Advertisement
ಭೀಮಾ ಪ್ರವಾಹ ಉಕ್ಕಿ ಬೆಳೆಯಲ್ಲಾ ಕೊಚ್ಚಿಹೋಗಿದ್ದು, ಚಿತ್ತಾಪುರ ತಾಲೂಕಿನ ನಾಲವಾರ ಹಾಗೂ ವಾಡಿ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಅತಿವೃಷ್ಟಿ ಹೊಡೆತಕ್ಕೆ ರೈತರ ಬದುಕು ಸಾಲದ ಶೂಲವೇರಿದೆ. ಪ್ರವಾಹ ಸಂಕಷ್ಟದ ನಡುವೆಯೂ ಲಾಡ್ಲಾಪುರ, ಅಳ್ಳೊಳ್ಳಿ, ಅಣ್ಣಿಕೇರಾ, ಸನ್ನತಿ, ಉಳಂಡಗೇರಾ, ಯರಗೋಳ ಹಾಗೂ ಇನ್ನಿತರ ಗುಡ್ಡಗಾಡು ಪ್ರದೇಶಗಳ ಗ್ರಾಮಗಳ ರೈತರು ಬಹುತೇಕ ಶೇಂಗಾ ಬಿತ್ತನೆ ಮಾಡಿದ್ದು, ಮಳೆ ಕೊರತೆಗೆ ಧೃತಿಗೆಡದ ಅನ್ನದಾತರಿಗೆ ನೀರಾವರಿ ಬೇಸಾಯ ಕೈಹಿಡಿದಿದೆ.
Related Articles
Advertisement
ಮಳೆಯ ಭರವಸೆ ಕೈಬಿಟ್ಟು ಕೊಳವೆ ಬಾವಿಯ ಅಂತರ್ಜಲದ ಬಳಕೆಯಿಂದ ಶೇಂಗಾ ಕೃಷಿಯಲ್ಲಿ ತೊಡಗಿರುವ ರೈತರಿಗೆ ನಿರಂತರ ವಿದ್ಯುತ್ ಸೌಲಭ್ಯ ಗಗನಕುಸುಮವಾಗಿದ್ದು, ಬೆಳೆಗೆ ಹೊಡೆತ ಬಿದ್ದಿದೆ. ಜೆಸ್ಕಾಂ ಇಲಾಖೆ ಸಮರ್ಪಕವಾಗಿ ವಿದ್ಯುತ್ ನೀಡದ ಕಾರಣ ಶೇಂಗಾ ಬೆಳೆಗಳು ಬಾಡುವ ಹಂತಕ್ಕೆ ತಲಪಿವೆ. ದಿನಕ್ಕೆ ಕೇವಲ ಅರ್ಧ ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದು, ಬೆಳೆ ಕಾಪಾಡುವುದು ಕಷ್ಟವಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಹಗಲು ಹೊತ್ತು ನೀಡಲಾಗುತ್ತಿರುವ 2-ಫೇಸ್ ವಿದ್ಯುತ್ ಯಾವುದಕ್ಕೂ ಸಾಲುತ್ತಿಲ್ಲ. ರಾತ್ರಿ ವೇಳೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದ್ದು, ರಾತ್ರಿ ಕೊರೆಯುವ ಚಳಿಯಲ್ಲಿ ಹೊಲಕ್ಕೆ ಹೋಗಿ ಬೆಳೆಗೆ ನೀರುಣಿಸಬೇಕಾದ ದುಸ್ಥಿತಿ ಬಂದಿದೆ. ಜೆಸ್ಕಾಂ ಇಲಾಖೆ ಅಧಿ ಕಾರಿಗಳು ನೀರಾವರಿ ಕೃಷಿ ನೆಚ್ಚಿರುವ ರೈತರ ಗೋಳಾಟಕ್ಕೆ ಕಾರಣವಾಗಿದ್ದು, ಲಾಡ್ಲಾಪುರ ವಲಯದ ಮಸಾರಿ ಭೂಮಿಯ ಅನ್ನದಾತರು ಪರದಾಡುವಂತಾಗಿದೆ.
ನಮ್ಮೂರ ಪರಿಸರದಲ್ಲಿ ಮಸಾರಿ ಭೂಮಿಯೇ ರೈತರ ಜೀವನಾಡಿ. ಎಷ್ಟು ನೀರು ಹರಿಸಿದರೂ ನೆಲ ಹಸಿಯಾಗುವುದಿಲ್ಲ. ಬೆಳೆ ಕಾಪಾಡಲು ನಿರಂತರವಾಗಿ ನೀರುಣಿಸಬೇಕಾಗುತ್ತದೆ. ತೊಗರಿ ಮತ್ತು ಶೇಂಗಾ ನಮ್ಮ ಪ್ರಮುಖ ಬೆಳೆ. ಮಳೆಯಂತೂ ಈಗ ಸಾಧ್ಯವಿಲ್ಲ. ಬೋರ್‌ವೆಲ್ ನೀರು ನಂಬಿ ಕೃಷಿಗೆ ಮುಂದಾಗಿದ್ದೇವೆ. ಸ್ಪಿಂಕ್ಲರ್ ಸಹಾಯದಿಂದ ಶೇಂಗಾ ಫಸಲಿಗೆ ಜೀವಕಳೆ ಬಂದಿದೆ. ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ ಸೌಲಭ್ಯ ದೊರೆತರೆ ಬಂಗಾರದ ಬೆಳೆ ಬೆಳೆಯುತ್ತೇವೆ. ಆದರೆ ನಮ್ಮ ಭಾಗದಲ್ಲಿ ಪರಿಸ್ಥಿತಿ ಹಾಗಿಲ್ಲ. ನಿರಂತರ ವಿದ್ಯುತ್ ಸೌಕರ್ಯದ ಅದೃಷ್ಟ ಇಲ್ಲವಾಗಿದೆ. – ಮಲ್ಲಪ್ಪ ಮಣಿಗಿರಿ, ಲಾಡ್ಲಾಪುರ, ಶೇಂಗಾ ಬೆಳೆದ ರೈತ
-ಮಡಿವಾಳಪ್ಪ ಹೇರೂರ