Advertisement

ಆರಕ್ಷಕ ಬದಲು “ಪೊಲೀಸ್‌’ಪದವನ್ನೇ ಬಳಸಿ

11:51 AM Apr 22, 2017 | |

ಬೆಂಗಳೂರು: “ಪೊಲೀಸ್‌’ ಮತ್ತು “ಆರಕ್ಷಕ’ ಎನ್ನುವ ಪದ ಪರ ಭಾಷೆಯಿಂದ ಬಂದಿರುವುದಾದರೂ “ಪೊಲೀಸ್‌’ ಎಂಬ ಪದ ಜನಮಾನಸದಲ್ಲಿ ಒಗ್ಗಿಕೊಂಡಿರುವುದರಿಂದ ಅದನ್ನೇ ಎಲ್ಲೆಡೆ ರೂಢಿಸಿಕೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ -ಪ್ರೊ ಎಸ್‌.ಜಿ. ಸಿದ್ದರಾಮಯ್ಯ ನಗರ ಪೊಲೀಸರಿಗೆ ಸಲಹೆ ನೀಡಿದ್ದಾರೆ.

Advertisement

ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳು ಕನ್ನಡದಲ್ಲೇ ವ್ಯವಹರಿಸಬೇಕು ಎಂಬ ಆದೇಶ ಪಾಲನೆಯ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ ಅವರ ನೇತೃತ್ವದ ತಂಡ ಶುಕ್ರವಾರ ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಪ್ರೊ ಎಸ್‌.ಜಿ.ಸಿದ್ದರಾಮಯ್ಯ, ಆರಕ್ಷಕ ಎಂಬ ಪದವೇ ಕನ್ನಡದಲ್ಲಿಲ್ಲ. ಇದೊಂದು ಸಂಸ್ಕೃತ ಭಾಷೆಯ ಪದ. ಪೊಲೀಸ್‌ ಕೂಡ ಇಂಗ್ಲಿಷ್‌ ಪದ. ಪೊಲೀಸ್‌ಗೆ ಪರ್ಯಾಯವಾಗಿ ಕನ್ನಡದಲ್ಲಿ ಯಾವುದೇ ಪದವಿಲ್ಲ. ಆದರೆ, ಆರಕ್ಷಕ ಎಂಬ ಪದಕ್ಕಿಂತ ಪೊಲೀಸ್‌ ಎಂಬ ಪದ ಜನರಲ್ಲಿ ಹಾಸು ಹೊಕ್ಕಾಗಿದೆ. ಹಾಗಾಗಿ ಜನಸ್ನೇಹಿ “ಪರಿಭಾಷೆ’ಯಾದ ಪೊಲೀಸ್‌ ಎನ್ನುವುದನ್ನೇ ಎಲ್ಲೆಡೆ ಬಳಸಿಕೊಳ್ಳಲು ತಿಳಿಸಲಾಗಿದೆ ಎಂದರು. 

ಪೊಲೀಸ್‌ ಇಲಾಖೆಯಲ್ಲಿ “ಕನ್ನಡ ಘಟಕ’ ಮತ್ತು ಕನ್ನಡ ಬಾರದ ಅಧಿಕಾರಿಗಳಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ “ಪದ ವಿವರಣ’ ಕೋಶ ರಚಿಸಬೇಕಿದೆ. ಇದಕ್ಕೆ ಪ್ರಾಧಿಕಾರ ಕೂಡ ಸಹಕಾರ ನೀಡಲಿದೆ ಎಂದು ತಿಳಿಸಿದರು. ಐಟಿ ಕಂಪನಿಗಳಲ್ಲಿರುವ ಕನ್ನಡಿಗರು ಕನ್ನಡ ಮಾತನಾಡಿದರೆ, ದಂಡ ವಿಧಿಸುವುದು, ಸಂಸ್ಥೆಯಿಂದಲೇ ಹೊರಹಾಕುವ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಪ್ರಾಧಿಕಾರಕ್ಕೆ ದೂರುಗಳು ಬಂದಿವೆ.

ಒಂದು ವೇಳೆ ದೌರ್ಜನ್ಯಕ್ಕೊಳಗಾದ ಕನ್ನಡಿಗರು ಠಾಣೆಗೆ ಬಂದು ದೂರು ನೀಡಿದರೆ, ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅಲ್ಲದೇ ಪೊಲೀಸ್‌ ಇಲಾಖೆಯಲ್ಲಿ ಪಾಸ್‌ಪೋರ್ಟ್‌, ಆ್ಯಪ್‌ಗ್ಳು, ಪರಿಹಾರ ವೆಬ್‌ಸೈಟ್‌ ಹಾಗೂ ಪತ್ರಿಕಾ ಪ್ರಕಟಣೆಗಳು ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಕನ್ನಡದಲ್ಲೇ ವ್ಯವಹರಿಸಲು ಸೂಚಿಸಬೇಕು ಎಂದು ಪ್ರೊ ಎಸ್‌.ಜಿ.ಸಿದ್ದರಾಮಯ್ಯ ಸಲಹೆ ನೀಡಿದರು.

Advertisement

ಪೊಲೀಸ್‌ ಸಾಹಿತ್ಯ ಸಮಾವೇಶ: ಪೊಲೀಸ್‌ ಇಲಾಖೆಯಲ್ಲಿ 500ಕ್ಕೂ ಹೆಚ್ಚು ಮಂದಿ ಸಾಹಿತ್ಯಾಸಕ್ತರಿದ್ದಾರೆ ಎಂಬ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜತೆ ಚರ್ಚಿಸಿ, “ಪೊಲೀಸ್‌ ಸಾಹಿತ್ಯ ಸಮಾವೇಶ’ ಅಥವಾ “ಸಮಾಲೋಚನೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಪ್ರಾಧಿಕಾರವೇ ಭರಿಸುತ್ತದೆ ಎಂದು ಅವರು ತಿಳಿಸಿದರು.

ದಲಿತ ಕವಿ ಸಿದ್ದಲಿಂಗಯ್ಯ ಮಾತನಾಡಿ, ಎಲ್ಲ ಠಾಣೆಗಳಲ್ಲಿ ಶರಣರ ವಚನಗಳು, ಕುವೆಂಪು, ಬೇಂದ್ರೆ, ಮರುಳಸಿದ್ದಪ್ಪ ಸೇರಿದಂತೆ ಹಿರಿಯ ಸಾಹಿತಿಗಳ ನುಡಿಮುತ್ತುಗಳನ್ನು ಪ್ರಕಟಿಸಲು ಕ್ರಮ ಕೈಗೊಳ್ಳಬೇಕು ಎಂದರು. ಸಾಹಿತಿ ಪ್ರೊ. ಚಂದ್ರಶೇಖರ್‌ ಪಾಟೀಲ್‌ ಮಾತನಾಡಿ, ಪೊಲೀಸ್‌ ಇಲಾಖೆಯಲ್ಲಿ ನೂರಾರು ಮಂದಿ ಸಾಹಿತ್ಯಾಸಕ್ತರು ಇರುವುದರಿಂದ ಕನ್ನಡ ಅಥವಾ ಪೊಲೀಸ್‌ ಸಾಹಿತ್ಯ ಸಂಘ ತೆರೆದು ಸಾಹಿತ್ಯಕ್ಕೆ ಉತ್ತೇಜನ ಕೊಡಬೇಕೆಂದರು. ಈ ವೇಳೆ, ಪ್ರಾಧಿಕಾರದ ತಾಂತ್ರಿಕ ವಿಭಾಗದ ನರಸಿಂಹಮೂರ್ತಿ, ಪ್ರಾಧಿಕಾರದ ಕಾರ್ಯದರ್ಶಿ ಮುರಳೀಧರ್‌, ಮುಖ್ಯಮಂತ್ರಿ ಚಂದ್ರು ಸೇರಿ ಇತರರು ಇದ್ದರು.

“ನಾವೂ ಸಾಹಿತಿಗಳು’
ಹಿರಿಯ ಪೊಲೀಸ್‌ ಅಧಿಕಾರಿ ರಾಜಣ್ಣ ಮಾತನಾಡಿ, ಪೊಲೀಸ್‌ ಇಲಾಖೆಯಲ್ಲಿ 550ಕ್ಕೂ ಹೆಚ್ಚು ಸಾಹಿತಿಗಳು, ಕವಿಗಳಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ 5 ಕಡೆಗಳಲ್ಲಿ ಪೊಲೀಸ್‌ ಸಾಹಿತ್ಯ ಸಮಾವೇಶ ಆಯೋಜಿಸಿದ್ದೇನೆ. ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೇ, “ನಮ್ಮನ್ನು ಕೇವಲ ಬಂದೋಬಸ್ತ್ಗೆ ಮಾತ್ರವಲ್ಲ. ನಮ್ಮಲ್ಲಿರುವ ಸಾಹಿತ್ಯಾಸಕ್ತಿಯನ್ನು ತೋರಿಸಲು ವೇದಿಕೆ ಕಲ್ಪಿಸಿಕೊಡಿ’ ಎಂದು 3-4 ಬಾರಿ ಕನ್ನಡ ಸಾಹಿತ್ಯ ಪರಿಷತ್‌ಗೆ ಪತ್ರ ಬರೆದಿದ್ದೆ. ಆದರೆ, ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ. ಅವಕಾಶ ಕೊಟ್ಟರೆ ನಾವು ಕೂಡ ವೇದಿಕೆಗಳಲ್ಲಿ ಕವನಗಳು, ಕವಿಗೋಷ್ಠಿ ನಡೆಸುವ ಸಾಮರ್ಥಯ ಹೊಂದಿದ್ದೇವೆ ಎಂದರು.

ಕಟಾರಿಯಾಗೆ ಸೂಚನೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನಿಯೋಗ ಸಾರ್ವಜನಿಕ ಉದ್ದಿಮೆಗಳ ಇಲಾಖೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲಾಖೆಯ ಪ್ರಭಾರ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಕಚೇರಿಯಲ್ಲಿ ಇರಲಿಲ್ಲ. ಇದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ, ಇಲಾಖೆಯ ಪ್ರಭಾರ ಕಾರ್ಯದರ್ಶಿ ಕೂಡಲೇ ತಮ್ಮನ್ನು ಭೇಟಿ ಮಾಡದಿದ್ದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಈ ಕುರಿತು ಪತ್ರ ಬರೆಯುವುದಾಗಿ ತಿಳಿಸುವಂತೆ ಕಟಾರಿಯಾ ಅವರ ಆಪ್ತಕಾರ್ಯದರ್ಶಿಗೆ ಸೂಚನೆ ನೀಡಿದರು.

ಈಗಾಗಲೇ ಶೇ.80ರಷ್ಟು ಕನ್ನಡದಲ್ಲೇ ಇಲಾಖೆ ವ್ಯವಹರಿಸುತ್ತಿದೆ. ಇನ್ನು ಆ್ಯಪ್‌ ಮತ್ತು ವೆಬ್‌ಸೈಟ್‌ಗಳಲ್ಲಿ ಕನ್ನಡ ಭಾಷೆ ಅಳವಡಿಸುವ ಬಗ್ಗೆ ಸೂಚಿಸಿದ್ದೇನೆ. ಪೊಲೀಸ್‌ ಸಾಹಿತ್ಯ ಸಮಾವೇಶ ಮಾಡುತ್ತೇವೆಂದು ಪ್ರಾಧಿಕಾರದ ಸದಸ್ಯರು ಹೇಳಿದರು. ಅದಕ್ಕೆ ನಾನು ಅನುಮತಿ ಕೊಡುತ್ತೇನೆ.
-ಪ್ರವೀಣ್‌ ಸೂದ್‌, ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next