ಹೊಸದಿಲ್ಲಿ: ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್ ನ ಮಾಲಕರು ತಮ್ಮ ಹೆಸರನ್ನು ಹೋಟೆಲ್ ಹೊರಗಡೆ ನಮೂದಿಸಬೇಕು ಎಂಬ ಉತ್ತರಪ್ರದೇಶ ಸರ್ಕಾರದ ವಿವಾದಿತ ಆದೇಶದ ವಿರುದ್ಧ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಸ್.ವಿ. ಎನ್ ಭಟ್ಟಿ(Sarasa Venkatanarayana Bhatti) ಅವರು ಕೇರಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮುಸ್ಲಿಂ ವ್ಯಕ್ತಿರೊಬ್ಬರು ನಡೆಸುತ್ತಿದ್ದ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಂಡಿದ್ದ ಸಸ್ಯಾಹಾರಿ ರೆಸ್ಟೋರೆಂಟ್‌ಗೆ ಆಗಾಗ್ಗೆ ಊಟಕ್ಕೆ ಹೋಗುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ಉತ್ತರಪ್ರದೇಶ ಸರ್ಕಾರದ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ದಾಖಲಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಜಸ್ಟೀಸ್ ಹೃಷಿಕೇಶ್ ರಾಯ್ ಮತ್ತು ಜಸ್ಟೀಸ್ ಎಸ್ ವಿಎನ್ ಭಟ್ಟಿ ಅವರು ಉತ್ತರಪ್ರದೇಶ, ಉತ್ತರಾಖಂಡ್ ಮತ್ತು ಮಧ್ಯಪ್ರದೇಶ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜು.26ಕ್ಕೆ ಮುಂದೂಡಿದ್ದಾರೆ.
ತೀರ್ಪು ನೀಡುವ ವೇಳೆ ನ್ಯಾಯಮೂರ್ತಿ ಭಟ್ಟಿ ತಮ್ಮ ಅನುಭವ ಹಂಚಿಕೊಂಡರು. “ನಾನು ಕೇರಳದಲ್ಲಿದ್ದಾಗ ನನ್ನ ಅನುಭವ. ನಾನು ಈ ನ್ಯಾಯಾಲಯದ ಹಾಲಿ ನ್ಯಾಯಾಧೀಶನಾಗಿರುವುದರಿಂದ ಬಹಿರಂಗವಾಗಿ ಹೇಳುವಂತಿಲ್ಲ. ನಗರದ ಹೆಸರನ್ನು ಬಹಿರಂಗಪಡಿಸದೆ, ಹಿಂದೂಗಳು ನಡೆಸುತ್ತಿರುವ ಸಸ್ಯಾಹಾರಿ ಹೋಟೆಲ್ ಇತ್ತು. ಮುಸಲ್ಮಾನರೊಬ್ಬರು ನಡೆಸುತ್ತಿರುವ ಇನ್ನೊಂದು ಸಸ್ಯಾಹಾರಿ ಹೋಟೆಲ್ ಇತ್ತು. ಆ ರಾಜ್ಯದ ನ್ಯಾಯಾಧೀಶನಾಗಿ, ನಾನು ಸಸ್ಯಾಹಾರಕ್ಕಾಗಿ ಮುಸ್ಲಿಂ ವ್ಯಕ್ತಿ ನಡೆಸುತ್ತಿದ್ದ ಹೋಟೆಲ್‌ಗೆ ಹೋಗುತ್ತಿದ್ದೆ. ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯ ವಿಷಯಕ್ಕೆ ಬಂದಾಗ, ಅವರು ಎಲ್ಲವನ್ನೂ ಪ್ರದರ್ಶಿಸುತ್ತಿದ್ದರು. ಅವರು ದುಬೈನಿಂದ ಹಿಂತಿರುಗಿದ್ದರು. ಸುರಕ್ಷತೆ, ಶುಚಿತ್ವ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಅವರು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಿದ್ದರು. ಹಾಗಾಗಿ ಆ ಹೋಟೆಲ್‌ಗೆ ಹೋಗುವುದು ನನ್ನ ಆಯ್ಕೆಯಾಗಿತ್ತು ಎಂದು ನ್ಯಾಯಮೂರ್ತಿ ಭಟ್ಟಿ ಹೇಳಿದರು.