ಬೆಂಗಳೂರು: ಇನ್ಮುಂದೆ ವಾಹನ ಚಲಾಯಿಸುವಾಗ ಫೋನ್ ಮಾತ್ರವಲ್ಲ, ಬ್ಲೂಟೂತ್, ಹೆಡ್‌ಫೋನ್ ಬಳಸುವುದು ಕೂಡ ಸಂಚಾರ ನಿಯಮ ಉಲ್ಲಂಘನೆ ಅಡಿಯಲ್ಲಿ ಬರಲಿದ್ದು, ಅಂತಹ ವಾಹನ ಸವಾರರಿಗೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಈ ಸಂಬಂಧ ಶುಕ್ರವಾರ ನಗರ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಜಂಟಿ ಪೊಲೀಸ್ ಆಯುಕ್ತ ಡಾ ಬಿ.ಆರ್.ರವಿಕಾಂತೇಗೌಡ ಅವರ ನೇತೃತ್ವದಲ್ಲಿ ಎಲ್ಲ ಸಂಚಾರ ವಿಭಾಗದ ಡಿಸಿಪಿ, ಎಸಿಪಿಗಳ ಸಭೆ ನಡೆದಿದೆ. ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಮೋಟಾರ್ ವಾಹನ ಕಾಯ್ದೆ-೨೦೧೯ ರಲ್ಲಿ ಈ ಬಗ್ಗೆ ಉಲ್ಲೇಖವಿದ್ದು, ಚಾಲನೆಗೆ ತೊಡಕುಂಟು ಮಾಡುವ ಅಥವಾ ಗಮನ ಬೇರೆಡೆ ಸೆಳೆಯುವ ಉಪಕರಣಗಳನ್ನು ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಆದರೆ, ನಗರದಲ್ಲಿ ಕೇವಲ ಮೊಬೈಲ್ ಫೋನ್‌ನಲ್ಲಿ ಮಾತಾಡಿಕೊಂಡು ವಾಹನ ಚಾಲನೆ ಮಾಡುವವರಿಗೆ ಮಾತ್ರ ತಡೆದು ದಂಡ ವಿಧಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ನಗರದಲ್ಲಿ ಕಿವಿಗೆ ಬ್ಲೂಟೂತ್, ಹೆಡ್‌ಫೋನ್ ಹಾಕಿಕೊಂಡು ಚಾಲನೆಯಲ್ಲಿ ಗಮನ ಇರದೇ ಬೇಕಾಬಿಟ್ಟಿ ವಾಹನ ಚಾಲನೆ ಮಾಡುವುದು ಕಂಡು ಬಂದಿದ್ದು, ಕೆಲವೆಡೆ ಈ ಕಾರಣಕ್ಕೆ ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಜತೆಗೆ, ಹೆಡ್‌ಫೋನ್ ಅಥವಾ ಇಯರ್‌ಫೋನ್ಗೆ,, ಬ್ಲೂಟೂತ್ ಧರಿಸಿ ವಾಹನ ಚಾಲನೆ ಮಾಡಿದರೆ ಅಂತಹವರನ್ನು ಸಂಚಾರಿ ನಿಯಮ ಉಲ್ಲಂಘನೆ ಅಡಿ ದಂಡ ವಿಧಿಸಲಾಗುತ್ತದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ಈಗಾಗಲೇ ಬಹಳಷ್ಟು ಮಂದಿ ವಾಹನ ಚಾಲಕರು ಹೆಲ್ಮೆಟ್ ಒಳಗಡೆ ಮೊಬೈಲ್ ಫೋನ್ ಇಟ್ಟುಕೊಂಡು ಮಾತನಾಡುತ್ತಾ ವಾಹನ ಚಾಲನೆ ಮಾಡುತ್ತಾರೆ. ಅಂತಹವರಿಗೂ ಕೂಡ ದಂಡ ತಪ್ಪಿದ್ದಲ್ಲ. ಅಲ್ಲದೆ, ಫೋನ್ ಜೇಬಿನಲ್ಲಿಟ್ಟುಕೊಂಡು ಬ್ಲೂಟೂತ್ ಅಥವಾ ಇಯರ್‌ಫೋನ್ ಡಿವೈಸ್ ಮೂಲಕ ಮಾತನಾಡುವುದು ಕೂಡ ನಿಯಮ ಉಲ್ಲಂಘನೆ. ಕಾನೂನಿನ ಪ್ರಕಾರ ಯಾವುದೇ ರೀತಿಯ ಉಪಕರಣಗಳನ್ನು ಬಳಸಿ ವಾಹನ ಚಾಲನೆ ಮಾಡಬಾರದ ಎಂದು ಸಂಚಾರ ಪೊಲೀಸರು ಹೇಳಿದರು.
ಸಿಗ್ನಲ್‌ನಲ್ಲಿ ನಿಂತು ಮಾತನಾಡುವಂತಿಲ್ಲ: ವಾಹನಗಳು ಚಲಿಸುವಾಗ ಟ್ರಾಫಿಕ್ ಸಿಗ್ನಲ್‌ನಲ್ಲಿ ರೆಡ್ ಸಿಗ್ನಲ್ ಬಿದ್ದಾಗ ಕೂಡ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಅದರಿಂದ ಅಕ್ಕ-ಪಕ್ಕದ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಇನ್ನು ಕಾರು ಚಾಲಕರು ಆಧುನಿಕ ಸಾಧನಗಳನ್ನು ಬಳಸಿ ಸಿಗ್ನಲ್‌ನಲ್ಲಿ ಲೌಡ್ ಸ್ವೀಕರ್ ಹಾಕಿ ಮಾತನಾಡುತ್ತಾರೆ. ಅದು ಕೂಡ ನಿಯಮ ಉಲ್ಲಂಘನೆಯಾಗುತ್ತದೆ. ಅಲ್ಲದೆ, ಬ್ಲೂಟೂತ್‌ನಿಂದ ಕಾರಿನಲ್ಲಿ ಮ್ಯೂಸಿಕ್ ಕೇಳುವುದು, ಕೈ ಅಥವಾ ವಾಹನದ ಮುಂಭಾಗ ಮೊಬೈಲ್ ಇಟ್ಟುಕೊಂಡು ಗೂಗಲ್ ಮ್ಯಾಪ್ ನೋಡುವುದು ನಿಯಮ ಉಲ್ಲಂಘನೆಯಾಗುತ್ತದೆ. ಹೀಗಾಗಿ ಎಲ್ಲ ರೀತಿಯ ವಾಹನಗಳಲ್ಲಿ ಚಾಲನೆ ಗಮನ ಸೆಳೆಯುವ ಉಪಕರಣ ಬಳಸುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಸಂಚಾರ ಪೊಲೀಸರು ಹೇಳಿದರು.
ಇದನ್ನೂ ಓದಿ:-ಯೋಗಿ ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ಕಂಗನಾ ರಾಯಭಾರಿ
ಮೊಬೈಲ್ ಮ್ಯಾಪ್ ಬಳಸಲು ವಿನಾಯಿತಿ?
ಇತ್ತೀಚೆಗೆ ಫುಡ್ ಡೆಲಿವರಿ ಕಂಪನಿಗಳು, ಕ್ಯಾಬ್‌ಗಳು ಸೇರಿ ಬಹಳಷ್ಟು ಉದ್ಯಮಗಳು ಮೊಬೈಲ್‌ನಲ್ಲಿ ಗೂಗಲ್ ಮ್ಯಾಪ್ ಬಳಸಿ ಸಾರ್ವಜನಿಕರ ಜತೆ ವ್ಯವಹಾರ ನಡೆಸುತ್ತಿವೆ. ಫುಡ್ ಡೆಲಿವರಿ ಬಾಯ್‌ಗಳು, ಓಲಾ, ಊಬರ್ ಸಂಸ್ಥೆಗಳು ಹೆಚ್ಚು ವಾಹನದ ಮುಂಭಾಗವೇ ಮೊಬೈಲ್‌ನಲ್ಲಿ ಗೂಗಲ್ ಮ್ಯಾಪ್ ಬಳಸಿ ವಾಹನ ಚಾಲನೆ ಮಾಡುತ್ತಿದ್ದಾರೆ. ಒಂದು ವೇಳೆ ಇದಕ್ಕೂ ಕಟ್ಟುನಿಟ್ಟಿನ ಕ್ರಮಕೈಗೊಂಡರೆ ಸಾಕಷ್ಟು ತೊಡಕಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಮ್ಯಾಪ್ ಬಳಸಲು ವಿನಾಯಿತಿ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಹೊಸ ಮೋಟಾರ್ ವಾಹನ ಕಾಯ್ದೆ- 2019ರಲ್ಲಿ ವಾಹನ ಚಾಲನೆ ಗಮನ ಬೇರೆಡೆ ಸೆಳೆಯುವ ಡಿವೈಸ್‌ಗಳನ್ನು ಬಳಸುವುದು ಸಂಚಾರ ನಿಯಮ ಉಲ್ಲಂಘನೆ ಅಡಿಯಲ್ಲಿ ಬರುತ್ತದೆ. ಆ ಪ್ರಕಾರ ದಂಡ ವಿಧಿಸಲು ಮುಂದಾಗಿದ್ದೇವೆ
.
ಡಾ.ಬಿ.ಆರ್.ರವಿಕಾಂತೇಗೌಡ,
ಜಂಟಿ ಪೊಲೀಸ್ ಆಯುಕ್ತರು
ಸಂಚಾರ ವಿಭಾಗ