ಮಹಾನಗರ: ಮಂಗಳೂರು ಸಿಟಿ ಬಸ್‌ಗಳು ಸ್ಮಾರ್ಟ್ ಆಗುತ್ತಿದ್ದು, ನಗರದ ಮೂರು ಮಾರ್ಗಗಳಲ್ಲಿ ಚಲೋ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಿದೆ. ನಗರದ ಸ್ಟೇಟ್‌ಬ್ಯಾಂಕ್-ತಲಪಾಡಿ ಮತ್ತು ಸ್ಟೇಟ್ ಬ್ಯಾಂಕ್-ಉಳ್ಳಾಲ ಮಾರ್ಗಗಳಲ್ಲಿ ಚಲೋ ಕಾರ್ಡ್ ಮೂಲಕ ಡಿಜಿಟಲ್ ಬಸ್ ಪಾಸ್ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಸದ್ಯ ಸುಮಾರು 200ಕ್ಕೂ ಹೆಚ್ಚಿನ ಪ್ರಯಾಣಿಕರು ಈ ಸೇವೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಮೊದಲನೇ ಹಂತದಲ್ಲಿ ಬಸ್ ರೂಟ್ ನಂಬರ್ 42, 43 ಮತ್ತು ರೂಟ್ ನಂಬರ್ 44ರಲ್ಲಿ ಡಿಜಿಟಲ್ ಬಸ್ ಪಾಸ್ ವ್ಯವಸ್ಥೆ ಆರಂಭಿಸಲಾಗಿದೆ. ಮಂಗಳೂರು ಪ್ರಮುಖ ವಾಣಿಜ್ಯ ಕೇಂದ್ರವಾದ ಉಳ್ಳಾಲ, ತಲಪಾಡಿ ಭಾಗದ ಹೆಚ್ಚಿನ ಮಂದಿ ವಿವಿಧ ಕಾರಣಕ್ಕೆ ಮಂಗಳೂರು ನಗರವನ್ನೇ ಆಶ್ರಯಿಸಿದ್ದಾರೆ. ಪರಿಣಾಮ, ಪ್ರತೀ ದಿನ ಸುಮಾರು 30,000ಕ್ಕೂ ಹೆಚ್ಚಿನ ಮಂದಿ ಈ ರೂಟ್‌ಗಳನ್ನು ಆಶ್ರಯಿಸಿದ್ದಾರೆ. ಇದೇ ಕಾರಣಕ್ಕೆ ಈ ರೂಟ್‌ನಲ್ಲಿ ಬಸ್ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ಸೇವೆಯಲ್ಲಿ ಶೇ.20ರಷ್ಟು ರಿಯಾಯಿತಿಯನ್ನು ಪ್ರಯಾಣಿಕರು ಪಡೆಯಬಹುದಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ‘ನಮ್ಮ ಮೆಟ್ರೋ’ ದಲ್ಲಿ ಇರುವಂತೆ ಕಾರ್ಡ್ ಟ್ಯಾಪಿಂಗ್ ವ್ಯವಸ್ಥೆಯನ್ನು ನಗರದಲ್ಲಿ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಪೈಲೆಟ್ ಯೋಜನೆಗಾಗಿ ಮಂಗಳೂರು ನಗರವನ್ನು ಆಯ್ಕೆ ಮಾಡಲಾಗಿದೆ. ಮೊದಲನೇ ಹಂತದಲ್ಲಿ ಸ್ಟೇಟ್‌ಬ್ಯಾಂಕ್‌ನಿಂದ ಮಂಗಳಾದೇವಿ ಕಡೆಗೆ ತೆರಳುವ 27 ನಂಬರ್‌ನ ಐದು ಬಸ್‌ಗಳಲ್ಲಿ ಈ ವ್ಯವಸ್ಥೆ ಪರಿಚಯಿಸಲಾಗಿದೆ.
ಶೇ.20ರಷ್ಟು ರಿಯಾಯಿತಿ
ಸ್ಮಾರ್ಟ್ ಬಸ್ ಪಾಸ್ ವ್ಯವಸ್ಥೆಯ ಮುಖೇನ ಪ್ರಯಾಣಿಕರಿಗೆ ಟಿಕೆಟ್ ದರದ ಮೇಲೆ ಶೇ.20ರಷ್ಟು ರಿಯಾಯಿತಿ ದೊರಕಲಿದೆ. ಟಿಕೆಟ್ ಟ್ಯಾಪಿಂಗ್ ಯಂತ್ರವನ್ನು ಬಸ್‌ನ ಮುಂಭಾಗದಲ್ಲಿ ಅಳವಡಿಸಲಾಗಿದ್ದು, ಪ್ರಯಾಣಿಕರು ಖರೀದಿಸಿದ ಚಲೋ ಕಾರ್ಡ್ ಟ್ಯಾಪ್ ಮಾಡುವ ಮುಖೇನ ಟಿಕೆಟ್ ಪಡೆಯ ಬಹುದು. ಆ ವೇಳೆ ಕಾರ್ಡ್‌ನ ಬ್ಯಾಲೆನ್ಸ್ ನಿಂದ ಹಣ ಕಡಿತವಾಗುತ್ತದೆ.