Advertisement

ಪುನರ್ವಸತಿಗೆ ಎಸ್‌ಸಿಪಿ, ಟಿಎಸ್‌ಪಿ ಹಣ ಬಳಸಿ

11:13 PM Sep 13, 2019 | Lakshmi GovindaRaju |

ಬೆಂಗಳೂರು: ಪ್ರವಾಹ ಸಂತ್ರಸ್ತರ ಪುನರ್ವಸತಿ ಕಲ್ಪಿಸಲು ಎಲ್ಲ ಇಲಾಖೆಗಳಲ್ಲಿ ವಿಶೇಷ ಘಟಕ ಯೋಜನೆಗೆ ಮೀಸಲಿಟ್ಟ ಹಣದಲ್ಲಿ ಶೇ. 50ರಷ್ಟು ಹಣವನ್ನು ವರ್ಗಾಯಿಸುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಎಸ್‌ಸಿಪಿ (ವಿಶೇಷ ಘಟಕ ಯೋಜನೆ) ಮತ್ತು ಟಿಎಸ್‌ಪಿ (ಪರಿಶಿಷ್ಟ ಪಂಗಡಕ್ಕಾಗಿನ ವಿಶೇಷ ಯೋಜನೆ) ಕಾರ್ಯಕ್ರಮಗಳ ಅನುಷ್ಠಾನ ಕುರಿತು ಶುಕ್ರವಾರ ನೋಡೆಲ್ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು. ರಾಜ್ಯದಲ್ಲಿ ಪ್ರವಾಹದಿಂದ 32 ಸಾವಿರ ಕೋಟಿ ರೂ.ನಷ್ಟವಾಗಿದೆ. ಸಾರ್ವಜನಿಕ ಆಸ್ತಿ, ರಸ್ತೆ, ಸೇತುವೆ, ರೈತರ ಬೆಳೆಗಳಿಗೆ ಹಾನಿಯಾಗಿದೆ. ತಗ್ಗು ಪ್ರದೇಶದಲ್ಲಿ ವಾಸಿಸುವ ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮನೆ ಕಳೆದುಕೊಂಡಿದ್ದಾರೆ.

ಸುಮಾರು 2.35 ಲಕ್ಷ ಮನೆಗಳು ಹಾನಿಗೊಳಗಾಗಿವೆ. ಸಂತ್ರಸ್ತರಿಗೆ ಆದ್ಯತೆಯ ಮೇರೆಗೆ ಪುನರ್ವಸತಿ ಕಲ್ಪಿಸಬೇಕಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಪುನರ್ವಸತಿ ಕಾಮಗಾರಿಯನ್ನು ಕೈಗೊಳ್ಳಬೇಕಿದೆ. ಸಂತ್ರಸ್ತರಿಗೆ ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಎಲ್ಲ ಇಲಾಖೆಗಳು ಎಸ್‌ಟಿಪಿ ಮತ್ತು ಟಿಎಸ್‌ಪಿ ಕಾರ್ಯಕ್ರಮಗಳ ಕ್ರಿಯಾ ಯೋಜನೆಯನ್ನು ಮಾರ್ಪಡಿಸಿಕೊಂಡು ಅನುಷ್ಠಾನಗೊಳಿಸ ಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಸಂತ್ರಸ್ತರಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳೂ ಎಸ್‌ಸಿಪಿ ಮತ್ತು ಟಿಎಸ್‌ಪಿ ಕಾರ್ಯಕ್ರಮಗಳನ್ನು ಮಾರ್ಪಡಿಸಿ, ಸೆಪ್ಟೆ 16ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಕ್ರಿಯಾಯೋಜನೆಯೊಂದಿಗೆ ಹಾಜರಾಗುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರಾಭಿವೃದ್ಧಿ ಇಲಾಖೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ ಅನುದಾನದಲ್ಲಿ ಶೇ.50ರಷ್ಟು ಅನುದಾನವನ್ನು ನೆರೆ ಪೀಡಿತ ಪ್ರದೇಶಗಳಲ್ಲಿ ಮನೆ ನಿರ್ಮಿಸಲು ಹಾಗೂ ಉಳಿದ ಅನುದಾನವನ್ನು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಳಕೆ ಮಾಡಬೇಕು. ಬೆಂಗಳೂರಿನ ಎಲಿವೇಟೆಡ್‌ ಕಾರಿಡಾರ್‌ ಮತ್ತು ಫೆರಿಪೆರಲ್‍ರಿಂಗ್‌ ರಸ್ತೆಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಬಳಸಲಾಗುವ ಅನುದಾನವನ್ನು ನೆರೆ ಪೀಡಿತ ಪ್ರದೇಶಗಳಲ್ಲಿರುವ ಪರಿಶಿಷ್ಟರ ಪುನರ್ವಸತಿಗೆ ಬಳಕೆ ಮಾಡುವಂತೆ ತಿಳಿಸಿದರು.

Advertisement

ಸಹಕಾರ ಇಲಾಖೆಯು ಪರಿಶಿಷ್ಟರನ್ನು ಪಿಕೆಪಿಎಸ್‌ ಸಂಘಗಳ ಸದಸ್ಯರನ್ನಾಗಿಸಬೇಕು. ಕಂದಾಯ ಇಲಾಖೆಯಿಂದ ದಾಖಲಾತಿ ಪಡೆದು ಎಲ್ಲರನ್ನೂ ಸದಸ್ಯರನ್ನಾಗಿಸಬೇಕು. ಹಮಾಲಿಗಳಿಗೆ ಮನೆ ನಿರ್ಮಿಸಿ ಕೊಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇಲಾಖೆ ಬಳಸದ ಹಣ ಬೇರೆಡೆಗೆ ವಿನಿಯೋಗ: ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕಾರಜೋಳ, ಪ್ರಸಕ್ತ ಹಣಕಾಸು ವರ್ಷದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರ ಕಲ್ಯಾಣಕ್ಕಾಗಿ 21,600 ಕೋಟಿ ರೂ., ಪರಿಶಿಷ್ಟ ಪಂಗಡದ ಸಮುದಾಯದವರ ಕಲ್ಯಾಣಕ್ಕೆ 8,800 ಕೋಟಿ ರೂ.ಅನುದಾನ ಕಾಯ್ದಿರಿಸಲಾಗಿದೆ. ಭೂರಹಿತ ಪರಿಶಿಷ್ಟ ಜಾತಿ, ಪಂಗಡದವರಿಗೆ ಭೂಮಿ ಗುರುತಿಸಿ ಹಂಚಿಕೆ ಮಾಡಲು 200 ಕೋಟಿ ರೂ.ಅನುದಾನ ಒದಗಿಸಲಾಗಿದೆ.

ಯಾವ ಇಲಾಖೆಯಲ್ಲಿ ಯೋಜನೆಯಡಿ ಅನುದಾನ ಬಳಸುವುದಿಲ್ಲವೋ ಆ ಹಣವನ್ನು ಬೇರೆಡೆ ಬಳಸಲು ಚಿಂತಿಸಲಾಗಿದೆ ಎಂದು ತಿಳಿಸಿದರು. ಸೆ.16ರಂದು ಎಸ್‌ಸಿಪಿ- ಟಿಎಸ್‌ಪಿಗೆ ಸಂಬಂಧಪಟ್ಟ ರಾಜ್ಯ ಪರಿಷತ್‌ ಸಭೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಈ ಸಭೆ ನಡೆಸಲಾಗಿದೆ ಎಂದರು. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ ನಾಯಕ್‌ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next