ಬೀದರ: ರೈತರು ಆರ್ಥಿಕವಾಗಿ ಸದೃಢರಾಗಲು ಆಧುನಿಕ ತಂತ್ರಜ್ಞಾನ ಬಳಕೆ ಮಾಡುವಂತೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ತೋಟಗಾರಿಕೆ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಶ್ರೀಶೈಲ ದಿಡ್ಡಿಮನಿ ಹೇಳಿದರು.
ನಗರದ ತೋಟಗಾರಿಕೆ ಮಹಾವಿದ್ಯಾಲಯದ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬೀದರ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ತೋಟಗಾರಿಕೆ ಅಧಿಕಾರಿಗಳ 2018-19ನೇ ಸಾಲಿನ ಮೊದಲ ತ್ತೈಮಾಸಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳನ್ನು ರೈತರಿಗೆ ಸರಿಯಾಗಿ ತಲುಪಿಸಲು ಅಧಿಕಾರಿಗಳು ಪ್ರಯತ್ನಿಸಬೇಕು. ಪ್ರತಿ ಹನಿ ನೀರಿಗೆ ಹೆಚ್ಚು ಬೆಳೆ ಎನ್ನುವ ಸದಾಶಯದಂತೆ ಬೆಳೆಯ ಇಳುವರಿಯಲ್ಲಿ ಏರಿಕೆಯಾಗಿ ರೈತರು ಹೆಚ್ಚು ಆದಾಯ ಗಳಿಸಬೇಕು ಎಂದು ಹೇಳಿದರು.
ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ| ರವೀಂದ್ರ ಮುಲಗೆ ಮಾತನಾಡಿ, ರೈತರು ಸೂಕ್ತ ತಳಿ ಆಯ್ಕೆ ಮಾಡಿಕೊಳ್ಳಲು ಮಾರ್ಗದರ್ಶನ ನೀಡಬೇಕು. ತೋಟಗಾರಿಕೆ ಬೆಳೆಗಳನ್ನು ವಾತಾವರಣಕ್ಕೆ ತಕ್ಕಂತೆ ಬೆಳೆಯುವಂತೆ ಸಲಹೆ ನೀಡಬೇಕು. ತೋಟಗಾರಿಕೆಯಲ್ಲಿ ಯಾಂತ್ರೀಕರಣ ಹಾಗೂ ಜೈವಿಕ ಗೊಬ್ಬರಗಳ ಬಳಕೆಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಬೀದರ ಉಪನಿರ್ದೇಶಕ ಮಲ್ಲಿಕಾರ್ಜುನ ಬಾವುಗೆ ಮಾತನಾಡಿ, ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳ ವಸ್ತು ಸ್ಥಿತಿ, ಉತ್ಪಾದಕತೆ ಹಾಗೂ ಇಲಾಖೆಯಿಂದ ಕೈಗೊಂಡಿರುವ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಾನಂದ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಬಾಳೆ ಹಾಗೂ ನಿಂಬೆ ಬೆಳೆಗಳ ಆಧುನಿಕ ತಾಂತ್ರಿಕತೆಗಳ ಚರ್ಚಿ ನಡೆಸಿದರು.
ಡಾ| ಪ್ರವೀಣ ಜೊಳಗಿಕರ್, ಪ್ರವೀಣ ನಾಯಿಕೊಡಿ, ಡಾ| ಸತ್ಯನಾರಾಯಣ ಸಿ., ಅರುಣಕುಮಾರ ಕೆ.ಟಿ., ಡಾ| ಮಹ್ಮದ್
ಫಾರೂಕ್, ಡಾ| ಅಶೋಕ ಸೂರ್ಯವಂಶಿ, ಡಾ| ಧನಂಜಯ, ಡಾ| ಶ್ರೀನಿವಾಸ ಎನ್., ಡಾ| ತಿಪ್ಪಣ್ಣ, ಜಯಶ್ರೀ ಇದ್ದರು.