಿದ್ದ ಆಸ್ಟ್ರೇಲಿಯ ತಂಡವು ದಿನಪೂರ್ತಿ ಆಡಿತು. ಮೊದಲ ದಿನ ಅಜೇಯರಾಗಿ ಉಳಿದಿದ್ದ ಖ್ವಾಜಾ ಮತ್ತು ಸ್ಮಿತ್ ಅವರು ಶತಕ ಸಿಡಿಸಿ ತಂಡವನ್ನು ಆಧರಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ 30ನೇ ಶತಕ ಪೂರ್ತಿಗೊಳಿಸಿದ ಬಳಿಕ ಸ್ಮಿತ್ ಔಟಾದರು. ಆಬಳಿಕ ಖ್ವಾಜಾ ಅವರು ಟ್ರ್ಯಾವಿಸ್ ಹೆಡ್ ಜತೆಗೂಡಿ ನಾಲ್ಕನೇ ವಿಕೆಟಿಗೆ 112 ರನ್ನುಗಳ ಜತೆಯಾಟ ನಡೆಸಿದರು. ದಿನದಾಟದ ಅಂತ್ಯಕ್ಕೆ ಖ್ವಾಜಾ 195 ರನ್ ಗಳಿಸಿ ಆಡುತ್ತಿದ್ದಾರೆ. ಇದು ಖ್ವಾಜಾ ಅವರ 13ನೇ ಶತಕವಾಗಿದೆ.
ಕಳೆದ ವರ್ಷ ಇದೇ ಸಮಯ ಹೆಡ್ ಅವರು ಗಾಯಗೊಂಡ ಹಿನ್ನೆಲೆಯಲ್ಲಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿ ಇಂಗ್ಲೆಂಡ್ ವಿರುದ್ಧ ಆಡಿದ್ದ ಖ್ವಾಜಾ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ (171 ಮತ್ತು 101 ಅಜೇಯ) ಶತಕ ಸಿಡಿಸಿದ್ದರು. ಆಬಳಿಕ ವರ್ಷ ದುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಉತ್ತಮವಾಗಿ ಆಡುವ ಮೂಲಕ ಟೆಸ್ಟ್‌ನಲ್ಲಿ 4 ಸಾವಿರ ರನ್ ಪೂರ್ತಿ ಗೊಳಿಸಿದ ಸಾಧನೆ ಮಾಡಿದ್ದಾರೆ.