ಕಲಬುರಗಿ: 50 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಮಹಾನಗರದಲ್ಲಿ ಪ್ಲ್ಯಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧವು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಏಕೆಂದರೆ ಪ್ಲ್ಯಾಸ್ಟಿಕ್ ಬಳಕೆ ವ್ಯಾಪಕವಾಗಿ ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಅಕ್ಟೋಬರ್ ತಿಂಗಳು ಬಂತೆಂದರೆ ಸ್ವತ್ಛತಾ ಅಭಿಯಾನ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ದಾಳಿ ನಡೆಯುತ್ತಲೇ ಇರುತ್ತವೆ. ಅಕ್ಟೋಬರ್ 1ರಿಂದ 31ರವರೆಗೆ ದೇಶದಾದ್ಯಂತ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ಲಾಷ್ಟಿಕ್ ಬಳಕೆ ಹಾಗೂ ಉತ್ಪಾದನಾ ಘಟಕದ ಮೇಲೆ ದಾಳಿ ಹಾಗೂ ಬಳಕೆ ಮಾಡದಿರುವ ಕುರಿತು ನೀಡಲಾದ ಎಚ್ಚರಿಕೆಯು ಅಕ್ಟೋಬರ್ ತಿಂಗಳಿನಲ್ಲಿ ಎರಡು ದಿನಗಳ ಕಾಲ ಕೇಳಿ ಬರುತ್ತದೆ. ಆದರೆ ನಂತರ ಅದರ ಮಾತೇ ಕೇಳಿಬರುವುದಿಲ್ಲ.
ಎಂಟು ಟನ್ ತ್ಯಾಜ್ಯ ಪ್ಲಾಸ್ಟಿಕ್ ಉತ್ಪಾದನೆ: ಕಲಬುರಗಿ ಮಹಾನಗರದಲ್ಲಿ ದಿನಾಲು ಎಂಟು ಟನ್ ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಇದರಲ್ಲಿ ಅರ್ಧದಷ್ಟು ತ್ಯಾಜ್ಯ ಮರು ಬಳಕೆ ಮಾಡಬಹುದು. ಇಷ್ಟೊಂದು ಪ್ಲಾಸ್ಟಿಕ್ ತ್ಯಾಜ್ಯ ನಿರ್ಮಾಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಪ್ಲ್ಯಾಸ್ಟಿಕ್ ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಬೇಕಿರುವ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಜವಾಬ್ದಾರಿಯನ್ನು ಸಂಪೂರ್ಣ ಮರೆತಿದೆ. ತ್ಯಾಜ್ಯದಿಂದ ರೋಗಗಳ ಉಲ್ಬಣ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ವ್ಯಾಪಕ ಪ್ಲ್ಯಾಸ್ಟಿಕ್ ಬಳಕೆಯಿಂದ ಜನರ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ತಡೆಯುವ ನಿಟ್ಟಿನಲಿ ಮಾಸಾಚರಣೆ ಹಾಗೂ ಗಾಂಧಿ ಜಯಂತಿಯ ಸ್ವಚ್ಛತಾ ಆಂದೋಲನ ಬಂದಾಗ ಪ್ಲ್ಯಾಸ್ಟಿಕ್ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಲಾಗುತ್ತದೆ. ತದನಂತರ ಸಂಪೂರ್ಣ ಮರೆಯಲಾಗುತ್ತಿದೆ. ಹೀಗಾಗಿ ಪ್ಲಾಷ್ಟಿಕ್ ನಿಷೇಧ ಕಾಗದದಲ್ಲಿ ಮಾತ್ರ ಎನ್ನುವಂತಾಗಿದೆ.
ಈ ಹಿಂದೆ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಪ್ಲ್ಯಾಸ್ಟಿಕ್ ತಯಾರಿಕಾ ನಕಲಿ ಘಟಕಗಳಿದ್ದವು ಎನ್ನಲಾಗುತ್ತಿತ್ತು.
ಆದರೆ ಅವುಗಳಲ್ಲಿ ಕೆಲವು ಬಂದಾಗಿವೆ. ಆದರೀಗ ಹೈದ್ರಾಬಾದ್‌ನಿಂದ ಪ್ಲಾಸ್ಟಿಕ್ ಆಗಮಿಸುತ್ತಿದ್ದು, ಇದನ್ನು ತಡೆಯುವುದರ ಜತೆಗೆ ಸಣ್ಣ-ಸಣ್ಣ ವ್ಯಾಪಾರಸ್ಥರು ಹಾಗೂ ಹೋಟೆಲ್‌ಗಳಲ್ಲಿ ಬಳಕೆ ಮಾಡುತ್ತಿರುವುದನ್ನು ತಡೆಗಟ್ಟಬೇಕಿದೆ. ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿರುವ ಕುರಿತು ಕೇಂದ್ರ ಸರ್ಕಾರ ಮಾಡಿರುವ ಪಟ್ಟಿಯಲ್ಲಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ ಜತೆಗೆ ಕಲಬುರಗಿ ಜಿಲ್ಲೆಯೂ ಸೇರಿದೆ. ಹೀಗಾಗಿ ಚಿಂತನೆ ಮಾಡಿ ದೃಢ ಹೆಜ್ಜೆ ಇಡುವುದು ಅಗತ್ಯವಿದೆ. ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್ ಅಂಶ ಸೇರಿದ್ದರಿಂದ ಅದನ್ನು ಉಪಯೋಗಿಸುವವರು ರೋಗಕ್ಕೆ ತುತ್ತಾಗಬಹುದಾಗಿದೆ ಎನ್ನುವ ಎಚ್ಚರಿಕೆ ನೀಡಿದ್ದರೂ ಯಾರೂ ಜಾಗೃತವಾಗುತ್ತಿಲ್ಲ.
ಪಾಲಿಕೆ ಅಧಿಕಾರಿಗಳು ಪ್ಲಾಸ್ಟಿಕ್ ಉತ್ಪಾದನಾ ಘಟಕ ಹಾಗೂ ಪ್ಲಾಸ್ಟಿಕ್ ದಾಸ್ತಾನು ಮೇಲೆ ದಾಳಿ ನಡೆಸಿದರೆ ಜನಪ್ರತಿನಿಧಿಗಳು ಅಡ್ಡ ಬಂದು, ಅವರು ನಮ್ಮವರೇ ಇದ್ದಾರೆ ನೋಡ್ರೀ ಎನ್ನುತ್ತಿರುವುದೇ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಹಿನ್ನೆಡೆಯಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ನಿಟ್ಟಿನಲ್ಲಿ ಕಾರ್ಯಾಚರಣೆಗಾಗಿ ಪಾಲಿಕೆಯಿಂದ ಮೂರು ತಂಡಗಳನ್ನು ಈಗಷ್ಟೇ ರಚಿಸಲಾಗಿದೆ. ಇನ್ಮುಂದೆ ದಾಳಿ ನಡೆಯಲಿದೆ. ಪ್ಲಾಸ್ಟಿಕ್ ತಯಾರಿಸುವ ಘಟಕಗಳಿದ್ದರೆ ಎಫ್ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ. ಹೈದ್ರಾಬಾದ್‌ದಿಂದ ಬರಲಾಗುತ್ತಿದೆ ಎನ್ನಲಾಗುತ್ತಿರುವ ಪ್ಲಾಸ್ಟಿಕ್‌ನ್ನು ಗಡಿಯಲ್ಲೇ ತಡೆಯುವಂತೆ ಪೊಲೀಸರಿಗೆ ತಿಳಿಸಲಾಗಿದೆ. ಒಟ್ಟಾರೆ ಪ್ಲಾಸ್ಟಿಕ್ ಬಳತೆ ತಡೆಗಟ್ಟಲು ಸಣ್ಣ-ಸಣ್ಣ ವ್ಯಾಪಾರಸ್ಥರು, ಹೋಟೆಲ್ ಮಾಲೀಕರು ಹಾಗೂ ಸಾರ್ವಜನಿಕರು ಕೈ ಜೋಡಿಸಬೇಕು.
ಸ್ನೇಹಲ್ ಲೋಕಂಡೆ, ಪಾಲಿಕೆ ಆಯುಕ್ತ