ಮೈಸೂರು: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ಮಾಡಬೇಕೆ-ಬೇಡವೇ ಎಂಬುದನ್ನು ವೈಜ್ಞಾನಿಕ, ವೈಚಾರಿಕ, ಸಮಾನತೆ ದೃಷ್ಟಿಯಿಂದ ನೋಡದೆ ಸಾಂಪ್ರದಾಯಿಕ ನೆಲೆಯಲ್ಲಿ ನೋಡುತ್ತಿರುವುದು ನಾಚಿಕೇಡಿನ ಸಂಗತಿ ಎಂದು ಪ್ರೊ.ಮೊರಬದ ಮಲ್ಲಿಕಾರ್ಜುನ ವಿಷಾದಿಸಿದರು.
ಸಂವಹನ ಪ್ರಕಾಶನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ನಗರ ಕಸಾಪ ಸಭಾಂಗಣದಲ್ಲಿ ಆಯೋಜಿಸಿದ್ದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಸಿ.ಚಾಮಶೆಟ್ಟಿ ಅವರ ಪ್ರವಾದಿ ಇಬ್ರಾಹಿಂ (ಜೀವನ ನಾಟಕ) ಮತ್ತು ಅಮೃತಾನ್ನ (ಕ್ರೀಡೆ) ಚಿತ್ರನ್ನ (ಇತರೆ) ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಹಿಳೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದೇವೆ. ನಮ್ಮ ಪ್ರತಿ ಚಟುವಟಿಕೆ ಹಿಂದೆ ರಾಜಕೀಯ ನಿಲುವಿದೆ. ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ. ಭಾರತೀಯರು ಸಂಸ್ಕೃತಿ, ಧರ್ಮ, ವೇದ-ಉಪನಿಷತ್ ಕುರಿತು ಅಭಿಮಾನದಿಂದ ಹೇಳಿಕೊಳ್ಳುತ್ತೇವೆ.
ಆದರೆ, ವರ್ತಮಾನದ ವಿವೇಚನೆಗೆ ಬಂದಾಗ ನಾವು ಬೇರೆ, ಅವನು ಬೇರೆ ಅಂತ ಯೋಚಿಸಿ ಗೆರೆ ಎಳೆದು ಬಿಡುತ್ತೇವೆ. ಗೆರೆ ದಾಟುವ ಅವಕಾಶ ಸಿಕ್ಕಾಗ ಮಾನವೀಯತೆ ಮರೆಯುತ್ತೇವೆ. ವರ್ತಮಾನದಲ್ಲಿ ಎಲ್ಲವನ್ನೂ ಮೀರಿ ನಿಲ್ಲುವ ಸಂದರ್ಭ ಒದಗಿ ಬಂದರೂ, ಯಾವುದೋ ಮೌಡ್ಯ-ಕಂದಾಚಾರ-ಸಂಸ್ಕೃತಿಗೆ ಸಿಲುಕುತ್ತೇವೆ ಎಂದು ಹೇಳಿದರು.
ಪ್ರವಾದಿ ಇಬ್ರಾಹಿಂ ಕೃತಿ ಕುರಿತು ಡಾ.ಎಚ್.ಎ.ಪಾರ್ಶ್ವನಾಥ್, ಅಮೃತಾನ್ನ ಚಿತ್ರನ್ನ ಕೃತಿ ಕುರಿತು ಲೇಖಕಿ ಕೆರೋಡಿ ಎಂ.ಲೋಲಾಕ್ಷಿ$ಮಾತನಾಡಿದರು. ಸಂವಹನ ಪ್ರಕಾಶಕ ಡಿ.ಎನ್.ಲೋಕಪ್ಪ, ನಿವೃತ್ತ ಪ್ರಾಂಶುಪಾಲ ಟಿ.ಎನ್.ನಾಗೇಗೌಡ, ಲೇಖಕ ಸಿ.ಚಾಮಶೆಟ್ಟಿ ಹಾಜರಿದ್ದರು.