ಯಳಂದೂರು: ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾನಾ ಹೆಸರುಗಳಲ್ಲಿ ಹಲವು ಯೋಜನೆಗಳನ್ನು ಘೋಷಿಸಿವೆ. ಆದರೂ ಪಟ್ಟಣ ಪ್ರದೇಶದಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ಕಟ್ಟಿದ ಶೌಚಗೃಹಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ.
ಬಯಲು ಬಹಿರ್ದೆಸೆ ಪ್ರವೃತ್ತಿ ಮುಂದುವರಿದಿದ್ದು, ಶೌಚಾಲಯ ಕಟ್ಟಿಕೊಳ್ಳಲು ಸ್ಥಳವಿಲ್ಲದ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಯಾರ ಬಳಿಯಲ್ಲೂ ಹೇಳದೆ ರಾತ್ರಿಯ ವೇಳೆ ಬಯಲಲ್ಲೇ ಬಹಿರ್ದೆಸೆಗೆ ಹೋಗಬೇಕಾದ ದುಸ್ಥಿತಿ ಇದೆ.!
ಪಪಂ ವ್ಯಾಪ್ತಿಯಲ್ಲಿ 2007-08 ಹಾಗೂ 2008-09ನೇ ಸಾಲಿನ ಎಸ್‌ಎಫ್ಸಿ ಮುಕ್ತ ನಿಧಿಯಿಂದ ತಾಲೂಕು ತಹಶೀಲ್ದಾರ್ ಕಚೇರಿ ಮುಂಭಾಗ, ಕುಂಬಾರ ಗುಂಡಿ, ಗೌತಮ್ ಬಡಾವಣೆ, ಎಲೇಕೇರಿ ಬೀದಿ, ಕೆ.ಇ.ಬಿ ಕಚೇರಿ ಮುಂಭಾಗ, ವೈ.ಕೆ.ಮೋಳೆ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿ ನಿರ್ಮಿಸಿದರು. ಪ್ರತಿ ಶೌಚಗೃಹಕ್ಕೆ 9.62 ಲಕ್ಷ ರೂ. ವೆಚ್ಚದಲ್ಲಿ ಸೇರಿ ಒಟ್ಟು 6 ಸಾಮೂಹಿಕ ಶೌಚಗೃಹಗಳನ್ನು ನಿರ್ಮಿಸಲಾಗಿತ್ತು. ಆದರೆ ಇವುಗಳನ್ನು ಸಮಪರ್ಕವಾಗಿ ಪಪಂ ಅಧಿಕಾರಿಗಳು ನಿರ್ವಹಣೆ ಮಾಡದ ಕಾರಣ ಕಟ್ಟಡದಲ್ಲಿ ಗಿಡಗಂಟಿಗಳು, ಅಸ್ವಚ್ಛತೆ, ಸಮಪರ್ಕವಾದ ನೀರಿನ ಸೌಲಭ್ಯ, ಬಾಗಿಲು ಇಲ್ಲದೇ ಇರುವುದು, ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳ ವಂಚಿತವಾಗಿದೆ.
ಪಪಂ ನಿರ್ವಹಣೆ ಮಾಡುತ್ತಿಲ್ಲ: ತಾಲೂಕು ಕೇಂದ್ರವಾದ ಯಳಂದೂರು ಪಟ್ಟಣದಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸುಮಾರು 12 ವರ್ಷದ ಹಿಂದೆ ಪಪಂ ಆಡಳಿತದ ವತಿ ಯಿಂದ ಸಾರ್ವಜನಿಕರಿಗೆ ಸಾಮೂಹಿಕ ಶೌಚಗೃಹ ನಿರ್ಮಿಸಿ. ರಸ್ತೆ ಬದಿಗಳಲ್ಲಿ ಕುಳಿತು ಶೌಚ ಮಾಡುವುದನ್ನು ತಪ್ಪಿಸುವ ಉದ್ದೇಶವನ್ನು ಹೊಂದುವುದಲ್ಲದೇ ಮಹಿಳೆಯರು ಶೌಚಕ್ಕಾಗಿ ರಾತ್ರಿ ಕತ್ತಲೆ ಕಾಯುವುದನ್ನು ತಪ್ಪಿಸುವುದರ ಜತೆ ಸ್ವಚ್ಛ ನೈರ್ಮಲ್ಯ ಕಾಪಾಡಲು ಪಪಂ ವ್ಯಾಪ್ತಿಯಲ್ಲಿನ 11 ವಾರ್ಡ್‌ಗಳ ನಿವಾಸಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲಕ್ಕಾಗಿ ನಿರ್ಮಿಸಿದರು. ಅದಕ್ಕೆ ಪೂರಕವಾಗುವಂತೆ ಕೊಳವೆ ಬಾವಿ ಕೊರೆಯಿಸಿ ಪ್ರತಿ ಶೌಚಗೃಹಕ್ಕೂ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತ ಅವಕಾಶ ಕಲ್ಪಿಸಿತ್ತು. ಆದರೆ ಸರಿಯಾದ ನಿರ್ವಹಣೆ ಮಾಡದೇ ಹಾಗೇ ನಿರುಪಯುಕ್ತವಾಗಿ ಬಿದ್ದಿದ್ದು ಕಟ್ಟಿಸಿರುವ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದ್ದು ಇಷ್ಟಾದರೂ ಪಪಂ ಇತ್ತ ಗಮನಹರಿಸಿ ಸೂಕ್ತ ವ್ಯವಸ್ಥೆ ಮಾಡದೇ ಸುಮ್ಮನೇ ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ.
ಶೌಚಗೃಹಕ್ಕೆ ಹೋದರೆ ರೋಗ ಖಾತ್ರಿ: ಪಟ್ಟಣದ ಕುಂಬಾರಗುಂಡಿ, ಗೌತಮ್ ಬಡವಾಣೆ, ತಹಶೀಲ್ದಾರ್ ಕಚೇರಿ, ವೈ.ಕೆ. ಮೋಳೆ ರಸ್ತೆ ಬದಿಯಲ್ಲಿರುವ ಸಾಮೂಹಿಕ ಶೌಚಗೃಹಗಳಿಗೆ ಸಮಪರ್ಕವಾದ ಸೌಲಭ್ಯ ಗಳಿಲ್ಲ. ಇಲ್ಲಿನ ಬಾಗಿಲು ಮುರಿದು ಹೋಗಿದೆ, ನೀರಿನ ವ್ಯವಸ್ಥೆ ಸರಿ ಇಲ್ಲ, ಸ್ವಚ್ಛತೆ ಇಲ್ಲ, ಮಹಿಳೆಯರು, ಪುರುಷರು, ಶೌಚಗೃಹ ಕಟ್ಟಡ ಹೋದರೆ ತಮಗೆ ರೋಗ ಭೀತಿ ಕಾಡುವುದೆಂಬ ಆತಂಕವೂ ಬಯಲು ಬಹಿರ್ದೆಸೆಗೆ ಹೋಗಲು ಪ್ರೇರೇಪಿಸುವಂತಿದೆ.
ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಪ್ರತಿಯೊಂದು ಕುಟುಂಬವು ಶೌಚಾಲಯ ಹೊಂದಿ, ಆರೋಗ್ಯಯುತವಾದ ಜೀವನವನ್ನು ನಡೆಸಬೇಕೆಂದು ಸರ್ಕಾರ ಹೇಳುತ್ತದೆ. ಆದರೆ ಪಟ್ಟಣದಲ್ಲಿ ನಿರ್ಮಿಸಿರುವ ಸಾಮೂಹಿಕ ಶೌಚಗೃಹಗಳು ಇದಕ್ಕೆ ತದ್ವಿರುದ್ಧವಾಗಿದ್ದು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ವ್ಯರ್ಥ ವಾಗಿರುವುದು ವಿಪರ್ಯಾಸವಾಗಿದೆ.
-ಮಹದೇವಮ್ಮ, ಪಟ್ಟಣ ನಿವಾಸಿ
ಪಟ್ಟಣದಲ್ಲಿರುವ ಸಾಮೂಹಿಕ ಶೌಚಗೃಹಗಳು ಉಪಯೋಗಕ್ಕೆ ಬಾರದೆ ದುಸ್ಥಿತಿ ಇರುವ ಬಗ್ಗೆ ಗಮನ ಹರಿಸಿ ಸ್ವಚ್ಛತೆ, ನೀರಿನ ಸೌಲಭ್ಯ ಹಾಗೂ ಬಾಗಿಲುಗಳನ್ನು ಹಾಕಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಪಟ್ಟಣ ನಿವಾಸಿಗಳ ಜತೆಗೆ ಸಾಮೂಹಿಕ ಶೌಚಗೃಹ ಉಪಯೋಗಿ ಸುವ ನಿಟ್ಟಿನಲ್ಲಿ ಬಡಾವಣೆಗಳಲ್ಲಿ ಅರಿವು ಮೂಡಿಸಲಾಗುವುದು.
-ಮಲ್ಲೇಶ್, ಮುಖ್ಯಾಧಿಕಾರಿ, ಪಪಂ, ಯಳಂದೂರ
– ಫೈರೋಜ್ ಖಾನ್